ಅಪ್ಪ ಅನ್ನೋ ಬಿರುಸು ಕೈಯೊಳಗೆ ಪ್ರೀತಿ ಅನ್ನೋ ಬ್ರಹ್ಮಾಂಡ…ಇರ್ತದೆ

ಅಪ್ಪ ಅನ್ನೋ ಬಿರುಸು ಕೈಯೊಳಗೆ ಪ್ರೀತಿ ಅನ್ನೋ ಬ್ರಹ್ಮಾಂಡ…ಇರ್ತದೆ

ದಿಕ್ಸೂಚಿ ಇಲ್ಲದೆ ದೋಣಿ ದಡ ಸೇರುವುದು ಕಷ್ಟ. ಹಾಗೆ ತಂದೆಯೆ ಮಾರ್ಗದರ್ಶನ, ಸಹಕಾರ, ಬೆಂಬಲವಿಲ್ಲದೆ ಬದುಕಿನಲ್ಲಿ ಮಕ್ಕಳು ಯಶಸ್ಸು ಕಾಣುವುದಾಗಲೀ, ತೃಪ್ತಿ ಪಡೆಯುವುದಾಗಲೀ ಅಷ್ಟು ಸುಲಭವಲ್ಲ. ಜಗತ್ತಿನಲ್ಲಿ ಅಮ್ಮ ಎಷ್ಟು ಶ್ರೇಷ್ಠನೋ ಮಕ್ಕಳ ಭವಿಷ್ಯಕ್ಕೆ ಅಪ್ಪನೂ ಅಷ್ಟೇ ಶ್ರೇಷ್ಠ ಅಂದರೆ ತಪ್ಪಾಗಲಾರದು. ತಾಯಿಗೆ ಸಾಮಾನ್ಯವಾಗಿ ಮಕ್ಕಳ ಲಾಲನೆ, ಪಾಲನೆ ಬಗ್ಗೆ ಆಲೋಚನೆಗಳಿದ್ದರೆ, ತಂದೆಗೆ ಇಡೀ ಸಂಸಾರವನ್ನು ಹೇಗೆ ಸುಖ, ಸಂತೋಷವೆಂಬ ದಡ ಸೇರಿಸಬೇಕೆಂಬ ಕನಸು ಹೊಂದಿರುವ ಅಪ್ಪ ಅನ್ನೋ ಬಿರುಸು ಕೈಯೊಳಗೆ ಪ್ರೀತಿ ಅನ್ನೋ ಬ್ರಹ್ಮಾಂಡವಿದ್ದಂತೆ. ತಂದೆ ಒಬ್ಬ ಪೋಷಕನಾಗಿ, ರಕ್ಷಕನಾಗಿ, ಪಾಲಕನಾಗಿ, ಶಿಕ್ಷಕನಾಗಿ, ಗುರುವಾಗಿ, ಸಲಹೆಗಾರನಾಗಿ, ತಾಳ್ಮೆಯ ಕೇಳುಗನಾಗಿ, ಧೈರ್ಯ ತುಂಬುವ ಶಕ್ತಿಯಾಗಿ, ಸಲಹೆಗಾರನಾಗಿ, ಬದುಕಿನ ಯಶಸ್ಸಿನ ರಹಸ್ಯ ತಿಳಿಸಿಕೊಡುವ ವ್ಯಕ್ತಿಯಾಗಿ, ಬದುಕಿಗೆ ಭರವಸೆ ತುಂಬಿ ಭವಿಷ್ಯದ ಬಗ್ಗೆ ನಂಬಿಕೆ ಮತ್ತು ಮಾನಸಿಕ ಧೈರ್ಯ ತುಂಬುವ ವ್ಯಕ್ತಿಯಾಗಿ, ಸಂಸಾರದ ಬೆನ್ನೆಲುಬಾಗಿ, ಉಸಿರಾಗಿ ಹೀಗೆ ಹತ್ತಾರು ಪಾತ್ರಗಳಲ್ಲಿ ಮಕ್ಕಳ ಏಳಿಗೆಗೆ ಶ್ರಮಿಸುವ ತಾಳ್ಮೆಯ ವ್ಯಕ್ತಿ ಎಂದರೆ ಅಪ್ಪ.

