ಖಾಸಗಿ ಆಸ್ಪತ್ರೆಗಳಲ್ಲಿ ಮರೆಯಾದ ಮಾನವೀಯತೆ

ಹೆಚ್ಚುತ್ತಲೇ ಇರುವ ಕೊರೊನಾ ಸೋಂಕು. ತುಸು ಸೀನು, ಕೆಮ್ಮು, ಜ್ವರ ಬಂದರೂ ಹೆಚ್ಚುವ ಆತಂಕ. ರೋಗಿಗಳ ಅಳಲಿಗೆ ಕ್ಯಾರೇ ಎನ್ನದ ಖಾಸಗಿ ಆಸ್ಪತ್ರೆಗಳು, ಬದುಕುವಂತಿದ್ದರೂ ರೋಗಿಗಳನ್ನು ಸಾವಿನಂಚಿಗೆ ತಳ್ಳುತ್ತಿರುವ ಭಯದ ಭೂತ !

ಹೌದು, ಸದ್ಯದ ಪರಿಸ್ಥಿತಿಯಲ್ಲಿ ದಾವಣಗೆರೆಯ ಚಿತ್ರಣವಿದು. ಒಂದೆಡೆ ಕಳೆದ ವಾರದಿಂದ ಸೋಂಕಿರ ಸಂಖ್ಯೆ ಶತಕದ ಆಚೆ ಈಚೆ ಎಂದು ಸಾಗುತ್ತಲೇ ಇದೆ. ಸೋಂಕಿತರನ್ನು ಕರೆ ತಂದು ಆಸ್ಪತ್ರೆಗಳಲ್ಲಿ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಬಿಡುವ ಪ್ರಕ್ರಿಯೆಯೂ ನಡೆಯುತ್ತಿದೆ.

ಇತ್ತ ಹಳ್ಳಿಗಳಲ್ಲೂ ಕೋವಿಡ್ ಸೋಂಕು ತನ್ನ ಹಸ್ತಗಳನ್ನು ಚಾಚುತ್ತಲೇ ಇದೆ. ನಗರದ ಸುದ್ದಿಗಳನ್ನು ನೋಡಿ ಭಯಪಡುತ್ತಿದ್ದ ಹಳ್ಳಿಗರು. ಇದೀಗ ತಮ್ಮ ಊರಿನಲ್ಲಿಯೇ ಸೋಂಕಿತರು ಪತ್ತೆಯಾಗುತ್ತಿರುವುದು ಕಂಡು ಬೆಚ್ಚಿ ಬೀಳಲಾರಂಭಿಸಿದ್ದಾರೆ.

ಸೋಂಕಿತರ ಸಂಖ್ಯೆಯ ಏರಿಕೆ ಓಟ ಒಂದುಕಡೆಯಾದರೆ, ಇತ್ತ ಚಿಕಿತ್ಸೆಯ ಬಗ್ಗೆಯೂ ಹಲವಾರು ಸಮಸ್ಯೆಗಳು ನಿರ್ಮಾಣಗೊಂಡಿವೆ.

