ಹರಿಹರದಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ವಹಿವಾಟು

ಹರಿಹರದಲ್ಲಿ ಬೆಳಿಗ್ಗೆ 6 ರಿಂದ  ಸಂಜೆ 6ರವರೆಗೆ ವಹಿವಾಟು

ಹರಿಹರ, ಜು.18- ಕೊರೊನಾ ಸೋಂಕು ನಿಯಂತ್ರಣಕ್ಕೆ ಯಾವ ಸಮಯದಲ್ಲಿ ವ್ಯಾಪಾರ ವಹಿವಾಟು ನಡೆಸಬೇಕೆಂಬ ವಿಚಾರದಲ್ಲಿ ಶನಿವಾರ ನಡೆದ ಇಲ್ಲಿನ  ವ್ಯಾಪಾರಸ್ಥರು ಮತ್ತು ಗ್ರಾಹಕರ ಮಹತ್ವದ ಸಭೆಯಲ್ಲಿ ಶಾಸಕ ಎಸ್. ರಾಮಪ್ಪ ಮತ್ತು ಮಾಜಿ ಶಾಸಕ ಬಿ.ಪಿ. ಹರೀಶ್ ರವರ ಮಧ್ಯೆ ಮಾತಿನ ಚಕಮಕಿ ನಡೆದು, ಕೊನೆಗೆ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ವಹಿವಾಟು ನಡೆಸಲು ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಶಾಸಕ ಎಸ್.ರಾಮಪ್ಪ ಮಾತನಾಡಿ, ಲಾಭ ನಷ್ಟದ ಬಗ್ಗೆ ಅಷ್ಟೇ ಯೋಚನೆ ಮಾಡುವುದು ಬೇಡ. ಕೊರೊನಾ ಹೆಚ್ಚಾದರೆ ಅನಾಹುತಗಳು, ಸಾವು-ನೋವುಗಳೂ ಹೆಚ್ಚಾಗುತ್ತವೆ. ಜನತೆ ಮತ್ತಷ್ಟು ಸಂಕಷ್ಟಕ್ಕೀಡಾಗಬೇಕಾಗುತ್ತದೆ. ಅಂಗಡಿ ಬಂದ್ ಮಾಡುವ ವಿಚಾರದಲ್ಲಿ ಜನರಲ್ಲಿ ಗೊಂದಲ ಮೂಡಿಸುವುದು ಬೇಡ ಎಂದರು.

ನನ್ನ ಗಮನಕ್ಕೆ ತರದೇ ಮೊನ್ನೆ ಸಭೆ ನಡೆಸಿ ರಾತ್ರಿ 8 ಗಂಟೆವರೆಗೆ ವಹಿವಾಟು ಮಾಡಲು ಆದೇಶಿಸಲಾಗಿದೆ. ಇದು ಶಿಷ್ಟಾಚಾರದ ಉಲ್ಲಂಘನೆ. ಇದರಿಂದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದರು.

ಮಾಜಿ ಶಾಸಕ ಬಿ.ಪಿ. ಹರೀಶ್, ನಗರದ ಎಲ್ಲಾ ವ್ಯಾಪಾರಸ್ಥರೂ ಒಂದೇ ಎಂಬ ಭಾವನಯಲ್ಲಿ ತೀರ್ಮಾನ ಕೈಗೊಳ್ಳಬೇಕು. ಅಗತ್ಯ ವಸ್ತುಗಳಿಗೆ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಿ ಮದ್ಯದ ಅಂಗಡಿಗಳಿಗೆ ರಾತ್ರಿ 10ರ ವರೆಗೆ ಅನುಮತಿ ನೀಡುವುದು ಸರಿಯಲ್ಲ ಎಂದರು.

ಮೊನ್ನೆ ಮಾಡಿದ ಸಭೆ ಪೂರ್ವನಿಯೋಜಿತವಲ್ಲ. ದಿಢೀರನೆ ನಡೆದ ಬೆಳವಣಿಗೆ. ನಾನು ಕೆಲಸದ ನಿಮಿತ್ತ್ಯ ಠಾಣೆಗೆ ಹೋದಾಗ ಅಲ್ಲಿ ವ್ಯಾಪಾರಸ್ಥರು ರಾತ್ರಿ 8ರವರೆಗೆ ವಹಿವಾಟು ನಡೆಸಲು ಮನವಿ ಮಾಡಿದಾಗ ಅವರು ಅವಕಾಶ ನೀಡಿದ್ದಾರೆ. ನಗರದಲ್ಲಿ ಮಧ್ಯಾಹ್ನ 2ಕ್ಕೇ ವ್ಯಾಪಾರ ಬಂದ್ ಮಾಡಿದರೆ, ಜನರು ದಾವಣಗೆರೆಗೆ ಹೋಗಲಾರಂಭಿಸುತ್ತಾರೆ. ಇದರಿಂದ ಇಲ್ಲಿನ ವ್ಯಾಪಾರಸ್ಥರಿಗೆ ನಷ್ಟವಾಗುತ್ತದೆ ಎಂದು ಸಮಜಾಯಿಷಿ ನೀಡಿದರು.

