ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಅಧಿಕಾರ ಖಚಿತ

ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಅಧಿಕಾರ ಖಚಿತ

ಜಗಳೂರು : ಆನ್‌ಲೈನ್‌ ಪ್ರತಿಜ್ಞಾ ವಿಧಿಯಲ್ಲಿ ಮಾಜಿ ಶಾಸಕ ರಾಜೇಶ್ ವಿಶ್ವಾಸ

ಜಗಳೂರು, ಜು.2- ರಾಜ್ಯದಲ್ಲಿ ಕೆ.ಪಿ.ಸಿ.ಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪುನಃ ಕಾಂಗ್ರೆಸ್ ಸರ್ಕಾರ‌ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಪಟ್ಟಣದ ಸುಧೀರ್ ರೆಡ್ಡಿ ನಿವಾಸದ ಆವರಣದಲ್ಲಿ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಡಿಜಿಟಲ್ ಆನ್‌ಲೈನ್ ಮೂಲಕ `ಪ್ರತಿಜ್ಞಾ ವಿಧಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಬೆಂಬಲಿಸ ಬೇಕು. ತಳಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ವೈಮನಸ್ಸುಗಳನ್ನು ಸರಿಪಡಿಸಿಕೊಂಡು ಪಕ್ಷ ಬಲವರ್ಧನೆಗೆ ಒತ್ತುಕೊಡಬೇಕಿದೆ.  ತಾಲ್ಲೂಕಿನಲ್ಲಿ ಬಿಜೆಪಿ ಸುಳ್ಳಿನ ಭರವಸೆಯೊಂದಿಗೆ ಮತ ಬ್ಯಾಂಕ್‌ಗಳನ್ನಾಗಿಸಲು ಸಾಧ್ಯವಿಲ್ಲ.  ತಾಲ್ಲೂಕಿನ ಮತದಾರರು ಜಾಗೃತರಾಗಿದ್ದಾರೆ ಎಂದು ಹೇಳಿದರು.

ಕೆ.ಪಿ.ಸಿ.ಸಿ ಸಂಯೋಜಕರಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡ ರಾದ ಚಿತ್ರದುರ್ಗದ ಮೆಹಬೂಬ್ ಕಾತೂನ್ ಮಾತನಾಡಿ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಡಿಜಿಟಲ್ ಆಗಿ ಆನ್‌ಲೈನ್ ಮೂಲಕ ‘ಪ್ರತಿಜ್ಞಾವಿಧಿ’ ಕಾರ್ಯಕ್ರಮ‌ ನಡೆಸಿ, ಡಿ.ಕೆ.ಶಿವಕುಮಾರ್ ಅವರು ಪಕ್ಷದ ಕಾರ್ಯಕರ್ತರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ, ಸಂವಿಧಾನ ಪೀಠಿಕೆ ಓದು, ರಾಷ್ಟ್ರಗೀತೆ ಹಾಡಲಾಯಿತು. ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಶಾಮಿಯಾನದೊಂದಿಗೆ ಬೆಳಿಗ್ಗೆ 12 ರಿಂದ 1 ಗಂಟೆಯವರೆಗೆ  ಕಾಂಗ್ರೆಸ್ ಕಾರ್ಯಕರ್ತರು `ಪ್ರತಿಜ್ಞಾ ವಿಧಿ’ ಕಾರ್ಯಕ್ರಮ ವೀಕ್ಷಿಸಿ ಬೆಂಬಲಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮ್ಮದ್ , ರಾಜ್ಯ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.‌ಪಾಲಯ್ಯ, ಬ್ಲಾಕ್ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸುರೇಶ್‌ಗೌಡ್ರು, ತಿಪ್ಪೇಸ್ವಾಮಿ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೇಣುಗೋಪಾಲ್‌ ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ವೈ.ಎನ್.ಮಂಜುನಾಥ್‌, ಬಿ.ಲೋಕೇಶ್, ಶಂಭುಲಿಂಗಪ್ಪ, ಹಟ್ಟಿ‌ ತಿಪ್ಪೇಸ್ವಾಮಿ, ವೆಂಕಟೇಶ್, ರಮೇಶ್ ಗೊಲ್ಲರಹಟ್ಟಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಕೆಂಚಮ್ಮ ಧನ್ಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.