ಅಂತರಂಗ, ಬಹಿರಂಗ ಶುದ್ಧಿಗೆ ಅಧ್ಯಾತ್ಮದ ಸ್ಯಾನಿಟೈಸರ್ ಅಗತ್ಯ

ದಾವಣಗೆರೆ, ಜು. 25- `ಅಧ್ಯಾತ್ಮ’ ಎನ್ನುವಂತಹ ಸ್ಯಾನಿಟೈಸರ್ ಮೂಲಕ ನಾವು ಶರೀರವನ್ನು, ಇಂದ್ರಿ ಯಗಳನ್ನು ಹಾಗೂ ಆಲೋಚನೆಗಳನ್ನು ಶುದ್ಧೀಕರಿಸಿ ಕೊಳ್ಳುವ ಅಗತ್ಯವಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಶರಣರು ಪ್ರತಿಪಾದಿಸಿದರು.

ಚಿತ್ರದುರ್ಗದ ಮುರುಘಾ ಮಠದಲ್ಲಿ ಶ್ರಾವಣ ಮಾಸದ ವಿಶೇಷ ಚಿಂತನೆ `ನೀವಿ ದ್ದಲ್ಲಿಯೇ ಶ್ರಾವಣ ದರ್ಶನ’ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಅವರು ಮಾತನಾಡಿದರು.

ಶುದ್ಧಿ ಬುದ್ದಿಯ ದರ್ಶನ ಮಾಡಿಸುವ ಯಾನವಾಗಿದೆ. ಜ್ಞಾನ ಕಾಂಡ, ಕರ್ಮ ಕಾಂಡ ಸೇರಿದಂತೆ ಅನೇಕ ಕಾಂಡಗಳಿವೆ. ಆದರೆ ಪ್ರಸ್ತುತ ಕೊರೊನಾ ಕಾಂಡದ ಕಾಲದಲ್ಲಿ  ನಾವೆಲ್ಲರೂ ಶಾರೀರಿಕವಾದ ಶುದ್ಧಿಗೆ  ಒಳಗಾಗಬೇಕಿದೆ ಎಂದು ನುಡಿದರು.

ಸ್ಯಾನಿಟೈಸರ್, ಐಸೋಲೇಷನ್, ಹೋಂ ಕ್ವಾರಂಟೈನ್‌ ಎಂಬೆಲ್ಲಾ ಪದಗಳು ಇಂದು ಸಾಮಾನ್ಯವಾಗಿವೆ. ನಮಗೆ ನಾವೇ ಗೃಹ ಬಂಧನ ವಿಧಿಸಿಕೊಳ್ಳುವಂತಾಗಿದೆ. ಚಲಿಸುವ ವಾಹನಕ್ಕೂ, ಪೊಲೀಸ್ ಠಾಣೆಗೂ, ಮುಖ್ಯಮಂತ್ರಿ ಕಚೇರಿ, ವಿಧಾನ ಸೌಧಕ್ಕೂ, ಜೊತೆಗೆ ಮಠ-ಮಂದಿರಗಳಿಗೂ ಸ್ಯಾನಿಟೈಸರ್ ಅಗತ್ಯವಾಗಿದೆ. ದೇವರು ಎಲ್ಲರಿಗಿಂತ ದೊಡ್ಡವನು ಎನ್ನುತ್ತೇವೆ. ಆದರೆ ಅವನಿಗೂ ಸ್ಯಾನಿಟೈಸರ್ ಮಾಡುವಂತಹ ವಿಚಿತ್ರ ಸಂದರ್ಭ ಇಂದು ನಿರ್ಮಾಣವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ದಾರ್ಶನಿಕರ ಬದುಕಿನಲ್ಲಿ ಸಂಕುಚಿತ ಬುದ್ದಿಗೆ ಅವಕಾಶವಿಲ್ಲ. ದುರ್ಬುದ್ದಿಗೂ ಕೂಡ. ಇವೆರಡೂ ನಮ್ಮನ್ನು ಸಂಕುಚಿತ ಮತಿಗಳನ್ನಾಗಿಸುತ್ತವೆ. ಅದಕ್ಕಾಗಿಯೇ ಇಂದು ನಮಗೆಲ್ಲಾ  ಸದ್ಬುದ್ಧಿಯ ಅಗತ್ಯವಿದೆ. ಸದ್ಭುದ್ದಿ ಎಂದರೆ ಶ್ರೇಷ್ಠವಾದ ಬುದ್ದಿಯಾಗಿದ್ದು, ಎಲ್ಲಿ ಬುದ್ಧಿ ಇರುತ್ತದೋ ಅಲ್ಲಿ ಶುದ್ಧಿ ಇರುತ್ತದೆ ಎಂದು ಶರಣರು ಹೇಳಿದರು.

ಶರಣ ಜ್ಞಾನವೂ ವಿಜ್ಞಾನವಿದ್ದ ಹಾಗೆ. ಎಷ್ಟಾದರೂ ನಮ್ಮದು ಅನುಭವ ಮಾರ್ಗ. ನಮ್ಮ ತತ್ವಜ್ಞಾನವನ್ನು ಗಣಿತಜ್ಞರೂ ಕೂಡ ಒಪ್ಪಬೇಕು.  ವಿಜ್ಞಾನಿಗಳೂ ಸಮ್ಮತಿಸಬೇಕು. ಆ ರೀತಿಯಾಗಿ ನಾವು ಚಿಂತನೆಯನ್ನು ಪ್ರತಿಪಾದನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಓರ್ವ ಯೋಗಿ ಅಥವಾ ಶರಣರ ಮುಂದೆ ಗರಿಮ, ಲಗಿಮ ಸೇರಿದಂತೆ ಅಷ್ಟ ಸಿದ್ಧಿಗಳು ಅದ್ಭುತವಾಗಿರುವಂತಹ, ಮಹತ್ವವಾದ ಸಿದ್ಧಿಗಳು ಎನಿಸುವುದಿಲ್ಲ. ಇವಕ್ಕಿಂತ ಜೀವನ ಸಿದ್ಧಿಯಲ್ಲಿ, ಇಂದ್ರಿಯ ಸಿದ್ಧಿ, ಶಾರೀರಿಕವಾದ ಸಿದ್ದಿಯು ಶರಣರಿಗೆ ಪ್ರಮುಖ ಎನಿಸುತ್ತವೆ ಎಂದರು.

ಫೇಸ್ ಬುಕ್ ಹಾಗೂ ಯೂಟ್ಯೂಬ್‌ನಲ್ಲಿ ವಿಶೇಷ ಚಿಂತನೆ ನೇರ ಪ್ರಸಾರ ಹಮ್ಮಿಕೊಳ್ಳಲಾ ಗಿತ್ತು. ಅನೇಕ ಭಕ್ತರು ಪ್ರವಚನ ವೀಕ್ಷಿಸಿದರು.

ಅಥಣಿಯ ಶ್ರೀ ಶಿವಬಸವ ಸ್ವಾಮಿಗಳು, ಶಿರ್ಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಬಸವಕಿರಣ ಸ್ವಾಮಿಗಳು, ಸಾಧಕರು, ಎಸ್‍ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ.ದೊರೆಸ್ವಾಮಿ, ಆರ್.ಲಿಂಗರಾಜು ಮೊದಲಾದವರಿದ್ದರು. ರವಿ ಯಡಹಳ್ಳಿ ಸ್ವಾಗತಿಸಿದರು. ಜಮುರಾ ಕಲಾವಿದರು ಪ್ರಾರ್ಥಿಸಿದರು.

Leave a Reply

Your email address will not be published.