ಭಾನುವಾರದ ಲಾಕ್‌ಗೆ ನಗರ ಥಂಡ

ಭಾನುವಾರದ ಲಾಕ್‌ಗೆ ನಗರ ಥಂಡ

ಬಹುತೇಕ ಅಂಗಡಿ – ಮುಂಗಟ್ಟುಗಳು ಬಂದ್, ಪ್ರಮುಖ ರಸ್ತೆಗಳು ಖಾಲಿ ಖಾಲಿ

ದಾವಣಗೆರೆ, ಜು.19- ಭಾನುವಾರದ ಮೂರನೇ ಲಾಕ್‌ಡೌನ್ ಗೆ ನಗರವೆಲ್ಲಾ ಸ್ತಬ್ಧವಾಗಿತ್ತು. ಆ ಮುಖೇನ ಲಾಕ್ ಡೌನ್ ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬಹುತೇಕ ಅಂಗಡಿ – 
ಮುಂಗಟ್ಟುಗಳು ಬಂದ್ ಆಗಿದ್ದವು. ಸದಾ ಗಿಜಿಗುಡುತ್ತಿದ್ದ ಪ್ರಮುಖ ರಸ್ತೆಗಳು ವಾಹನಗಳ ಸಂಚಾರ, ಜನರ ಓಡಾಟವಿಲ್ಲದೇ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದ್ದವು. ಆದರೆ ಕೆಲ ಒಳ ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದು, ವಾಹನಗಳು ಮತ್ತು ಜನರ ಸಂಚಾರ ಇದ್ದದ್ದು ಕಂಡು ಬಂತು.

ನಿತ್ಯ ಬಳಕೆಯ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ, ಹಾಲು, ಹಣ್ಣು, ಔಷಧಿ ಹಾಗೂ ಮಾಂಸದ ಅಂಗಡಿಗಳು ಹೊರತುಪಡಿಸಿ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳ ವ್ಯಾಪಾರ-ವಹಿವಾಟನ್ನು ಮುಂಜಾನೆಯಿಂದಲೇ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಲಾಕ್ ಡೌನ್ ಗೆ ಬೆಂಬಲ ಸೂಚಿಸಲಾಗಿತ್ತು. ಕೆಲವು ಹೋಟೆಲ್‌ಗಳು ತೆರೆದಿದ್ದರೂ ಪಾರ್ಸಲ್‌ಗೆ ಮಾತ್ರ ಅವಕಾಶವಿತ್ತು. 

ಎಪಿಎಂಸಿಯಲ್ಲಿ ಮುಂಜಾನೆಯೇ ವಹಿವಾಟು ನಡೆದು ನಂತರ ಸ್ಥಗಿತಗೊಳಿಸಲಾಯಿತು. ಅಲ್ಲದೇ ಕೆ.ಆರ್. ಮಾರುಕಟ್ಟೆಯಲ್ಲೂ ವ್ಯಾಪಾರ-ವಹಿವಾಟು ಇರಲಿಲ್ಲ. ಮಾರುಕಟ್ಟೆಗಳು ಬಂದ್ ಆಗಿ ವಾರದ ಸಂತೆಗೆ ಬ್ರೇಕ್ ಬಿದ್ದಿತ್ತು. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ರಸ್ತೆ ಬದಿ, ತಳ್ಳುವ ಗಾಡಿಗಳಲ್ಲಿ ತರಕಾರಿ-ಹಣ್ಣು ಮಾರಾಟ ಮಾಡಲಾಗುತ್ತಿತ್ತು. 

ನಿತ್ಯ ಮನೆ ಮುಂದೆ ಬರುವ ತರಕಾರಿ ಖರೀದಿಸಿ ಬೇಸತ್ತ ಜನ ಇಂದು ರಸ್ತೆ ಬದಿಯಲ್ಲಿನ ಚಿಲ್ಲರೆ ವ್ಯಾಪಾರಸ್ಥರ ಬಳಿ ತರಕಾರಿ, ಹಣ್ಣು ಖರೀದಿಸಲು ಮೊರೆ ಹೋಗಿದ್ದರು. ಬೆಳಿಗ್ಗೆ ಜನರ ಸಂಚಾರ ತುಸು ಜೋರಾಗಿತ್ತಾದರೂ ಮಧ್ಯಾಹ್ನದ ನಂತರ ವಿರಳವಾಗಿತ್ತು. 

