ಸಮಾಜದ ಅಭಿವೃದ್ಧಿ ಪತ್ರಕರ್ತರಿಂದ ಸಾಧ್ಯ: ಡಿಸಿ

ಸಮಾಜದ ಅಭಿವೃದ್ಧಿ ಪತ್ರಕರ್ತರಿಂದ ಸಾಧ್ಯ: ಡಿಸಿ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ದಾವಣಗೆರೆ, ಜು.1- ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ, ಕಣ್ಣಿಗೆ ಕಾಣದ್ದನ್ನು ಪ್ರಚಾರಪಡಿಸುವ ಮತ್ತು ಸರ್ಕಾರಕ್ಕೆ ಉತ್ತಮ ಆಡಳಿತ ನಡೆಸುವಂತೆ ತೋರಿಸಿ ಕೊಡುವುದು ಪತ್ರಕರ್ತರಿಂದ ಮಾತ್ರ ಸಾಧ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಭಿಪ್ರಾಯಪಟ್ಟರು. 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಲಕ್ಷ್ಮಿ ವೃತ್ತದಲ್ಲಿರುವ ಹರ್ಡೇಕರ್ ಮಂಜಪ್ಪ  ಅವರ ಪ್ರತಿಮೆ ಮುಂದೆ ಇಂದು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ  ಕಾರ್ಯಕ್ರಮದಲ್ಲಿ ಹರ್ಡೇಕರ್ ಮಂಜಪ್ಪ ಪ್ರತಿಮೆಗೆ  ಮಾಲಾರ್ಪಣೆ ಮಾಡಿ, ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಪತ್ರಕರ್ತರ ವೃತ್ತಿ ಅತ್ಯಮೂಲ್ಯವಾದದ್ದು, ಸರ್ಕಾರ ಹಾಗೂ ಸಮಾಜದ ಅಭಿವೃದ್ಧಿಯನ್ನು ಪತ್ರಕರ್ತರಿಂದ ಕಾಣಬಹುದು ಎಂದು ತಿಳಿಸಿದರು.

ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ದರಾದ ಹರ್ಡೇಕರ್ ಮಂಜಪ್ಪ ನಗರದಲ್ಲಿ `ಧನುರ್ಧಾರಿ’ ಎಂಬ ಪತ್ರಿಕೆಯನ್ನು ಹೊರಡಿಸಿ ಮೊದಲ ಪತ್ರಕರ್ತರಾಗಿದ್ದಲ್ಲದೆ, ಬಸವೇಶ್ವರ ಜಯಂತಿಯನ್ನು ಆರಂಭಿಸುವುದರಲ್ಲಿಯೂ ಮೊದಲಿಗರಾಗಿದ್ದರು ಎಂದು ಜಿಲ್ಲಾಧಿಕಾರಿಗಳು ಸ್ಮರಿಸಿದರು.  

ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ,   ನಗರದಲ್ಲಿ ಪತ್ರಿಕಾ ಭವನದ ನಿರ್ಮಾಣಕ್ಕೆ ನಿವೇಶನದ ಅವಶ್ಯಕತೆ ಇದ್ದು, ಪಾಲಿಕೆ ಸಭೆಯಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್ ಗಳಲ್ಲಿಯೂ ಸರ್ಕಾರಿ ವಾಚನಾಲಯಗಳ ನಿರ್ಮಾಣಕ್ಕೂ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ ಮಾತನಾಡಿ, ಜಿಲ್ಲೆಯ ಹಿರಿಯ ಪತ್ರಕರ್ತರ ಸೇವೆಯನ್ನು ಸ್ಮರಿಸಿದರು. 

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರುಗಳಾದ ವಿವೇಕ್ ಎಲ್. ಬುದ್ದಿ ಮತ್ತು ರಾಮ್ ಪ್ರಸಾದ್ ಅವರುಗಳನ್ನು ಸನ್ಮಾನಿಸಲಾಯಿತು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಕೆ. ಚಂದ್ರಣ್ಣ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್, ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಹರಿಹರ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಸ್.ಎಸ್ ಬಿರಾದಾರ್, ಪಾಲಿಕೆ ಆರೋಗ್ಯ ಅಧಿಕಾರಿ ಡಾ. ಸಂತೋಷ್, ಶ್ರೀ ಅನ್ನದಾನೀಶ್ವರ ಮಠದ ಕಾರ್ಯದರ್ಶಿ ಎನ್. ಅಡಿವೆಪ್ಪ, ಹಿರಿಯ ಪತ್ರಕರ್ತರುಗಳಾದ ಬಕ್ಕೇಶ್ ನಾಗನೂರು, ಹೆಚ್.ಬಿ. ಮಂಜುನಾಥ್ ಅವರುಗಳು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಂಘದ ಉಪಾಧ್ಯಕ್ಷ ಹೆಚ್.ಎಂ.ಪಿ. ಕುಮಾರ್, ಖಜಾಂಚಿ ಮಾಗನೂರು ಮಂಜಪ್ಪ, ನಿರ್ದೇಶಕರುಗಳಾದ ವಿ. ಬಸವರಾಜಯ್ಯ, ಕಾಕನೂರು ರವಿ, ಕೆ.ಎಂ. ಕೊಟ್ರೇಶ್, ಜಿ.ಎಸ್. ವೀರೇಶ್, ಪ್ರಕಾಶ್, ಎಸ್. ಶಿವಕುಮಾರ್, ಚನ್ನಬಸವ ಶೀಲವಂತ್, ಸಿ.ಎಸ್. ಶಾಮ್, ಸತೀಶ್, ವಿ.ಬಿ. ಅನಿಲಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಇ.ಎಂ. ಮಂಜುನಾಥ  ಸ್ವಾಗತಿಸಿದರು. ನಿರ್ದೇಶಕ ಚನ್ನವೀರಯ್ಯ ನಿರೂಪಿಸಿದರು.

Leave a Reply

Your email address will not be published.