ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಂದ ಮನೆಯಿಂದಲೇ ಪ್ರತಿಭಟನೆ

ದಾವಣಗೆರೆ, ಜು.27- ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರು ಪಿಂಚಣಿಗಾಗಿ ಒತ್ತಾಯಿಸಿ ಮನೆಯಿಂದಲೇ ಪ್ರತಿಭಟನೆ ಪ್ರಾರಂಭಿಸಿರುವುದಾಗಿ  ಕರ್ನಾಟಕ ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯ ಸಂಚಾಲಕ ವಿರೂಪಾಕ್ಷಪ್ಪ ಮಂತ್ರೋಡಿ ಹೇಳಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಅವರು, ಬೇರೆ ರಾಜ್ಯ ಸರ್ಕಾರಗಳು ವೇತನದ ಜೊತೆಗೆ ಪಿಂಚಣಿಯನ್ನೂ ನೀಡುತ್ತಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ತಾರತಮ್ಯ ಮಾಡಲಾಗುತ್ತಿದೆ ಎಂದು ಹೇಳಿದರು.

 ಜುಲೈ 31ರವರೆಗೆ ಎಲ್ಲಾ ನೌಕರರು ಮನೆಯಲ್ಲೇ ಕಾರ್ಯ ನಿರ್ವಹಿಸುವಂತೆ ಸರ್ಕಾರ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಕುಟುಂಬದ ಸದಸ್ಯರೊಂದಿಗೆ ಮನೆಯ ಎದುರು ಪ್ರತಿಭಟನೆ ನಡೆಸುತ್ತೇವೆ. ಪ್ರಾಣ ಬಿಟ್ಟೇವು ಪಿಂಚಣಿ ಬಿಡೆವು’ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ 60 ಸಾವಿರ ನೌಕರರಲ್ಲಿ 2500 ಮಂದಿ, ಈ ವರ್ಷ 450 ಮಂದಿ ನೌಕರರು ಬರಿಗೈಯ್ಯಲ್ಲಿ ನಿವೃತ್ತರಾಗಿದ್ದಾರೆ. ಕೆಲವರು ಅಕಾಲಿಕ ಮರಣಕ್ಕೆ ಈಡಾಗಿದ್ದಾರೆ.

ಅನುದಾನಿತ ಶಾಲಾ–ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಬಿಡಿಗಾಸು ಇಲ್ಲದೇ ನಿವೃತ್ತಿ ಹೊಂದಿರುವ ನೌಕರರಿಗೆ ಸರ್ಕಾರದ ಯಾವುದೇ ನೆರವು ಇಲ್ಲದೇ ಸಂಕಷ್ಟದಲ್ಲಿದ್ದಾರೆ. 10 ವರ್ಷಗಳಿಂದಲೂ ಹೋರಾಟ ನಡೆಸಿದರೂ ಸರ್ಕಾರ ಕುಂಟು ನೆಪ ಹಾಗೂ ಹುಸಿ ಭರವಸೆಗಳನ್ನು ನೀಡುತ್ತಿದೆ. ಇದನ್ನು ಖಂಡಿಸಿ ರಾಜ್ಯದಾದ್ಯಂತ ಜುಲೈ 31ರವರೆಗೆ ಹೋರಾಟ ನಡೆಸಲಿದ್ದೇವೆ’ ಎಂದರು.

2006ರ ಏಪ್ರಿಲ್ ತಿಂಗಳ ಮುಂಚೆ ನೇಮಕವಾಗಿ ನಂತರ ಅನುದಾನಕ್ಕೆ ಒಳಪಟ್ಟ ಹಾಗೂ ನಂತರ ನೇಮಕವಾಗಿ ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರಿಗೆ ನಿಶ್ಚಿತ ಪಿಂಚಣಿಯಾಗಲೀ ಅಥವಾ ವಂತಿಗೆ ಆಧಾರಿತ ಪಿಂಚಣಿ ಸೌಲಭ್ಯವಾಗಲೀ ದೊರೆತಿಲ್ಲ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪರಶುರಾಮರೆಡ್ಡಿ, ಕೆಂಚಪ್ಪ ಡಿ.ಕೆ, ವಿಜಯ್‌ಕುಮಾರ್, ದಾದಾಪೀರ್ ಇದ್ದರು.

Leave a Reply

Your email address will not be published.