ರೈಲ್ವೆ ಖಾಸಗೀಕರಣ ಹಿಂಪಡೆಗೆ ಎಐಯುಟಿಯುಸಿ ಆಗ್ರಹ

ರೈಲ್ವೆ ಖಾಸಗೀಕರಣ ಹಿಂಪಡೆಗೆ ಎಐಯುಟಿಯುಸಿ ಆಗ್ರಹ

ದಾವಣಗೆರೆ, ಆ.1- ರೈಲ್ವೆ ಖಾಸಗೀಕರಣವನ್ನು ಹಿಂತೆಗೆದುಕೊಳ್ಳ ಬೇಕೆಂಬುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿಂದು ಎಐಯುಟಿ ಯುಸಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಂತರ ರೈಲ್ವೆ ನಿಲ್ದಾಣ ವ್ಯವಸ್ಥಾಪಕರ ಮುಖಾಂತರ ಕೇಂದ್ರ ರೈಲ್ವೆ ಮಂತ್ರಿಗಳಿಗೆ ಬೇಡಿಕೆಗಳುಳ್ಳ ಮನವಿ ಸಲ್ಲಿಸಲಾಯಿತು.

ರೈಲ್ವೇ ಇಲಾಖೆಯು ಭಾರತದಲ್ಲಿ ಅತಿದೊಡ್ಡ ಸಾರ್ವಜನಿಕ ಸಂಸ್ಥೆಯಾಗಿದ್ದು, ಸಾರ್ವಜನಿಕರ ಹಣದಿಂದ ಸ್ಥಾಪಿಸಲಾದ ಈ ಇಲಾಖೆಯು ರಾಷ್ಟ್ರೀಯ ಆಸ್ತಿಯಾಗಿದೆ. ಈ ಸಾರ್ವಜನಿಕ ಸಂಪತ್ತನ್ನು ಖಾಸಗಿ ಬಂಡವಾಳಗಾರರಿಗೆ ಹಸ್ತಾಂತರಿಸಲು ಯಾವುದೇ ರಾಜಕೀಯ  ಪಕ್ಷಕ್ಕೆ ಆಳುವ ಪಕ್ಷಕ್ಕೆ ಅಧಿಕಾರವಿಲ್ಲ. ರೈಲ್ವೇ ಖಾಸಗೀಕರಣದ ಪರಿಣಾಮವಾಗಿ ರೈಲ್ವೇ ಟಿಕೆಟ್ ದರಗಳು ಗಣನೀಯವಾಗಿ ಹೆಚ್ಚಿಸಿ ಬಹುಸಂಖ್ಯಾತ ಜನಸಾಮಾನ್ಯರಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ರೈಲ್ವೇ ಇಲಾಖೆಯನ್ನು ಕಟ್ಟಿ ಬೆಳೆಸಲು ಲಕ್ಷಾಂತರ ಉದ್ಯೋಗಿಗಳ ಶ್ರಮ ಹಾಗೂ ಸಾರ್ವಜನಿಕರ ಪಾಲು ಇದೆ. ಈಗ ಲಾಭ ಗಳಿಸುವ ಒಂದೇ ಉದ್ದೇಶದಿಂದ ಖಾಸಗಿಯವರಿಗೆ ಕೊಡಲಾಗುತ್ತಿದೆ. ಪ್ರಧಾನಿಯವರು ರೈಲ್ವೇ ಇಲಾಖೆಯನ್ನು ಖಾಸಗಿಯವರಿಗೆ ಕೊಡುವುದಿಲ್ಲ ಎಂದು ಸಂಸತ್ತಿನಲ್ಲಿ ಮೂರು ಬಾರಿ ಹೇಳಿದರು. ಇತ್ತೀಚೆಗೆ ಸ್ವಾವಲಂಬನೆ ಮಂತ್ರ ಪಠಿಸುತ್ತಾ ಅತ್ಯಂತ ಲಾಭದಾಯಕ ರೈಲ್ವೇ ಇಲಾಖೆಯನ್ನು ಖಾಸಗಿ ಲಾಭಕೋರ ಬಂಡವಾಳಗಾರರಿಗೆ ಧಾರೆ ಎರೆಯಲು ಯೋಜನೆ ರೂಪಿಸಿದ್ದಾರೆ. ಕೇಂದ್ರ ಸರ್ಕಾರವು ಈ ಜನವಿರೋಧಿ ನೀತಿಯನ್ನು ಕೈಬಿಡಬೇಕೆಂದು ಪ್ರತಿಭಟನಾಕಾರರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಕೈದಾಳೆ, ಜಿಲ್ಲಾ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಣಬೇರು, ಪ್ರಕಾಶ್, ಭಾರತಿ ಸೇರಿದಂತೆ ಜಿಲ್ಲಾ ಸಂಘಟನಾಕಾರರು ಇದ್ದರು.

Leave a Reply

Your email address will not be published.