ಭದ್ರವಾದ ಬುನಾದಿಯ ಮೇಲೆ ಕಟ್ಟಿದ ಮನೆಯಂತೆ ಅಪ್ಪನ ಸಂಸ್ಕಾರದಲ್ಲಿ ಬೆಳೆದ ಮಕ್ಕಳ ಭವಿಷ್ಯ ಕೂಡ.. ಅಪ್ಪನ ಶ್ರಮ ಮತ್ತು ತ್ಯಾಗದಲ್ಲಿ ಮಕ್ಕಳ ಸುಂದರ ಭವಿಷ್ಯ ಅಡಗಿರುತ್ತದೆ. ಚಿಕ್ಕವರಿದ್ದಾಗ ಅಪ್ಪ ಇಷ್ಟನೋ, ಅಮ್ಮ ಇಷ್ಟನೋ ಅಂತ ಕೇಳಿದಾಗ ನಾವು ಅಮ್ಮ ಅಂತ ಹೇಳಿದ್ರೂ, ಏಟು ಬಿದ್ದಾಗ ಅಮ್ಮಾ ಅಂತ ಕೂಗಿದ್ರು, ಯಾವತ್ತೂ ಸಿಟ್ಟಾಗದೆ ಖುಷಿ ಪಡುವ ತಂದೆಗೆ ನಾವು ಒಂದು ಸರಿನೂ ಪ್ರೀತಿ ವ್ಯಕ್ತಪಡಿಸದಿದ್ದರೂ, ಪ್ರಶಂಸೆ ಮಾಡದಿದ್ದರೂ, ನಮ್ಮನ್ನು ಪ್ರೀತಿಸುವ ವ್ಯಕ್ತಿ. ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥದಿಂದ ಸಂಸಾರಕ್ಕೋಸ್ಕರ ಕೊನೆಯ ಉಸಿರು ಇರುವವರೆಗೂ ದುಡಿಯುವ ವ್ಯಕ್ತಿ ಮತ್ತು ಮಕ್ಕಳ ಭವಿಷ್ಯದ ಬಗ್ಗೆ ಸುಂದರ ಕನಸು ಕಟ್ಟಿಕೊಂಡಿರುವ ವ್ಯಕ್ತಿ ಎಂದರೆ ಅಪ್ಪ….

