ಪರಿಹಾರಕ್ಕೆ ಅಸಂಘಟಿತ ಕಾರ್ಮಿಕರಿಂದ ಪ್ರತಿಭಟನೆ

ದಾವಣಗೆರೆ, ಜು. 2- ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೂ  ಕೋವಿಡ್‌-19 ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಸಿಐಟಿಯು ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರು ಪ್ರತಿಭಟನೆ ನಡೆಸಿದರು. 

ಈಗ ಘೋಷಿಸಿರುವ ಹಲವು ವಲಯದ ಕಾರ್ಮಿಕರಿಗೆ ಕೂಡಲೇ ಪರಿಹಾರದ ಹಣ ಪಾವತಿಸಬೇಕು ಮತ್ತು ವಿವಿಧ ವಿಭಾಗಗಳ ನೌಕರರಿಗೆ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕಟ್ಟಡ, ಹಮಾಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಗ್ರಾಮ ಪಂಚಾಯತ್‌ ನೌಕರರು ಮತ್ತು ಸಮಾಜ ಕಲ್ಯಾಣ ಮತ್ತು ಹಿಂದುಳಿದ ಇಲಾಖೆ ಹಾಸ್ಟೆಲ್‌ ಹಾಗೂ ಆರೋಗ್ಯ ಇಲಾಖೆಯ ವಿವಿಧ ಗುತ್ತಿಗೆ ಕಾರ್ಮಿಕರು, ಮಂಡಕ್ಕಿ ಭಟ್ಟಿ ಕಾರ್ಮಿಕರು, ಅಂಗನವಾಡಿ ನೌಕರರು ಭಾಗವಹಿಸಿದ್ದರು.

ಪ್ರತಿಭಟನೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ತಿಮ್ಮಣ್ಣ, ಸಿಐಟಿಯು ರಾಜ್ಯ  ಕಾರ್ಯದರ್ಶಿ ಕೆ.ಮಹಾಂತೇಶ, ಜಿಲ್ಲಾ ಸಿಐಟಿಯು ಜಿಲ್ಲಾ ಸಂಚಾಲಕ ಆನಂದ ರಾಜು, ಕಾರ್ಯದರ್ಶಿ ಎ. ಗುಡ್ಡಪ್ಪ, ಸಂಘಟನಾ ಕಾರ್ಯದರ್ಶಿ ರಫೀಕ್‌, ಚಿನ್ನ ಸಮುದ್ರ ಜಯಣ್ಣ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.