ಸೋಂಕಿತರಿಗೆ ಸಮರ್ಪಕವಾಗಿ ಪೌಷ್ಠಿಕ ಆಹಾರವಿರಲಿ. ಕೆಲವೆಡೆ ನೀರನ್ನೂ ಸಹ ಕೊಟ್ಟಿಲ್ಲ ಎಂದು ಪ್ರತಿಭಟನೆಗಳು ಆರಂಭವಾಗಿವೆ. ಚಪಾತಿ ರೀತಿ ಇರುವ ಚಪಾತಿಯನ್ನು ಕೊಡಲಾಗುತ್ತಿದೆ ಎಂದು ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿದ್ದ ಸೋಂಕಿತರೊಬ್ಬರು ಪತ್ರಿಕೆಯೊಂದಿಗೆ ಅಳಲು ತೋಡಿಕೊಂಡಿದ್ದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಸಿಗದ ಕಾರಣ, ಕೋವಿಡ್ ಕೇರ್ ಸೆಂಟರ್‌ಗೆ ನಮ್ಮನ್ನು ತಂದು ಬಿಡಲಾಗಿದೆ. ಆದರೆ ಇಲ್ಲಿ ಸರಿಯಾದ ಆಹಾರ, ಚಿಕಿತ್ಸೆಯೇ ಇಲ್ಲ. ಕೊರೊನಾ ಗುಣವಾಗಲು ಪೌಷ್ಠಿಕ ಆಹಾರದ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದದ್ದು ಅಗತ್ಯ. ಆದರೆ ಇಲ್ಲಿ ಅದೇ ಇಲ್ಲ ಎಂದು ಬೇಸರಿಸಿಕೊಳ್ಳುತ್ತಾರೆ ಸೋಂಕಿತ ವ್ಯಕ್ತಿ.

ಇದು ಸೋಂಕಿತ ವ್ಯಕ್ತಿಗಳ ಚಿಕಿತ್ಸೆ ಕುರಿತು ಕಥೆಯಾದರೆ,  ಕೊರೊನಾ ಸೋಂಕು ಇಲ್ಲದ ವ್ಯಕ್ತಿಗಳ ಪಡಿಪಾಟಲಂತೂ ನಗರದಲ್ಲಿ ಹೇಳತೀರದಾಗಿದೆ.

ಪ್ರಸ್ತುತ ಸಂದರ್ಭದಲ್ಲಿ ಮಾನವೀಯತೆ ಮೆರೆಯಬೇಕಾದ ನಗರದ ಕೆಲ ಖಾಸಗಿ ಆಸ್ಪತ್ರೆಗಳು ಅಮಾನುಷ ವರ್ತನೆ ಪ್ರದರ್ಶಿಸುತ್ತಿವೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವುದಂತೂ ದೂರದ ಮಾತು. ಆದರೆ ನಾನ್ ಕೋವಿಡ್ ರೋಗಿಗಳ ಅಳಲಿಗೂ ಕ್ಯಾರೇ ಎನ್ನುತ್ತಿಲ್ಲ. ವೆಂಟಿಲೇಟರ್ ಇಲ್ಲ, ಬೆಡ್ ಇಲ್ಲ ಎಂಬ ನೆಪಗಳನ್ನು ಹೇಳಿ ರೋಗಿಗಳನ್ನು ಸಾಗ ಹಾಕುತ್ತಿವೆ.

ಇದರಿಂದಾಗಿ ಕೋವಿಡ್ ಹೊರತಾದ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಈ ವೇಳೆ ಸಮರ್ಪಕವಾಗಿ ಚಿಕಿತ್ಸೆ ಸಿಗದೆ ಹಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ. 

ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿಕೊಳ್ಳಲು ಬೆಡ್‌ಗಳ ಅಭಾವ ತಲೆ ದೋರಿದೆ. ಬೆಡ್ ಖಾಲಿ ಇಲ್ಲ ಎಂಬ ಉತ್ತರ ಇಲ್ಲಿ ಸಾಮಾನ್ಯ. ಈಗಾಗಲೇ ದಾಖಲಾದ ರೋಗಿ ಡಿಸ್ಜಾರ್ಜ್ ಆಗುವ ಮೊದಲೇ ಆ ಬೆಡ್‌ ಮತ್ತೊಬ್ಬರಿಗೆ ಬುಕ್ ಆಗಿರುತ್ತದೆ. ಅದು ಗಣ್ಯ ವ್ಯಕ್ತಿಗಳ ಅಥವಾ ಉನ್ನತ ಅಧಿಕಾರಿಗಳ ಶಿಫಾರಸ್ಸಿನ ಮೇಲೆ ಎಂದರೆ ನಂಬಲೇ ಬೇಕು.  ಶಿಫಾರಸ್ಸು ಅಥವಾ ಹಣ ಇಲ್ಲದ ರೋಗಿಗಳ ಗತಿ ಅಧೋಗತಿ. ಇಂತಹ ವಾತಾವರಣದಲ್ಲಿ ಬದುಕಿ ಬಾಳಬೇಕಾದ ಅನೇಕರು ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 

