ಸ್ಮಾರ್ಟ್ ಕಾರ್ಡ್ ನೀಡಲು ಆಗ್ರಹ

ಸ್ಮಾರ್ಟ್ ಕಾರ್ಡ್ ನೀಡಲು ಆಗ್ರಹ

ಗ್ರಾಮ ಪಂಚಾಯಿತಿಗೆ ಉದ್ಯೋಗ ಖಾತರಿ ಕಾರ್ಮಿಕರ ಮುತ್ತಿಗೆ

ದಾವಣಗೆರೆ, ಜು.2- ಸ್ಮಾರ್ಟ್ ಕಾರ್ಡ್‌ಗಳನ್ನು ಕೂಡಲೇ ನೀಡುವಂತೆ ಆಗ್ರಹಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಇಂದು ಉದ್ಯೋಗ ಖಾತರಿ ಕಾರ್ಮಿಕರು ತಾಲ್ಲೂಕಿನ ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ನಾಗನೂರು ಗ್ರಾಮದ ಉದ್ಯೋಗ ಖಾತರಿ ಕಾರ್ಮಿಕರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈಗಾಗಲೇ ಉದ್ಯೋಗ ಖಾತರಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿಸ್ತರಿಸಿರುವದರಿಂದ ಅಂತಹವರಿಗೆ ಕೋವಿಡ್-19ನ ಲಾಕ್ ಡೌನ್ ಪರಿಸ್ಥಿತಿಯ ಪರಿಹಾರದ ಹಣ 5 ಸಾವಿರ ದೊರಕಿದೆ. ಸ್ಮಾರ್ಟ್ ಕಾರ್ಡ್ ಸಿಗದ ಉದ್ಯೋಗ ಖಾತರಿ ಕಾರ್ಮಿಕರು ಪರಿಹಾರದ ಹಣ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಆದ್ದರಿಂದ ಉಳಿದೆಲ್ಲಾ ಉದ್ಯೋಗ ಖಾತರಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ಕೂಡಲೇ ನೀಡಬೇಕು ಎಂದು ಪ್ರತಿಭಟನಾಕಾರು ಒತ್ತಾಯಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ, ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳಾದ ಭೂ ಪರಭಾರೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ವಿದ್ಯುತ್ ಉತ್ಪಾದನೆಯನ್ನು ಖಾಸಗಿ ಕಂಪನಿಗಳಿಗೆ ಕೊಡುವುದನ್ನು ಕೈ ಬಿಡುವಂತೆಯೂ ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಆವರಗೆರೆ ಚಂದ್ರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಗಾ ರಂಗನಾಥ್, ಜಿಲ್ಲಾ ಖಜಾಂಚಿ ಗದಿಗೇಶ ಪಾಳ್ಯದ, ಮುಖಂಡರಾದ ನಿಂಗಪ್ಪ, ಶಿವಮೂರ್ತಿ, ಮಂಜಮ್ಮ, ಗಂಗಮ್ಮ, ಹನುಮಂತಪ್ಪ, ತಿಪ್ಪಣ್ಣ, ಈರಮ್ಮ, ಬಸಮ್ಮ, ಪರಶುರಾಮಪ್ಪ, ಹಾಲಮ್ಮ, ಇಂದ್ರಮ್ಮ, ಹೊನ್ನಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. 

Leave a Reply

Your email address will not be published.