ಕಂದಾಯ ಭೂಮಿ ಅತಿಕ್ರಮಣ ತೆರವು ಗೊಳಿಸಿ ವಿವಿಧ ಬಗೆಯ ಸಸಿಗಳನ್ನು ನೆಟ್ಟ ಅರಣ್ಯ ಇಲಾಖೆ

ಕಂದಾಯ ಭೂಮಿ ಅತಿಕ್ರಮಣ ತೆರವು ಗೊಳಿಸಿ ವಿವಿಧ ಬಗೆಯ ಸಸಿಗಳನ್ನು ನೆಟ್ಟ ಅರಣ್ಯ ಇಲಾಖೆ

ಹರಪನಹಳ್ಳಿ, ಜು. 30 – ಕಂದಾಯ ಇಲಾಖೆಯ ಭೂಮಿಯನ್ನು ಸಾಗುವಳಿದಾರರಿಂದ ತೆರವು ಗೊಳಿಸಲು ಅಧಿಕಾರಿಗಳು ಮುಂದಾದಾಗ ಸಾಗುವಳಿ ರೈತರು ಪ್ರತಿರೋಧ ವ್ಯಕ್ತಪಡಿಸಿ, ವಿಷ ಸೇವನೆಗೆ ಯತ್ನ, ವಾಗ್ವಾದ ನಡೆದು ಅಂತಿಮವಾಗಿ ರೈತರ ಮನವೊಲಿಸಿ ಸಸಿ ನೆಟ್ಟ ಘಟನೆ ತಾಲ್ಲೂಕಿನ ನಾರಾಯಣಪುರ ಗ್ರಾಮದ ಬಳಿ ಜರುಗಿದೆ.

ನಾರಾಯಣಪುರ ಗ್ರಾಮದ ಸರ್ವೆ ನಂ.1 ರಲ್ಲಿ 120 ಎಕರೆ ಕಂದಾಯ ಭೂಮಿಯಲ್ಲಿ 90 ಎಕರೆ ಜಮೀನನ್ನು ಯಲ್ಲಾಪುರ ಕೊರಚರ ಹಟ್ಟಿಯ 80 ಕುಟುಂಬದವರು ಅಕ್ರಮವಾಗಿ ಸಾಗುವಳಿ ಮಾಡಲು ಸಿದ್ಧತೆ ನಡೆಸಿದ್ದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಯವರ ಮೌಖಿಕ ಆದೇಶದ ಮೇರೆಗೆ ಪೋಲಿಸರು, ಅರಣ್ಯ ಇಲಾಖೆಯವರು, ಕಂದಾಯ ಅಧಿಕಾರಿಗಳು ಅಲ್ಲಿಗೆ ತೆರಳಿದ್ದರು. ಅರಣ್ಯ ಇಲಾಖೆಯ ಸಹಕಾರದಿಂದ ಆ ಒತ್ತುವರಿ ಜಮೀನಿನಲ್ಲಿ ಗುಂಡಿ ತೋಡಿ ಸಸಿ ನೆಟ್ಟು ಹಸಿರೀಕರಣ ಮಾಡಲು ಜೆಸಿಬಿ ಯಂತ್ರಗಳ ಸಮೇತ ಹೋಗಿ, ಗುಂಡಿ ತೆಗೆಯಲು ಆರಂಭವಾದಾಗ ಸಾಗುವಳಿಗೆ ಸಿದ್ದತೆ ಕೈಗೊಂಡಿದ್ದ ರೈತರು ಆಗಮಿಸಿ ಅಧಿಕಾರಿಗಳ ಜೊತೆ ವಾಗ್ವಾದಕ್ಕಿಳಿದರು. 

ಒಂದು ಹಂತದಲ್ಲಿ  ಕೆಲ ಮಹಿಳಾ ಹಾಗೂ ಪುರುಷ ರೈತರು ಮನೆಯಿಂದ ತಂದಿದ್ದ  ಕೀಟ ನಾಶಕ ಸೇವಿಸುವ ಹೈಡ್ರಾಮ ನಡೆಸಿದಾಗ ಪೋಲಿಸರು ಆ ಯತ್ನವನ್ನು ವಿಫಲಗೊಳಿಸಿದರು.  ನಂತರ ರೈತರು 80 ಕುಟುಂಬಗಳಿಗೆ ಭೂಮಿ ಇಲ್ಲ, ಕೊನೆಗೆ ಎರಡು ಎಕರೆಯನ್ನಾದರೂ ನಮಗೆ ನೀಡಿ ಬದುಕಲು ಬಿಡಿ, ನಮಗೆ ದುಡಿಮೆ ಇಲ್ಲ ಎಂದು ಉಪವಿಭಾಗಾಧಿಕಾರಿಯವರನ್ನು ವಿನಂತಿಸಿದರು.