ಮಾಜಿ ಪಾಲಿಕೆ ಸದಸ್ಯರೊಬ್ಬರ ಸಂಬಂಧಿ ಅನಾರೋಗ್ಯಕ್ಕೆ ತುತ್ತಾದಾಗ ಬೆಡ್‌ಗಳ ಕೊರತೆ ಉಂಟಾಯಿತು. ಬೆಳಿಗ್ಗೆಯಿಂದ ಐದಾರೂ ಆಸ್ಪತ್ರೆಗಳಿಗೆ ಅಲೆದಾಡಿ, ಕೊನೆಗೆ ಗಣ್ಯರೊಬ್ಬರ ಶಿಫಾರಸ್ಸಿನ ಮೇಲೆ ನಾನ್ ಕೋವಿಡ್ ರೋಗಿಯಾದ ಇವರನ್ನು ಚಿಕಿತ್ಸೆಗೆ ಆಸ್ಪತ್ರೆಯೊಂದರಲ್ಲಿ ದಾಖಲಿಸಿಕೊಳ್ಳಲಾಯಿತು. ಆಗ ವೈದ್ಯರು ಹೇಳಿದ್ದಿಷ್ಟು `ಒಂದು ತಾಸು ಮುಂಚಿತವಾಗಿ ಬಂದಿದ್ದರೆ ಪ್ರಾಣ ಉಳಿಸಬಹುದಿತ್ತು’ ಎಂದು

ಕೋವಿಡ್ ಟೆಸ್ಟ್ ಮೇಲೂ ಅಪ ನಂಬಿಕೆ:  ಇತ್ತ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಒಳಗಾದವರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಗುಣಲಕ್ಷಣಗಳು ಇರದಿದ್ದರೂ ಪಾಸಿಟಿವ್ ವರದಿ ಬರುವ ಸಾಧ್ಯತೆಗಳು ಹೆಚ್ಚಾಗಿರುವುದು ಟೆಸ್ಟ್‌ ನಿರಾಕರಣೆಗೆ ಪ್ರಮುಖ ಕಾರಣ. 

ಬದುಕಿದ್ದಾಗ ರಾಪಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ಬಂದು, ಸತ್ತಾಗ ಪಾಸಿಟಿವ್ ಬಂದು, ಕುಟುಂಬ ವರ್ಗ ಪ್ರತಿಭಟನೆ ನಡೆಸಿದ ಪ್ರಕರಣಗಳು. ಗರ್ಭಿಣಿಯರಿಗೆ ಪಾಸಿಟಿವ್ ಎಂದು ತಪ್ಪಾಗಿ ವರದಿ ಬಂದು. ಮಗುವನ್ನು ದೂರ ಇಟ್ಟು. ಮಗುವಿನ ಪ್ರಾಣವನ್ನೇ ಬಲಿಕೊಟ್ಟ  ಪ್ರಕರಣಗಳಿಗೆ ಸಾಕ್ಷಿಯಾಗಿರುವ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಎಂದರೆ ಜನತೆ ಬೇಡವೇ ಬೇಡ ಎನ್ನುತ್ತಿದ್ದಾರೆ.

ಕೊರೊನಾ ಭಯದ ವಾತಾವರಣದಲ್ಲಿ  ಕೋವಿಡ್ ಹಾಗೂ ನಾನ್ ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳ ಮಾನವೀಯತೆಯ ಸ್ಪಂದನೆ ಸಿಗಲಿ.  ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಲಿ. ಇಲ್ಲದಿದ್ದರೆ ಕೊರೊನಾ ಭಯದಲ್ಲಿಯೇ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾದೀತು.

Leave a Reply

Your email address will not be published.