ವಿಪಕ್ಷ ಸ್ಥಾನಗಳನ್ನು ತ್ಯಜಿಸುವಂತೆ ಕೋರಿ ರಿಜಿಸ್ಟರ್ ಪತ್ರದ ಮೂಲಕ ನೋಟಿಸ್‌

ದಾವಣಗೆರೆ, ಜು.2- ಪ್ರತಿಪಕ್ಷಗಳು ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದರಿಂದ ವಿಪಕ್ಷ ಸ್ಥಾನ ತ್ಯಜಿಸುವಂತೆ ಕೋರಿ ದಾವಣಗೆರೆಯ ನ್ಯಾಯವಾದಿ ಅನೀಸ್ ಪಾಷಾ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕಾಂಗ್ರೆಸ್‌ನ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಳೆದ ಜೂನ್ 27ರಂದು ರಿಜಿಸ್ಟರ್ ಪತ್ರದ ಮೂಲಕ ನೋಟಿಸ್ ಕೊಟ್ಟಿದ್ದಾರೆ.

ಪ್ರಜೆಗಳಿಂದ ಪ್ರಜೆಗಳಿಗಾಗಿ ನಡೆಸುವ ಆಡಳಿತವೇ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ. ಆಡಳಿತ ಪಕ್ಷ ಎಡವಿದಾಗ ವಿಪಕ್ಷಗಳು ಸರಿಯಾದ ಮಾರ್ಗದರ್ಶನ ನೀಡಿ ಸುಗಮ ಆಡಳಿತಕ್ಕೆ ಸಹಕರಿಸುವ ಕರ್ತವ್ಯ ಮಾಡಬೇಕು. ಆಡಳಿತ ಮತ್ತು ವಿಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕೆಲಸ ಮಾಡಿದರೆ ಮಾತ್ರ ವ್ಯವಸ್ಥೆಯು ಸುಗಮವಾಗಿ ಸಾಗುವುದು. ಜನ ಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಅಧಿಕಾರವನ್ನು ನಡೆಸುವುದು ಸರ್ಕಾರದ ಆದ್ಯ ಕರ್ತವ್ಯ. ಸರ್ಕಾರ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಮೂಲಭೂತ ಕರ್ತವ್ಯಗಳನ್ನು ಚಾಚೂ ತಪ್ಪದೇ ಮಾಡಬೇಕು ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

ಸುಮಾರು 18 ದಿನಗಳಿಂದ ಪ್ರತಿದಿನ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ವಲಸೆ ಕಾರ್ಮಿಕರು ಆಹಾರವಿಲ್ಲದೆ ಸಾಯುತ್ತಿದ್ದಾರೆ. ಎಪಿಎಂಸಿ ಕಾಯ್ದೆ, ಭೂ ಸುಧಾರಣೆ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಪ್ರಯತ್ನ ನಡೆಯುತ್ತಿದೆ. ಹೀಗೆ ಪ್ರತಿದಿನ ಹೊಸ ಹೊಸ ಸಮಸ್ಯೆಗಳು ಉದ್ಭವವಾಗುತ್ತಿವೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳು ಜನಸಾಮಾನ್ಯರ ಸಮಸ್ಯೆಗಳನ್ನು ಸರಿಪಡಿಸುವಲ್ಲಿ, ಸರ್ಕಾರಕ್ಕೆ ಸರಿಯಾದ  ಪ್ರತಿರೋಧ ಒಡ್ಡುವಲ್ಲಿ ಅಥವಾ ಸರಿಯಾದ ಮಾಹಿತಿಯನ್ನು ನೀಡಿ ಜನ ಸಾಮಾನ್ಯರಿಗೆ ಸಹಕಾರಿಯಾಗುವ ರೀತಿಯಲ್ಲಿ ಕೆಲಸ ಮಾಡುವಲ್ಲಿ ವಿಫಲವಾಗಿವೆ. ಹೋರಾಟಗಾರರು ಧ್ವನಿ ಎತ್ತಿದರೆ ಅವರ ಧ್ವನಿಯನ್ನು ಕಾನೂನಿನ ಆಸರೆಯಿಂದ ದಮನ ಮಾಡಲಾಗುತ್ತಿದೆ. ಹೀಗೆ ಸಾಮಾನ್ಯ ಜನರ ವಾಕ್ ಸ್ವಾತಂತ್ರ್ಯವನ್ನು ಕೂಡ ಹರಣ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳು ಮತ್ತು ಪ್ರತಿಪಕ್ಷಗಳು ಧ್ವನಿ ಎತ್ತದೆ ಮೂಕ ಪ್ರೇಕ್ಷಕರಂತಿದ್ದರೆ, ವಿರೋಧ ಪಕ್ಷಗಳು ಮತ್ತು ಪ್ರತಿಪಕ್ಷಗಳು ಇದ್ದೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಲುವುಗಳ ವಿರುದ್ಧ ಹೋರಾಟ ಅಥವಾ ಜನಾಂದೋಲನ ಮಾಡಿ ದೇಶದ ಪ್ರಜೆಗಳಿಗೆ ನೆಮ್ಮದಿಯ ಜೀವನ ಮಾಡಲು ಅನುವು ಮಾಡಬೇಕಾಗಿ ನೋಟಿಸ್‌ನಲ್ಲಿ ಕೋರಲಾಗಿದೆ. ತಪ್ಪಿದಲ್ಲಿ ತಮ್ಮ ಸ್ಥಾನಗಳನ್ನು ತ್ಯಜಿಸಿ, ಇಲ್ಲದಿದ್ದರೆ ಸದನಗಳಲ್ಲಿ ಅಥವಾ ಸೂಕ್ತ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ ನ್ಯಾಯ ದೊರಕಿಸಿಕೊಡಲು ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published.