ವಾಹನಗಳ ಸಂಚಾರ ನಿಯಂತ್ರಿಸುವ ಸಲುವಾಗಿ ಪೊಲೀಸ್ ಇಲಾಖೆಯು ಕೆಲ ಪ್ರಮುಖ ದ್ವಿಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಏಕಮುಖ ಮಾಡಲಾಗಿತ್ತು ಮತ್ತೆ ಕೆಲ ರಸ್ತೆಗಳಲ್ಲಿ ಬ್ಯಾರಿಕೇಡ್ ಎಳೆದು ಬಂದ್ ಮಾಡಲಾಗಿತ್ತು.

ಮಾಂಸದಂಗಡಿ ಬಳಿ ಅಂತರ ಮಾಯ: ಭಾನುವಾರ ಮಾಂಸದೂಟಕ್ಕಾಗಿ ಮುಂಜಾನೆಯಿಂದಲೇ ಕೋಳಿ, ಮಟನ್ ಅಂಗಡಿಗಳ ಮುಂದೆ ಜನ ಸಾಮಾಜಿಕ ಅಂತರ ಮರೆತು ಮುಗಿಬಿದ್ದಿದ್ದು ವಿನೋಬನಗರ, ಡಾಂಗೆ ಪಾರ್ಕ್‌ ಮುಂತಾದ ಕಡೆಗಳಲ್ಲಿ ಸಾಮಾನ್ಯವಾಗಿತ್ತು. ಪೊಲೀಸ್ ವಾಹನ ಕಂಡಾಗ ಸಾಮಾಜಿಕ ಅಂತರ, ವಾಹನ ಹೋದಾಗ ಯಥಾಸ್ಥಿತಿ ಕಂಡುಬಂತು.

ಕೆಎಸ್ಆರ್‌ಟಿಸಿ ಸೇವೆ ಸ್ಥಗಿತ: ಶನಿವಾರ ರಾತ್ರಿ 8 ಗಂಟೆಯಿಂದಲೇ ಕೆಎಸ್‍ಆರ್‌ಟಿಸಿ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಭಾನುವಾರ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಆದರೆ ಕೆಲವೆಡೆ ಬೆರಳೆಣಿಕೆಯಷ್ಟು ಆಟೋಗಳು ಸಂಚರಿಸಿದವು.

ಧಾರ್ಮಿಕ ಕೇಂದ್ರಗಳು ಬಂದ್‌: ದೇವಾಲಯಗಳು, ಮಸೀದಿಗಳು ಹಾಗೂ ಚರ್ಚ್‌ಗಳನ್ನು ಬಂದ್ ಮಾಡಲಾಗಿತ್ತು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಾಲಯ, ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಾಲಯಗಳು ಮುಚ್ಚಿದ್ದವು. 

ಅನಗತ್ಯ ಸಂಚಾರಕ್ಕೆ ದಂಡ: ಲಾಕ್ ಡೌನ್ ನಡುವೆಯೂ ಕೆಲ ಬೈಕ್ ಗಳು ಮತ್ತು ಕಾರುಗಳು ರಸ್ತೆಗಿಳಿದಿದ್ದವು. ಆಸ್ಪತ್ರೆ ಇನ್ನಿತರೆ ತುರ್ತು ಕಾರ್ಯನಿಮಿತ್ತ ಬಂದವರನ್ನು ಪರಿಶೀಲಿಸಿ ಬಿಟ್ಟರೆ ಅನಗತ್ಯವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಪೊಲೀಸರು ಮುಲಾಜಿಲ್ಲದೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಕೆಲ ಬೈಕ್ ಸವಾರರು ಕುಂಟು ನೆಪ ಹೇಳಿ ದಂಡದಿಂದ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದರು. 

ಹಳೇ ಭಾಗದಲ್ಲಿ ಜಾಗೃತಿ: ಹಳೇ ದಾವಣಗೆರೆ ಭಾಗದಲ್ಲಿ ಜನರ ಅನಗತ್ಯ ಓಡಾಟ, ವಾಹನಗಳ ಸಂಚಾರ, ಅಂಗಡಿಗಳ ಮುಂದೆ ಅಂತರ ಕಾಯ್ದುಕೊಳ್ಳದೆ ವಹಿವಾಟು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳಲ್ಲಿ ಗಸ್ತು ತಿರುಗುತ್ತಾ ಎಚ್ಚರಿಕೆಯೊಂದಿಗೆ ಜಾಗೃತಿ ಮೂಡಿಸಿದರು.