ಮಲೇಬೆನ್ನೂರಿನಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆ

ಮಲೇಬೆನ್ನೂರಿನಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆ

ಮಲೇಬೆನ್ನೂರು, ಜು.23- ಪಟ್ಟಣದಲ್ಲಿ ಇಂದು ಮತ್ತೆ 6 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಅನಾರೋಗ್ಯ ಹಾಗೂ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. 

ಒಂದೇ ಮನೆಯ ಐವರಿಗೆ ಸೋಂಕು : ಇಲ್ಲಿನ ಇಂದಿರಾನಗರದ 10ನೇ ವಾರ್ಡಿನ ಮೇದೂರು ಗಲ್ಲಿಯಲ್ಲಿ ಈಗಾಗಲೇ ಸೀಲ್‌ಡೌನ್ ಆಗಿರುವ ಮನೆಯ ಐವರಿಗೆ ಸೋಂಕು ತಗುಲಿದ್ದು, ಇವರನ್ನು ಗುತ್ತೂರಿನ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಯಿತು.

ಇದೇ ಕುಟುಂಬದ 43 ವರ್ಷದ ಮಹಿಳೆ ಇತ್ತೀಚೆಗೆ ಅಸ್ತಮಾ ಕಾಯಿಲೆ ಹಾಗೂ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದರು. ಎರಡು ದಿನಗಳ ಹಿಂದೆ ಮೃತ ಮಹಿಳೆಯ ಪತಿಗೆ ಸೋಂಕು ದೃಢಪಟ್ಟಿತ್ತು. ಈ ಕುಟುಂಬದಲ್ಲಿ ಇದುವರೆಗೆ ಒಟ್ಟು 7 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಸೋಂಕಿತ ಮಹಿಳೆ ಸಾವು : ಇಲ್ಲಿನ 2ನೇ ವಾರ್ಡಿನ ಬೀರಲಿಂಗೇಶ್ವರ ರಸ್ತೆಯ 65 ವರ್ಷ ಮಹಿಳೆ ಅನಾರೋಗ್ಯದ ಕಾರಣ ಕಳೆದ ವಾರ ದಾವಣಗೆರೆಯ ಸಿ.ಜಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಹಿಳೆಯ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಇಂದು ಪರೀಕ್ಷಾ ವರದಿ ಪಾಸಿಟಿವ್ ಬಂದಿದ್ದು, ಮಧ್ಯಾಹ್ನದ ಹೊತ್ತಿಗೆ ಆ ಮಹಿಳೆೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾರೆ.  

ಸೀಲ್‌ಡೌನ್ : ಮೃತ ಮಹಿಳೆಯ ಕುಟುಂಬದವರನ್ನು ಕ್ವಾರಂಟೈನ್ ಮಾಡಿ, ಬೀರಲಿಂಗೇಶ್ವರ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನವೀನ್, ಪ್ರಭು ಹಾಗೂ ಪೌರ ಕಾರ್ಮಿಕರು ಹಾಜರಿದ್ದರು.

26 ಪ್ರಕರಣ : ಮಲೇಬೆನ್ನೂರು ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಇದುವರೆಗೆ 32 ಕೊರೊನಾ ಪಾಸಿಟಿವ್ ಪ್ರಕರಣಗಳಾಗಿದ್ದು, 16 ಕಂಟೈನ್‌ಮೆಂಟ್ ವಲಯಗಳನ್ನು ಗುರುತಿಸಲಾಗಿದೆ ಎಂದು ಉಪ ತಹಶೀಲ್ದಾರ್ ಆರ್.ರವಿ ಮಾಹಿತಿ ನೀಡಿದರು.

Leave a Reply

Your email address will not be published.