ಮಲೇಬೆನ್ನೂರಿನಲ್ಲಿ 8, ಹರಳಹಳ್ಳಿಯಲ್ಲಿ 1 ಪಾಸಿಟಿವ್ : ಆತಂಕಗೊಂಡ ಗ್ರಾಮೀಣ ಜನತೆ

ಮಲೇಬೆನ್ನೂರಿನಲ್ಲಿ 8, ಹರಳಹಳ್ಳಿಯಲ್ಲಿ  1 ಪಾಸಿಟಿವ್ : ಆತಂಕಗೊಂಡ ಗ್ರಾಮೀಣ ಜನತೆ

ಮಲೇಬೆನ್ನೂರು, ಜು.18- ಇಂದು ಸಂಜೆ ಮಲೇಬೆನ್ನೂರು ಪಟ್ಟಣದಲ್ಲಿ 8 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜನರ ನಿದ್ದೆಗೆಡಿಸಿದೆ. ಅಲ್ಲದೇ, ಹರಳಹಳ್ಳಿ ಗ್ರಾಮದಲ್ಲೂ ಒಂದು ಪಾಸಿಟಿವ್ ಪತ್ತೆಯಾಗಿರುವುದು ಗ್ರಾಮೀಣ ಜನರು ಜಾಗೃತರಾಗುವಂತೆ ಮಾಡಿದೆ.

ಮಲೇಬೆನ್ನೂರಿನಲ್ಲಿ ಮೊನ್ನೆ 3 ಕೊರೊನಾ ಪಾಸಿಟಿವ್ ವರದಿ ಬಂದ ಸಂದರ್ಭದಲ್ಲೇ ಇನ್ನು ಮುಂದೆ ಪ್ರಕರಣಗಳು ಹೆಚ್ಚಾಗಲಿವೆ ಎಂಬ ಮಾತು ಎಲ್ಲೆಡೆ ಕೇಳಿ ಬಂದಿದ್ದವು. ಇದರ ಬೆನ್ನಿಂದೆಯೇ 8 ಪ್ರಕರಣಗಳು ವರದಿಯಾಗಿರುವುದರಿಂದ ಜನರು ಭಾನುವಾರದಿಂದ ಸ್ವಯಂ ಲಾಕ್‌ಡೌನ್ ಆಗುವ ಮಾತುಗಳನ್ನಾಡಿದ್ದಾರೆ.

ದಾವಣಗೆರೆ ಕೇಸ್ ಲಿಂಕ್ : ಕಳೆದ 10 ದಿನಗಳ ಹಿಂದೆ ಪಟ್ಟಣದಲ್ಲಿ ನಿಧನರಾಗಿದ್ದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದಾವಣಗೆರೆಯಿಂದ ಆಗಮಿಸಿದ್ದ ವ್ಯಕ್ತಿ ಇಲ್ಲಿನ ಸಂತೆ ರಸ್ತೆಯಲ್ಲಿರುವ (ಬಸವೇಶ್ವರ ಬಡಾವಣೆ) ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಮರುದಿನ ಬೆಳಿಗ್ಗೆ ಆತನಿಗೆ ಕೊರೊನಾ ಸೋಂಕು ಇರುವ ಬಗ್ಗೆ ದಾವಣಗೆರೆಯ ಸಿ.ಜಿ ಆಸ್ಪತ್ರೆಯಿಂದ ಮಾಹಿತಿ ಬಂದಿತ್ತು. ಅಂದು ಆತ ಉಳಿದುಕೊಂಡಿದ್ದ ಮನೆಯ ಗಂಡ, ಹೆಂಡತಿ ಸೇರಿದಂತೆ ಇಬ್ಬರು ಮಕ್ಕಳಿಗೆ ಕೊರೊನಾ ದೃಢಪಟ್ಟಿದೆ. ಅಲ್ಲದೇ, ನಿಧನರಾಗಿದ್ದ ವ್ಯಕ್ತಿ ಮನೆಯ ಮೂವರು ಪುರುಷರು ಮತ್ತು ಓರ್ವ ಮಹಿಳೆಗೂ ಸೋಂಕು ತಗುಲಿದೆ. ಇವರೆಲ್ಲರನ್ನೂ ಇಂದು ರಾತ್ರಿ 9 ಗಂಟೆಗೆ ಸುಮಾರಿಗೆ ದಾವಣಗೆರೆಯ ಸಿ.ಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಬಫರ್ ವಲಯ : ಪಾಸಿಟಿವ್ ಬಂದಿರುವ ವಿಷಯ ತಿಳಿಯುತ್ತಿದ್ದಂತೆಯೇ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಪಿಎಸ್ಐ ವೀರ ಬಸಪ್ಪ, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಉಮೇಶ್, ನವೀನ್, ಪುರಸಭೆ ಸದಸ್ಯರಾದ ಬಿ.ಸುರೇಶ್, ಮಹಾಂತೇಶ್ ಸ್ವಾಮಿ ಹಾಗೂ ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಜ ರಿದ್ದು, ಸೋಂಕಿತರ ಮನೆ ಇರುವ 100 ಮೀಟರ್ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್‌ ಮಾಡಿದರು.

ಹರಳಹಳ್ಳಿ ಗ್ರಾಮದ 60 ವರ್ಷದ ವೃದ್ಧರೊಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದ್ದು, ಅವರನ್ನೂ ಇಂದು ರಾತ್ರಿ ದಾವಣಗೆರೆಯ ಸಿಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

ಸ್ಥಳಕ್ಕೆ ಗ್ರಾ.ಪಂ. ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದರು.

Leave a Reply

Your email address will not be published.