ಎಳೆಹೊಳೆಯಲ್ಲಿ ಓರ್ವರಿಗೆ ಸೋಂಕು ದೃಢ 

ಮಲೇಬೆನ್ನೂರು, ಜು.8- ಎಳೆಹೊಳೆ ಗ್ರಾಮದ 56 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿರುವುದನ್ನು ಟಿಹೆಚ್ಒ ಡಾ|| ಚಂದ್ರ ಮೋಹನ್ ಖಚಿತ ಪಡಿಸಿದ್ದಾರೆ. ಸೋಂಕಿತ ವ್ಯಕ್ತಿಯನ್ನು ಬುಧವಾರ ಸಂಜೆ ಚಿಕಿತ್ಸೆಗಾಗಿ ದಾವಣಗೆರೆಯ ಸಿ.ಜಿ. ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಳೆದ 5-6 ದಿನಗಳಿಂದ ಅನಾರೋಗ್ಯದ ಕಾರಣ ಕೆ.ಎನ್.ಹಳ್ಳಿಯಲ್ಲಿರುವ ಖಾಸಗಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ವ್ಯಕ್ತಿಯ ಗಂಟಲು ದ್ರವವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ.

ಬುಧವಾರ ಸಂಜೆ ಪರೀಕ್ಷಾ ವರದಿ ಪಾಸಿಟಿವ್ ಬಂದ ಕಾರಣ ಎಳೆಹೊಳೆ ಗ್ರಾಮದ ಮನೆಯಲ್ಲಿದ್ದ ಈತನನ್ನು ಸಿ.ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಲೇಬೆನ್ನೂರು ಹೋಬಳಿಯಲ್ಲಿ ಇದು ಮೊದಲ ಪ್ರಕರಣವಾಗಿದ್ದು, ಗ್ರಾಮೀಣ ಪ್ರದೇಶದ ಜನರು ಆತಂಕಗೊಂಡಿದ್ದಾರೆ. ವಿಷಯ ತಿಳಿದ ತಕ್ಷಣ ಗ್ರಾ.ಪಂ. ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮಕ್ಕೆ ತೆರಳಿ, ಕೊರೊನಾ ಸೋಂಕಿತ ವ್ಯಕ್ತಿಯ ಮನೆಯನ್ನು ಸೀಲ್‌ಡೌನ್ ಮಾಡಿದ್ದು, ಮನೆಯಲ್ಲಿದ್ದ ನಾಲ್ವರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಉಪತಹಶೀಲ್ದಾರ್ ರವಿ ತಿಳಿಸಿದ್ದಾರೆ.

ಗುರುವಾರ ಗ್ರಾಮಕ್ಕೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಲಿದ್ದು, ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆದುಕೊಂಡಿದ್ದ ಕೆ.ಎನ್.ಹಳ್ಳಿಯ ಖಾಸಗಿ ಕ್ಲಿನಿಕ್‌ನ್ನು ಸೀಲ್‌ಡೌನ್‌ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Leave a Reply

Your email address will not be published.