ಮಕ್ಕಳ ಭವಿಷ್ಯಕ್ಕಾಗಿ ಅಪ್ಪಂದಿರು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ಬೇಡಿದ್ದನ್ನೆಲ್ಲಾ ಕೊಡುವವನು ಆ ದೇವರು. ಆದರೆ ಬೇಡದೇನೇ ಬಯಸಿದ್ದನ್ನೆಲ್ಲಾ ಕೊಡಿಸುವ ಹಂಬಲ ಹೊತ್ತಿರುವ ವ್ಯಕ್ತಿ ಅಪ್ಪ ಒಬ್ಬನೇ. ಒಬ್ಬ ತಂದೆ ಮಕ್ಕಳಿಗೋಸ್ಕರ ಮತ್ತು ಸಂಸಾರದ ಏಳಿಗೆಗೋಸ್ಕರ ಯಾರಿಗೂ ಹೇಳದೆ ಎಷ್ಟು ಸಾಲ ಮಾಡುವ ಸಂದರ್ಭಗಳು ಬರುತ್ತವೆ ನಿಮಗೆ ಗೊತ್ತೆ ? ಸ್ವಲ್ಪ ಅವಲೋಕಿಸಿ ನೋಡೋಣ. ಸಣ್ಣ ಮಕ್ಕಳು ಇದ್ದಾಗ ಆಟ ಆಡುವ ಸಾಮಾನುಗಳನ್ನು ಕೊಡಿಸುವುದರಿಂದ ಹಿಡಿದು ಪ್ರತಿಯೊಂದು ನಮ್ಮ ಬೇಡಿಕೆಗಳನ್ನು ಅಪ್ಪ ಈಡೇರಿಸುತ್ತಲೇ ಬರುತ್ತಾನೆ. ವಿದ್ಯಾಭ್ಯಾಸಕ್ಕಾಗಿ ಸಾಲ ಮಾಡಿ ಫೀಸು ಕಟ್ಟುತ್ತಿರುತ್ತಾನೆ. ಅಮ್ಮನ ಸೀರೆ, ಬಂಗಾರದ ಆಸೆಗಳನ್ನು ಈಡೇರಿಸಲು ಕಂತಿನಂತೆ ಸಾಲ ತೀರಿಸುತ್ತಿರುತ್ತಾನೆ. ಸಂಬಂಧಿಕರ ಹಾಗೂ ಗೆಳೆಯರ ಕಷ್ಟಕ್ಕಾಗಿ ಅದೆಷ್ಟು ಸಾಲದ ವ್ಯವಹಾರದಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುತ್ತಾನೆ. ಲೈಫ್‌ ಇನ್ಸೂರೆನ್ಸ್ ಹಾಗೂ ಆರ್‌.ಡಿ. ಖಾತೆಗಳಿಗೆ ಸಂಸಾರದ ಉತ್ತಮ ಭವಿಷ್ಯಕ್ಕಾಗಿ ಮತ್ತು ದೂರದೃಷ್ಟಿಯಿಂದ ಮಕ್ಕಳ ಮದುವೆಗಾಗಿ ಉಳಿತಾಯ ಖಾತೆಗಳಿಗೆ ಹಣ ಕಟ್ಟಲು ಒದ್ದಾಡುತ್ತಿರುತ್ತಾನೆ. ತಾನು ಹಳೆಯ ಸಣ್ಣ ಮೊಬೈಲ್‌ ಇಟ್ಟಿಕೊಂಡಿದ್ದರೂ ಸಹ, ಮಕ್ಕಳಿಗೆ ದೊಡ್ಡ ಫೋನ್ ಕೊಡಿಸುವ ಹಂಬಲ. ತಾನು ಹಳೇ ಬಟ್ಟೆಗಳನ್ನೇ ತೊಟ್ಟು ಸರಳ ಜೀವನ ನಡೆಸಿ, ಮಕ್ಕಳಿಗೆ ಐಷಾರಾಮಿ ಬೈಕು, ಕಂಪ್ಯೂಟರ್, ಡ್ರೆಸ್, ಮೊಬೈಲ್‌ಗಳ ಬೇಡಿಕೆಗಳನ್ನು ಈಡೇರಿಸಲು ಹೊಡೆದಾಡುತ್ತಿರುತ್ತಾನೆ, ಅವನ ತಂದೆ, ತಾಯಿ ಮತ್ತು ಅಜ್ಜ, ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಕಣ್ಣಿಂದ ನೋಡಿ ಸುಮ್ಮನಿರಲಾರದೆ ಸಾಲ ಸೋಲ ಮಾಡಿಯಾದರೂ ಆಸ್ಪತ್ರೆಗೆ ತೋರಿಸುತ್ತಾನೆ. ಹೀಗೆ ಹತ್ತಾರು ಸಮಸ್ಯೆಗಳನ್ನು ಹೊತ್ತು ಸಂಸಾರವನ್ನು ದಡ ಸೇರಿಸುವ ಪ್ರಯತ್ನದಲ್ಲಿ ತನ್ನ ಆರೋಗ್ಯದ ಬಗ್ಗೆಯೂ ಲೆಕ್ಕಿಸದೆ ತನ್ನ ಆಸೆಗಳನ್ನು ಬದಿಗೊತ್ತಿ, ತನ್ನ ಯೌವನವನ್ನು ಸಂಸಾರಕ್ಕಾಗಿ ಹಗಲು, ಇರುಳು ದುಡಿಯುವ ವ್ಯಕ್ತಿ ಅಂದರೆ ಅಪ್ಪ ಒಬ್ಬನೇ.

