ಕಲಾಭಿಮಾನಿ ರಾಜಕಾರಣಿ ಎಂ.ಪಿ. ಪ್ರಕಾಶ್

ಕಲಾಭಿಮಾನಿ ರಾಜಕಾರಣಿ ಎಂ.ಪಿ. ಪ್ರಕಾಶ್

ದಿ. ಎಂ.ಪಿ. ಪ್ರಕಾಶ್ ಜನ್ಮ ದಿನೋತ್ಸವದಲ್ಲಿ ನೀಲಗುಂದ ವಿರಕ್ತಮಠದ ಚೆನ್ನಬಸವ ಶ್ರೀ

ಹರಪನಹಳ್ಳಿ, ಜು.11- ಸಾಂಸ್ಕೃತಿಕ ರಾಯಭಾರಿಯಾಗಿ  ಹಂಪಿ ಉತ್ಸವ ಹಾಗೂ ಹಂಪಿ ಕನ್ನಡ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ, ವಿಜಯ ನಗರ ಸಾಮ್ರಾಜ್ಯದ ಕನ್ನಡ ಸಾರ್ವಭೌಮತ್ವವನ್ನು ಎತ್ತಿ ಹಿಡಿದ ಕೀರ್ತಿ ದಿ. ಎಂ.ಪಿ.ಪ್ರಕಾಶ್‍ ಅವರಿಗೆ ಸಲ್ಲುತ್ತದೆ ಎಂದು ನೀಲಗುಂದ ವಿರಕ್ತ ಮಠದ ಶ್ರೀ ಚೆನ್ನಬಸವ ಶಿವಯೋಗಿಗಳು ಹೇಳಿದರು.

ಪಟ್ಟಣದ ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್‌ನ ಸಾರ್ವಜನಿಕ ಕಚೇರಿಯಲ್ಲಿ  ಶ್ರೀ ಎಂ.ಪಿ.ಪ್ರಕಾಶ್  ಪ್ರತಿಷ್ಠಾನ, ರಂಗಭಾರತಿ, ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್, ಎಂ.ಪಿ. ರವೀಂದ್ರ ಅಭಿಮಾನಿ ಬಳಗ ಹಾಗೂ  ಎಂ.ಪಿ.ಪ್ರಕಾಶ್ ಕುಟುಂಬದ ವತಿಯಿಂದ ಎಂ.ಪಿ.ಪ್ರಕಾಶ್ ಜನ್ಮ ದಿನಾಚರಣೆ ಪ್ರಯುಕ್ತ ಈರುಳ್ಳಿ ಕೃಷಿ ಬೆಳೆ ಮಾಹಿತಿ ಕೈಪಿಡಿ ಹಾಗೂ ಶ್ರೀ  ಎಂ.ಪಿ. ಪ್ರಕಾಶ್ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ದಿ.ಎಂ.ಪಿ.ಪ್ರಕಾಶ್‍ ಕೇವಲ ರಾಜಕಾರಣಿ ಯಾಗಿರದೆ  ಕಲೆ, ಸಾಹಿತ್ಯ, ನಾಟಕ ಪ್ರೀತಿಸುವ ಮುತ್ಸದ್ಧಿ  ರಾಜಕಾರಣಿಯಾಗಿದ್ದರು. ದೇವಾಲಯ ಗಳಿಗಿಂತ ಗ್ರಂಥಾಲಯಗಳು ಹೆಚ್ಚಾಗಿದ್ದರೆ ಜನ ಬುದ್ದಿವಂತರಾಗುತ್ತಾರೆ ಎಂಬ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದಾರೆ. ಪ್ರಕಾಶ ಮತ್ತು ರವಿ  ಬೆಳಕಿನ ಸಂಕೇತವಾಗಿದ್ದು  ಯಾವಾಗಲೂ ಮಸುಕಾಗ ದಂತೆ ಎಲ್ಲರ ಜನ ಮಾನಸದಲ್ಲಿದ್ದಾರೆ ಎಂದರು.

ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಚರಂತಿ ಮಠ್ ಮಾತನಾಡಿ,  ಎಂ.ಪಿ. ಪ್ರಕಾಶ್‍ರವರು ದೈವಾಧೀನರಾಗಿ 10 ವರ್ಷಗಳಾಗಿವೆ. ಈ ಹತ್ತು ವರ್ಷಗಳಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯ ಮಹನೀಯರನ್ನು ಗುರುತಿಸಿ ಅವರಿಗೆ ಗೌರವ ಸನ್ಮಾನ ಮಾಡಲಾಗಿದೆ ಎಂದರು.

ಕೆಪಿಸಿಸಿ ವೈದ್ಯಕೀಯ ಘಟಕದ ಉಪಾಧ್ಯಕ್ಷ ಡಾ.ಮಹಂತೇಶ ಚರಂತಿಮಠ್ ಮಾತನಾಡಿ,  ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಪ್ರಕಾಶ್ ಅವರು ರಾಜ್ಯ ರಾಜ ಕಾರಣದಲ್ಲಿ 17 ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು ಎಂದರು. ಎಂ.ಪಿ.ಪ್ರಕಾಶ್  ಪ್ರತಿಷ್ಠಾನದ ಕಾರ್ಯದರ್ಶಿ ಹಡಗಲಿಯ ಶಾಂತಮೂರ್ತಿ ಕುಲಕರ್ಣಿ, ನ್ಯಾಯವಾದಿಗಳಾದ ಹಲಗೇರಿ ಮಂಜಪ್ಪ, ಸಿದ್ದನಗೌಡ ಪಟೇಲ್ ಉಪನ್ಯಾಸಕ ಗುರುಪ್ರಸಾದ್ ಮಾತನಾಡಿದರು. 

ಎ.ಪಿ.ಎಂ.ಸಿ. ಅಧ್ಯಕ್ಷ  ಅಶೋಕ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಮೈದೂರು ಕುಬೇರಗೌಡ ಪುರಸಭೆ ಸದಸ್ಯ ಲಾಟಿ ದಾದಾಪೀರ್, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ನಿವೃತ್ತ ಉಪನ್ಯಾಸಕ ತಿಮ್ಮಪ್ಪ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಎ.ಮೂಸಾ ಸಾಬ್, ಮುಖಂಡರಾದ  ಗಾಯಿತ್ರಮ್ಮ, ದಾದಾಪೀರ್, ಮನೋಜ್ ಕುಮಾರ್,  ಗಿರಿಜ್ಜಿ ಪ್ರವೀಣ,  ಕೊಟ್ರೇಶ್, ಎಚ್.ಎಂ. ಜಗದೀಶ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

Your email address will not be published.