ಹರಪನಹಳ್ಳಿ : ಕೊರೊನಾ ಕರಿನೆರಳಲ್ಲಿ ನಾಗರ ಪಂಚಮಿ

ಹರಪನಹಳ್ಳಿ : ಕೊರೊನಾ ಕರಿನೆರಳಲ್ಲಿ ನಾಗರ ಪಂಚಮಿ

ಹರಪನಹಳ್ಳಿ, ಜು. 25 – ಕೊರೊನಾ ಕರಿ ನೆರಳಲ್ಲಿ  ತಾಲ್ಲೂಕಿನಾದ್ಯಂತ  ನಾಗರ ಪಂಚಮಿ ಹಬ್ಬವನ್ನು ಸರಳವಾಗಿ  ಆಚರಿಸಲಾಯಿತು. ಚೌತಿಗೆ ಹಾಲೆರೆದರೆ ಇನ್ನು ಕೆಲವರು ಪಂಚಮಿಗೆ ಹಾಲೆರೆದರು. ಬಹುತೇಕರು ಮನೆಯಲ್ಲಿಯೇ ಇರುವ ನಾಗಪ್ಪನ ಮೂರ್ತಿಗೆ ಹಾಲೆರೆದರೆ, ಕೆಲವರು ಮಾತ್ರ ಹೊರಗಡೆ ಬಂದು ವಿವಿಧ ಕಡೆ ಮಣ್ಣಿನ ಹಾಗೂ ಕಲ್ಲು ನಾಗರ ಮೂರ್ತಿಗೆ ಹಾಲೆರೆದರು.

ಪಟ್ಟಣದ ವಾಲ್ಮೀಕಿ ನಗರ, ಪ್ರವಾಸಿ ಮಂದಿರ, ಮೇಗಳಪೇಟೆ ವೃತ್ತ, ಆಚಾರ್ ಬಡಾವಣೆ, ಶಿಕ್ಷಕರ ಕಾಲೋನಿ, ಕುರುಬರಗೇರಿ, ಸಂಡೂರುಗೇರಿ, ಉಪ್ಪಾರಗೇರಿ, ಸೇರಿದಂತೆ ವಿವಿಧೆಡೆ ನಾಗರ ಪಂಚಮಿ ಪ್ರಯುಕ್ತ ವಿವಿಧ ದೇವಸ್ಥಾನಗಳ ಬಳಿ ನಾಗದೇವರಿಗೆ  ಹಾಗೂ ಮಣ್ಣಿನ ಹುತ್ತಗಳಿಗೆ ತೆರಳಿ ಮಹಿಳೆಯರು, ಮಕ್ಕಳು ಹಾಲನ್ನು ಹಾಕುವ ಮೂಲಕ ಭಕ್ತಿ ಸಮರ್ಪಿಸಿದರು.

ವಿವಿಧ ನಮೂನೆಯ  ಉಂಡಿ ತಿಂದು ಮನೆಯಲ್ಲಿಯೇ ಸಂಭ್ರಮಿಸಿದರು. ಜೋಕಾಲಿ ಆಡುವುದು ಸಹ ಕಡಿಮೆ ಸಂಖ್ಯೆಯಲ್ಲಿತ್ತು. ನಿಂಬೆ ಹಣ್ಣು ಎಸೆಯುವುದು ಸೇರಿದಂತೆ ವಿವಿಧ ಜೂಜಾಟ ಈ ಬಾರಿ ಇಲ್ಲವಾಗಿತ್ತು. ಒಟ್ಟಿನಲ್ಲಿ ಕೋವಿಡ್ ಎಂಬ ವೈರಸ್ ನ ಕರಾಳ ಛಾಯೆಯಲ್ಲಿ ಹಬ್ಬದ ಸಂಪ್ರದಾಯ ಎಂಬಂತೆ ನಾಗರ ಪಂಚಮಿ ಜರುಗಿತು.

ಈ ವೇಳೆ ಪುರಸಭೆ ಸದಸ್ಯರಾದ ನಿಟ್ಟೂರು ಭೀಮವ್ವ, ಮುಖಂಡರಾದ ಮಂಡಕ್ಕಿ ಸುರೇಶ, ಚಂದ್ರಪ್ಪ, ವೆಂಕಟೇಶ, ಪ್ರಕಾಶ್, ಹಾಲಮ್ಮ, ಲಕ್ಷ್ಮಿದೇವಿ. ಭೂಮಿಕಾ, ಸಣ್ಣ ಹನುಮವ್ವ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.