ತಂದೆ ಮತ್ತು ಮಕ್ಕಳ ಸಂಬಂಧದ ಬಗ್ಗೆ ಒಂದು ಹೃದಯಸ್ಪರ್ಷಿ ಉದಾಹರಣೆ ಅಂದರೆ, ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳುಹಿಸುವಾಗ, ಮಗನನ್ನು ವಿದ್ಯಾಭ್ಯಾಸಕ್ಕೆ ಅಥವಾ ಕೆಲಸಕ್ಕೆ ಬೇರೆ ಊರಿಗೆ ಕಳುಹಿಸುವಾಗ ಅವನಿಗೆ ಎಷ್ಟೇ ದುಃಖ ಬಂದರೂ ತೋರಿಸಿಕೊಳ್ಳದೆ ಕಣ್ಣಲ್ಲಿ ತುಂಬಿರುವ ಕಣ್ಣೀರನ್ನು ಒರೆಸಿಕೊಂಡು, ಧೈರ್ಯ ತುಂಬಿ ಕಳುಹಿಸುವ ಅಪ್ಪನ ಸಂಬಂಧ, ಪ್ರೀತಿಯನ್ನು ಎಂದೂ ಮರೆಯಲಾಗದು. ಹೆಂಡತಿ, ತಾಯಿ, ಮಕ್ಕಳು ಮತ್ತು ತನ್ನ ವೃತ್ತಿ ಜವಾಬ್ದಾರಿಗಳನ್ನು ಸಮತೋಲನವಾಗಿ ತೂಗಿಸುವ ಪ್ರಯತ್ನದಲ್ಲಿರುತ್ತಾರೆ. ಆದರೂ ಅವರಿಗೆ ಅಪವಾದಗಳು ತಪ್ಪಿದ್ದಲ್ಲ. ಇದನ್ನು ಅರ್ಥ ಮಾಡಿಕೊಂಡ ಅವರನ್ನು ಸಂತೈಸುವವರು ಅಪರೂಪ.

ಇವತ್ತಿನ ಮಕ್ಕಳು ಮೊಬೈಲ್ ಜೊತೆ ಕಳೆದ ಅರ್ಧ ಭಾಗ ಸಮಯವನ್ನು ತಂದೆ-ತಾಯಿಯ ಜೊತೆ ಕಳೆಯುವುದಿಲ್ಲ ಮತ್ತು ಅವರ ಭಾವನೆಗಳಿಗೆ ಸ್ಪಂದಿಸಿ ಮಾತನಾಡುವುದಿಲ್ಲ. ಇದು ಒಂದು ದೊಡ್ಡ ದುರಂತ.

ನಮ್ಮ ಊಟ, ಬಟ್ಟೆ, ಮನೆ ಮತ್ತು ದಿನನಿತ್ಯದ ಮನೆಯ ಖರ್ಚುಗಳಿಗೆಲ್ಲಾ ಅಪ್ಪನ ಮೇಲೆ ಅವಲಂಬಿತರಾಗಿದ್ದೇವೆ. ಕೆಲವು ಮೂಢನಂಬಿಕೆಯ ಪದ್ಧತಿ ಪ್ರಕಾರ ತಾಯಿಯ ಉಡುಗೆ, ತೊಡುಗೆ, ಕೊರಳಿನ ತಾಳಿ, ಹಣೆಯ ಮೇಲಿನ ಕುಂಕುಮ ಹಚ್ಚಿಕೊಳ್ಳುವುದಕ್ಕೂ ಮತ್ತು ತಾಯಿಯ ಮುತ್ತೈದೆತನಕ್ಕೂ ಅಪ್ಪನೇ ಕಾರಣ ಅಂದರೆ ತಪ್ಪಾಗಲಾರದು.

ತಂದೆ, ತಾಯಿಗಳು ಎಂದೂ ತಮ್ಮ ಸಾವಿನ ಬಗ್ಗೆ ಯೋಚಿಸುವುದಿಲ್ಲ. ಆದರೆ ನನ್ನ ಸಾವಿನ ನಂತರ ತಮ್ಮ ಮಕ್ಕಳ ಸುಖ, ದುಃಖ, ಕಷ್ಟಗಳನ್ನು ಕೇಳಿ ಸಮಾಧಾನಪಡಿಸುವವರು ಇಲ್ಲದಂತಾಗುತ್ತದೆ ಎಂಬುದಕ್ಕಾಗಿ ಚಿಂತಿಸುತ್ತಿರುತ್ತಾರೆ. ಎಷ್ಟು ಜನ್ಮ ಎತ್ತಿ ಬಂದರೂ ಸಹ ತಂದೆ, ತಾಯಿಯರ ಋಣ ತೀರಿಸಲು ಸಾಧ್ಯವಿಲ್ಲ. ತಂದೆಯ ಬೆವರಿನ ಒಂದು ಹನಿ ಋಣವನ್ನು ಕೂಡ ಮಕ್ಕಳಿಗೆ ತೀರಿಸಲು ಸಾಧ್ಯವೇ ಇಲ್ಲ. ಇದು ಸತ್ಯ. ಮಕ್ಕಳ ಏಳಿಗೆಗಾಗಿ ಕೊನೆಗಾಲದಲ್ಲಿ ಬಿಡಿಗಾಸನ್ನೂ ಉಳಿಸಿಕೊಳ್ಳದೆ, ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಅಪ್ಪ ಅಮ್ಮನಿಗೆ ವಯಸ್ಸು ಆದಾಗ ಕಾಲು ಮುರಿದ ಕುಂಟ ಕುದುರೆ, ಅನ್ನಕ್ಕೆ ದಂಡ, ಭೂಮಿಗೆ ಭಾರವೆಂದು ವೃದ್ಧಾಶ್ರಮಕ್ಕೆ ಸೇರಿಸುವ ಇವತ್ತಿನ ಮಕ್ಕಳಿಗೆ ಅಪ್ಪನ ಬೆಲೆ ಕೊನೆಗೂ ತಿಳಿಯುವುದೇ ಇಲ್ಲ. ತಂದೆ, ತಾಯಿಯ ಮನಸ್ಸು ನೋಯಿಸಿ ಸತ್ತ ನಂತರ ನಿತ್ಯ ದಾನ ಮತ್ತು ಧ್ಯಾನ ಮಾಡಿದರೆ ಪಾಪ ಪರಿಹಾರವಾದೀತೇ ?

