ಅಧಿಕಾರಿಗಳ ಇಬ್ಬಗೆಯ ನೀತಿಗೆ ಸಾರ್ವಜನಿಕರ ಆಕ್ರೋಶ

ಹರಿಹರ, ಜು.7 – ಕೊರೊನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಗಟ್ಟಲು ಅಂಗಡಿ ಮುಂಗಟ್ಟುಗಳು ಮಧ್ಯಾಹ್ನ 2 ಗಂಟೆಗೆ ತಮ್ಮ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದ್ದರೂ ಮದ್ಯದ ಅಂಗಡಿಗಳು ಮಾತ್ರ ಎಗ್ಗಿಲ್ಲದೇ ರಾತ್ತಿ ಹತ್ತರವರೆಗೆ ತೆರೆದಿರುತ್ತವೆ. ಅಧಿಕಾರಿಗಳ ಇಬ್ಬಗೆಯ ನೀತಿಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಹಶೀಲ್ದಾರ್ ಆದೇಶದಂತೆ ಹಣ್ಣು, ತರಕಾರಿ, ದಿನಸಿ ಪದಾರ್ಥ, ಗ್ಯಾರೇಜ್, ಹಾರ್ಡ್‌ವೇರ್, ಬಟ್ಟೆ ಅಂಗಡಿಗಳು, ಹೋಟೆಲ್ ಸೇರಿದಂತೆ ಎಲೆಕ್ಟ್ರಿಕಲ್, ಚಪ್ಪಲಿ ಮುಂತಾದ ಅಂಗಡಿಗಳು ಮಧ್ಯಾಹ್ನ 2 ಗಂಟೆಗೆ ವ್ಯಾಪಾರ ಸ್ಥಗಿತಗೊಳಿಸುವ ಮೂಲಕ ಸರ್ಕಾರದ ಆದೇಶವನ್ನು ಪಾಲಿಸಿವೆ. ಆದರೆ, ಮದ್ಯದ ಅಂಗಡಿಗಳು ರಾತ್ರಿ 10 ರವರೆಗೆ ವ್ಯಾಪಾರ ಮಾಡುವ ಮೂಲಕ ನಿಯಮ ಉಲ್ಲಂಘಿಸಿವೆ ಎಂದು ಜನರು ಕಿಡಿಕಾರಿದ್ದಾರೆ.

ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಮದ್ಯದಂಗಡಿ ಮುಚ್ಚಿದರೆ, ಸರ್ಕಾರಕ್ಕೆ ಬರುವ ಆದಾಯ ಕಡಿಮೆಯಾಗುತ್ತದೆ. ಆದ್ದರಿಂದ ಸ್ಥಗಿತಗೊಳಿಸಲು ಕಷ್ಟವಾಗುತ್ತದೆ. ಮದ್ಯದ ಅಂಗಡಿ ಮುಚ್ಚಿಸುವ ಬಗ್ಗೆ ಉನ್ನತಮಟ್ಟದ ಅಧಿಕಾರಿಗಳಿಂದ ಆದೇಶ ಬಂದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

Leave a Reply

Your email address will not be published.