ಆಗ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್ ಮಾತನಾಡಿ, 2005ರಲ್ಲಿ ಅಥವಾ ಅದಕ್ಕೂ ಹಿಂದೆ  ಭೂಮಿ ಸಾಗುವಳಿ ಮಾಡಿಕೊಂಡು, ಫಾರಂ ನಂ. 50ರಲ್ಲಿ ಅರ್ಜಿ ಹಾಕಿರಬೇಕು, ಆಗ ಶಾಸಕರ ನೇತೃತ್ವದ ಸಮಿತಿ ಭೂಮಿ ಮಂಜೂರು ಮಾಡುತ್ತದೆ. ಆದ್ದರಿಂದ ಕೆಲಸಕ್ಕೆ ಅಡ್ಡಿ ಮಾಡಬೇಡಿ, ನಮಗೆ ಸಹಕಾರ ನೀಡಿ. ನೀವು ಅರ್ಜಿ ಹಾಕಿದರೆ ಪಕ್ಕಾ ಕೊಡಿಸುತ್ತೇವೆ ಎಂದು ಮನವೊಲಿಸಿದಾಗ ರೈತರು ಸುಮ್ಮನಾದರು.

ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸೂಕ್ತ ಬಂದೋಬಸ್ತ್ ನಲ್ಲಿ 7 ಜೆಸಿಬಿಗಳ ಮೂಲಕ ಸಸಿ ನಾಟಿ ಮಾಡಲು ಅರಣ್ಯ ಇಲಾಖೆಯವರು ಮುಂದಾಗಿದ್ದಾರೆಂದು ರೈತರು ಆರೋಪಿಸಿದರು. ಈ ವೇಳೆ ಸಸಿ ನಾಟಿ ಮಾಡುತ್ತಿದ್ದ ಜೆಸಿಬಿ ಯಂತ್ರದ ಬಳಿ ಸಾಗುವಳಿ ಮಾಡಿದ ರೈತರು ಪ್ರಾಣವನ್ನಾದರು ಬಿಟ್ಟೇವು, ಉಳುಮೆ ಮಾಡಿದ ಭೂಮಿಯನ್ನು ಬಿಡುವುದಿಲ್ಲವೆಂದು ಜೆಸಿಬಿಗೆ  ಅಡ್ಡಲಾಗಿ ಮಲಗಲು ರೈತರು ಮುಂದಾದಾಗ  ಸಿಪಿಐ ಕೆ. ಕುಮಾರ್, ರೈತರಿಗೆ ತಿಳಿ ಹೇಳಿ ಸರ್ಕಾರದ ಆದೇಶದ ಮೇರೆಗೆ ಈ ಭೂಮಿ ಯನ್ನು ಹಸಿರೀಕರಣ ಗೊಳಿಸಲು ಗಿಡಗಳನ್ನು ನೆಡುತ್ತಿದ್ದೇವೆ. ಈ ಭೂಮಿಯನ್ನು ಉಳುಮೆ ಮಾಡಿದವರು ತಮ್ಮ ಬಳಿ ಅಗತ್ಯ ದಾಖಲೆಗಳಿದ್ದರೆ ತೋರಿಸಿ, ಅವುಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ. ನಮ್ಮ ಕಾರ್ಯಕ್ಕೆ ಅಡ್ಡಿ ಪಡಿಸಿದರೆ
ನಿಮ್ಮ ಮೇಲೆ ಕ್ರಮ ಜರುಗಿಸಬೇಕಾಗುತ್ತದೆ ಎಂದರು.

ವಲಯ ಅರಣ್ಯಾಧಿಕಾರಿ ಭರತ್ ಡಿ.ತಳವಾರ್ ಮಾತನಾಡಿ, ಬಳ್ಳಾರಿ ಜಿಲ್ಲಾ ಅಧಿಕಾರಿಗಳು, ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಸರ್ಕಾರದ ಭೂಮಿಯನ್ನು ಸರ್ಕಾರಕ್ಕೆ ಉಳಿಸುವ ಉದ್ದೇಶದಿಂದ 120 ಎಕರೆಯಲ್ಲಿ  ಕಮರ, ಉದಯ, ಸಿಮಾರೂಬ, ಹೊಂಗೆ ಸೇರಿದಂತೆ  ವಿವಿಧ ಜಾತಿಯ ವೇಗವಾಗಿ ಬೆಳೆಯುವ ಗಿಡಗಳನ್ನು ನಾಟಿ ಮಾಡಿ ಹಸಿರೀಕರಣಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.

ತಹಶೀಲ್ದಾರ್ ಅನಿಲ್ ಕುಮಾರ್, ಪಿಎಸ್ಐ.
ಪ್ರಕಾಶ್, ಲತಾ ತಾಳೇಕರ್, ಕಿರಣಕುಮಾರ್ ಇತರರು
ಹಾಜರಿದ್ದರು.                                                                                                                                      

Leave a Reply

Your email address will not be published.