ಜಿಲ್ಲೆಯ ಎಲ್ಲಾ ನಗರದಲ್ಲಿ ಒಂದೇ ಸಮಯದಲ್ಲಿ ಅಂಗಡಿ ಬಂದ್ ಮಾಡಲು ಅವಕಾಶ ನೀಡಿದರೆ ಮಾತ್ರ ನಾವು ಒಪ್ಪಿಕೊಳ್ಳುತ್ತೇವೆ. ಇಲ್ಲದೇ ಹೋದರೆ ನಗರದಲ್ಲಿ ರಾತ್ರಿ ಎಂಟು ಗಂಟೆಯವರೆಗೆ ವ್ಯಾಪಾರ ವಹಿವಾಟು ಮಾಡುತ್ತೇವೆ. ಇದನ್ನು ಯಾರು ತಡೆಯುತ್ತಾರೋ ನಾವು ನೋಡುತ್ತೇವೆ ಎಂದು ಖಾರವಾಗಿ ಹೇಳಿದರು.

ಈ ಮಾತು ಹೇಳುತ್ತಿದ್ದಂತೆ ಶಾಸಕ ಮತ್ತು ಮಾಜಿ ಶಾಸಕರ ನಡುವೆ ಮಾತಿನ ಚಕಮಕಿ ಜೋರಾಯಿತು. ಇದನ್ನು ತಹಬಂದಿಗೆ ತರಲು ಡಿ.ವೈ.ಎಸ್.ಪಿ. ನರಸಿಂಹಪ್ಪ ತ್ರಾಮಧ್ವಜ, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಸಿ.ಪಿ. ಐ. ಶಿವಪ್ರಸಾದ್ ಸೇರಿದಂತೆ ಹಲವರು ಸಾಕಷ್ಟು ಹರ ಸಾಹಸ  ಮಾಡಿದರು.

ಡಿ.ವೈ.ಎಸ್.ಪಿ. ನರಸಿಂಹಪ್ಪ ತ್ರಾಮಧ್ವಜ, ಎಲ್ಲರೂ ಒಟ್ಟಾಗಿ ಒಮ್ಮತದ ತೀರ್ಮಾಕ್ಕೆ ಬರಬೇಕು. ಅದನ್ನು ಜನರು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ತಮಗೆ ಇಷ್ಟ ಬಂದಂತೆ ಮಾಡಿದರೆ ಕಾನೂನಿನಡಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಅವರಿಗೆ ಸಭೆಯಲ್ಲಿ ಆಹ್ವಾನ ನೀಡದಿರುವುದರಿಂದ ಜೆಡಿಎಸ್ ನಗರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಪೌರಾಯುಕ್ತೆ ಎಸ್.‌ ಲಕ್ಷ್ಮಿ, ಸಿಪಿಐ ಎಸ್. ಶಿವಪ್ರಸಾದ್, ಪಿಎಸ್ಐ ಎಸ್. ಶೈಲಜಾ, ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್,  ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕರ್, ಕೆ.ಜಿ. ಸಿದ್ದೇಶ್, ಅಶ್ವಿನಿ ಕೆ.ಜಿ. ಕೃಷ್ಣ, ರಜನಿಕಾಂತ್, ಆರ್.ಸಿ. ಜಾವೇದ್, ಹನುಮಂತಪ್ಪ, ದಾದಾ ಖಲಂದರ್, ನೀತಾ ಮೆಹರ್ವಾಡೆ, ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಜಿಪಂ ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಮುಖಂಡರಾದ, ಮಂಜುನಾಥ್ ಅಂಗಡಿ, ಮಾರುತಿ ಬೇಡರ್, ಮರಿದೇವಪ್ಪ, ವ್ಯಾಪಾರಸ್ಥರಾದ ಶಿವಪ್ರಕಾಶ್ ಶಾಸ್ತ್ರೀ, ರಾಘವೇಂದ್ರ, ಗೋಪಿ, ದುರುಗೋಜಿ‌, ಮಂಜುಳಾ, ರಮೇಶ, ರಘುಪತಿ, ಆನಂದ, ಸಿ.ಎನ್. ಹುಲುಗೇಶ್, ರಾಘವೇಂದ್ರ ಬೊಂಗಾಳೆ, ಅರುಣ್ ಬೊಂಗಾಳೆ, ತಿಪ್ಪೇಶ್ ಹಾಗೂ ಇತರರು ಸಭೆಯಲ್ಲಿದ್ದರು.

Leave a Reply

Your email address will not be published.