ಜಗಳೂರು ತಾ|| 53 ಕೆರೆಗೆ ನೀರು ಹರಿಸುವ ಯೋಜನೆಯಲ್ಲಿ ಲೋಪ

ದಾವಣಗೆರೆ, ಜು.27- ತಾಲ್ಲೂಕಿನ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿಯಲ್ಲಿರುವ ಲೋಪಗಳನ್ನು ಶೀಘ್ರವೇ ಸರಿಪಡಿಸಿಕೊಳ್ಳುವಂತೆ ಜೆಡಿಎಸ್ ಮುಖಂಡ ಕೆ.ಬಿ. ಕಲ್ಲೇರುದ್ರೇಶಪ್ಪ ಒತ್ತಾಯಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ 22 ಕೆರೆಗಳಿಗೆ ನೀರು ತುಂಬಿಸುವ  ಯೋಜನೆ ಪೂರ್ಣಗೊಂಡಿದ್ದರೂ ಕೆರೆಗಳಿಗೆ ನೀರು ಹರಿದು ಬರುತ್ತಿಲ್ಲ. ಇದೇ ರೀತಿ 53 ಕೆರೆಗಳ ಯೋಜನೆಯೂ ಆಗಬಾರದು ಎಂದು ಎಚ್ಚರಿಸಿದರು.

53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಂಬಂಧಿಸಿದಂತೆ ಈಗ 5 ಕಿ.ಮೀ. ಕಾಮಗಾರಿ ಆರಂಭವಾಗಿದೆ. ಅದರಲ್ಲಿ ಸಾಕಷ್ಟು ಲೋಪಗಳು ಕಂಡುಬಂದಿವೆ. ಆರಂಭಿಕ ಹಂತದಲ್ಲೇ ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತೊಂದರೆಯಾಗುತ್ತದೆ ಎಂದರು. ಈ  ಬಗ್ಗೆ  ಭಾರೀ ನೀರಾವರಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದೇವೆ. 650 ಕೋಟಿ ಮೊತ್ತದ ದೊಡ್ಡ ಗಾತ್ರದ ಯೋಜನೆ ಇದಾಗಿದ್ದು, ಗುಣಮಟ್ಟದ ಎಚ್‌ಡಿ ಪೈಪ್‌ಗಳನ್ನು ಅಳವಡಿಸಬೇಕು. ಪೈಪ್‌ಗಳ ಸಾಮರ್ಥ್ಯವನ್ನು ಪರೀಕ್ಷಿಸಿದ ನಂತರವೇ ಅಳವಡಿಸಬೇಕು ಎಂದು ಸಲಹೆ ನೀಡಿದರು.

ಯೂರಿಯಾ ಕೃತಕ ಅಭಾವ: ಜಿಲ್ಲೆಯಲ್ಲಿ ರೈತರಿಗೆ ಯೂರಿಯಾ ಸಿಗುತ್ತಿಲ್ಲ. ಯಾವುದೋ ಕಾಣದ ಕೈಗಳು ಕೃತಕ ಅಭಾವ ಸೃಷ್ಟಿಸುತ್ತಿವೆ. ಯೂರಿಯಾ ಇಲ್ಲ ಎಂದು ಹೇಳಿ  ಬೇರೆ ಬೇರೆ ಗೊಬ್ಬರಗಳನ್ನು ಟ್ಯಾಗ್ ಮಾಡುವ ಮೂಲಕ ರೈತರನ್ನು ವಂಚಿಸುತ್ತಿವೆ. ಈ ಕುರಿತು ತನಿಖೆ ನಡೆಸಲು ಜಿಲ್ಲಾಡಳಿತ ಉನ್ನತ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಪತ್‌ಕುಮಾರ್, ಗೋವಿಂದಪ್ಪ, ಸಿದ್ದೇಶ್ ಇದ್ದರು.

Leave a Reply

Your email address will not be published.