ಬೆಲೆ ಕಟ್ಟಲಾಗದ ಅಪ್ಪನನ್ನು ಅರ್ಥಮಾಡಿಕೊಳ್ಳುವ ಮಕ್ಕಳಾಗಲೀ, ಗಂಡನಿರುವಾಗ ಅರ್ಥಮಾಡಿಕೊಂಡು ಸ್ಪಂದಿಸುವ ಹೆಂಡತಿಯಾಗಲೀ ಬಹಳ ವಿರಳ. ಅಪ್ಪ ಸತ್ತ ನಂತರವೇ ಅವನ ಬದುಕಿನ ಮಾರ್ಮಿಕ ಸತ್ಯ ಮತ್ತು ಸಂಸಾರಕ್ಕೋಸ್ಕರ ಮಾಡಿದ ತ್ಯಾಗ ತಿಳಿಯುವುದು…

ಇಷ್ಟೆಲ್ಲಾ ತ್ಯಾಗ ಮಾಡುವ ತಂದೆಗೆ ನಾವು ಒಂದು ದಿನವಾದ್ರು ಮನಸ್ಸು ಬಿಚ್ಚಿ ಪ್ರೀತಿಯಿಂದ ಮಾತನಾಡಿಸಿದ್ದೇವೆಯೇ? ಸ್ಪಂದಿಸಿದ್ದೇವೆಯೇ?, ಅವರು ಹೇಳಿದ ಮಾತುಗಳನ್ನು ಕೇಳುತ್ತಿದ್ದೇವೆಯೇ? ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೇವೆಯೇ? ನೀವೇ ಅವಲೋಕಿಸಿ ನೋಡಿ. ಇಂದಿನಿಂದಲೇ ನಿಮ್ಮ ತಪ್ಪನ್ನು ತಿದ್ದಿಕೊಂಡು ತಂದೆ-ತಾಯಿಯನ್ನು ಗೌರವಿಸಿ… ಪ್ರೀತಿಸಿ…

ಫಾದರ್ ಡೇ ಅನ್ನುವುದಕ್ಕಿಂತ ನನ್ನ ದೇವರ ದಿನ ಅಂದರೆ ತಪ್ಪಾಗಲಾರದು. ಪ್ರೀತಿವಿತ್ತ ತಂದೆ, ತಾಯಿಗಳನ್ನು ನಾವೆಲ್ಲರೂ ಪ್ರೀತಿಸೋಣ, ಗೌರವಿಸೋಣ. ಇದೆ ನಾವು ಅವರಿಗೆ ಕೊಡುವ ಬಹುದೊಡ್ಡ ಕೊಡುಗೆ. ಇದರಿಂದ ಮುಂದಿನ ಪೀಳಿಗೆಗೆ ಮಾದರಿಯಾಗೋಣ…


 

ಹೆಚ್.ವಿ. ಮಂಜುನಾಥಸ್ವಾಮಿ
hvmswamy@gmail.com

Leave a Reply

Your email address will not be published.