ಭಯವಿಲ್ಲದೇ ತಿರುಗಾಡುತ್ತಿರುವ ಸಾರ್ವಜನಿಕರು ವ್ಯಾಪಕವಾಗಿ ಹರಡುತ್ತಿದೆ ಕೊರೊನಾ ಸೋಂಕು

ಭಯವಿಲ್ಲದೇ ತಿರುಗಾಡುತ್ತಿರುವ ಸಾರ್ವಜನಿಕರು ವ್ಯಾಪಕವಾಗಿ ಹರಡುತ್ತಿದೆ ಕೊರೊನಾ ಸೋಂಕು

ಹರಪನಹಳ್ಳಿ, ಜು.6- ದೇಶ ವಿದೇಶಗಳಲ್ಲಿ ಕೂಡ ಕೊರೊನಾ ವೈರಸ್‍ನ ಹಟ್ಟಹಾಸ ಮುಂದುವರೆದಿದ್ದು ರಾಜ್ಯದಲ್ಲಿಯೂ ಈ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ತಾಲ್ಲೂಕಿನಲ್ಲಿ ಜನರಿಗೆ ಸೋಂಕು ದೃಢವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ, ಸಾಮಾಜಿಕ ಅಂತರ ಎಂದು ಸರ್ಕಾರದವರು ಬೊಬ್ಬಿಡಿತ್ತಿರುವ ಈ ಸಂದರ್ಭದಲ್ಲಿ ಅದಾವುದು ನಮಗೆ ಸಂಬಂಧವಿಲ್ಲ ಎಂಬಂತೆ ಹರಪನಹಳ್ಳಿ ಪಟ್ಟಣದಲ್ಲಿ ಕುರಿ ಸಂತೆ, ದಿನವಹಿ ಸಂತೆ ಸೇರಿದಂತೆ ಪಟ್ಟಣದ ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ಜನರು ಕೊರೊನಾ ಭಯವಿಲ್ಲದೇ ಮಾಸ್ಕ್‌ ಕಡ್ಡಾಯವಾಗಿ ಹಾಕಿ ಕೊಳ್ಳದೇ ತಿರುಗಾಡುತ್ತಿರುವುದು ಸೊಜಿಗದ ಸಂಗತಿಯಾಗಿದೆ.

ಕೋವಿಡ್ ಆರಂಭವಾಗಿ ಲಾಕ್ ಡೌನ್ ಆದ ನಂತರ ಸಭೆ, ಸಮಾರಂಭ, ಸಂತೆಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಆ ಪ್ರಕಾರ ಪ್ರತಿ ಸೋಮವಾರ ಕೊಟ್ಟೂರು ರಸ್ತೆಯ ಅಗ್ನಿಶಾಮಕ ಠಾಣೆಯ  ಹೊಸ ಕಟ್ಟಡದ ಬಳಿ ನಡೆಯುತ್ತಿದ್ದ ಕುರಿ ಸಂತೆ ಸಹ ರದ್ದಾಗಿತ್ತು. ಆದರೆ ಕಳೆದ 2-3 ವಾರಗಳಲ್ಲಿ ಪ್ರತಿ ಸೋಮವಾರ  ಸ್ಥಳ ಬದಲಾವಣೆ ಮಾಡಿ ಅದೇ ಕೊಟ್ಟೂರು ರಸ್ತೆಯ ಶಿವಕೃಪ ಆಸ್ಪತ್ರೆ ಹಿಂಭಾಗದ ಕುಂಬಾರ ಕಟ್ಟೆ ಕೆರೆ ದಡದಲ್ಲಿ ಕುರಿ ಸಂತೆ ನಡೆಯುತ್ತಲಿದೆ. ಆ ಪ್ರಕಾರ ಜು.6 ರಂದು ಸೋಮವಾರ ಸಹ ಜನಜಂಗುಳಿ ಮಧ್ಯೆ ಕುರಿ ಸಂತೆ ಆರಂಭವಾಗಿ ಸಾಮಾಜಿಕ ಅಂತರ ಎಂಬ ಶಬ್ದಕ್ಕೆ ಬೆಲೆಯೇ ಇಲ್ಲದಂತಾಗಿತ್ತು.  ಆ ಭಾಗದ ನಿವಾಸಿಗಳು ಆಕ್ಷೇಪ ವ್ಯಕ್ತ ಪಡಿಸಿ ದೂರಿದ ಮೇಲೆ  ಸ್ಥಳಕ್ಕಾಗಮಿಸಿದ ಪುರಸಭೆ  ಸಿಬ್ಬಂದಿ ಹಾಗೂ ಪೆೊಲೀಸರು ಕುರಿ ಸಂತೆಯಲ್ಲಿದ್ದ ಖರೀದಿದಾರರಿಗೆ ಬೈದು ತಮ್ಮ ತಮ್ಮ ಊರುಗಳಿಗೆ ಕಳಿಸುವಲ್ಲಿ ಯಶಸ್ವಿಯಾದರು. 

ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಒಂದೊಂದಾಗಿ ಪತ್ತೆಯಾಗುತ್ತಲಿದ್ದು, ಈ ರೀತಿ ಜನರು ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ತಾಲ್ಲೂಕು ಆಡಳಿತದ ಮಾರ್ಗ ಸೂಚಿ ಪಾಲಿಸದೇ ಇರುವುದು ದುರದೃಷ್ಟ ಸಂಗತಿ.  ಈ ಕುರಿತು ಪ್ರತಿಕ್ರಿಯೆ  ನೀಡಿದ  ಎಐವೈಎಫ್‌ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ ಅವರು, ಕೋವಿಡ್ ಆಕ್ರಮಿಸಿರುವ ಇಂತಹ ಸಂಕಷ್ಟದ ಸಮಯದಲ್ಲಿ ಜನರು ಇಷ್ಟೊಂದು ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿ, ಅಧಿಕಾರಿಗಳು ಸಹ ಇಂತಹ ಕಡೆ ಗಮನಹರಿಸಿ ಮುಂದೆ ಆಗುವ ಕೊರೊನಾ ಅನಾಹುತ ತಪ್ಪಿಸಬೀಕಿದೆ ಎಂದರು.

Leave a Reply

Your email address will not be published.