ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಜಿಇಸಿಎಲ್ ಯೋಜನೆ

ಸದ್ಬಳಕೆಗೆ ಡಿಸಿ ಕರೆ

ದಾವಣಗೆರೆ, ಜು.1- ಲಾಕ್‍ಡೌನ್ ಹಿನ್ನೆಲೆಯಲ್ಲಿ ಕುಸಿತ ಕಂಡ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆರ್ಥಿಕ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ಯೋಜನೆಯನ್ನು ಜಾರಿಗೆ ತಂದಿದ್ದು ಜಿಲ್ಲೆಯ ಎಲ್ಲ ಎಂಎಸ್‍ಎಂಇ ಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.

ನಗರದ ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಗ್ಯಾರಂಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್(ಜಿಇಸಿಎಲ್) ಯೋಜನೆ ಕುರಿತು ಎಂಎಸ್‍ಎಂಇ ಗಳು ಮತ್ತು ಬ್ಯಾಂಕರ್‍ಗಳಿಗೆ ಜಾಗೃತಿ ಮೂಡಿಸಲು ಇಂದು ಏರ್ಪಡಿಸಲಾಗಿದ್ದ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆರ್ಥಿಕತೆ ಯನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಜಿಇಸಿಎಲ್ ಸಾಲ ಸೌಲಭ್ಯ ಯೋಜನೆ ಜಾರಿಗೆ ತಂದಿದೆ. ಇದಕ್ಕಾಗಿ 3 ಲಕ್ಷ ಕೋಟಿ  ರೂ. ಅನುದಾನ ಮೀಸಲಿಟ್ಟಿದ್ದು ಅಕ್ಟೋಬರ್ 31 ರೊಳಗೆ ಈ ಯೋ ಜನೆಯ ಸೌಲಭ್ಯ ಪಡೆಯಬೇಕೆಂದು ಕರೆ ನೀಡಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ಸುಶ್ರುತ್ ಡಿ.ಶಾಸ್ತ್ರಿ ಮಾತನಾಡಿ, ಗ್ಯಾರಂ ಟೀಡ್ ಎಮರ್ಜೆನ್ಸಿ ಕ್ರೆಡಿಟ್ ಲೈನ್ (ಜಿಇಸಿಎಲ್) ಯೋಜನೆಯು ಪ್ರಸ್ತುತ ಬ್ಯಾಂಕುಗಳಲ್ಲಿ ವ್ಯವಹಾರ ಮತ್ತು ಸಾಲ ಹೊಂದಿರುವ ಎಂಎಸ್‍ಎಂಇಗಳಿಗೆ ಅವರ ಒಟ್ಟಾರೆ ಸಾಲಕ್ಕೆ ಶೇ.20 ಸಾಲ ನೀಡುವ ಯೋಜನೆಯಾಗಿದೆ ಎಂದರು.

ಕಾಟನ್‍ಮಿಲ್‍ಗಳು, ಗಾರ್ಮೆಂಟ್ಸ್ ಸೇರಿದಂತೆ ಇತರೆ ವ್ಯಾಪಾರ ಉದ್ಯಮಗಳ ಮಾಲೀಕರು ಸಂವಾದದಲ್ಲಿ ಪಾಲ್ಗೊಂಡು ಈ ಯೋಜನೆ ಹಾಗೂ ಇತರೆ ಯೋಜನೆಗಳಿಗೆ ಸಂಬಂಧಿಸಿದಂತೆ ಬ್ಯಾಂಕುಗಳಲ್ಲಿ ಉಂಟಾಗುತ್ತಿರುವ ತೊಡಕುಗಳು ಮತ್ತು ಪರಿಹಾರೋಪಾಯಗಳ ಕುರಿತು ವೇದಿಕೆ ಮೇಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿದರು. 

ಸಭೆಯಲ್ಲಿ ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ, ಎಸ್‍ಬಿಐ ಪ್ರಾದೇಶಿಕ ಪ್ರಬಂಧಕ ಚಲಪತಿರಾವ್, ಕೆನರಾ ಬ್ಯಾಂಕಿನ ವಿಭಾಗೀಯ ಪ್ರಬಂಧಕರಾದ ನಾಗರತ್ನ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಹಾಗೂ ಜಿಲ್ಲೆಯ ವಿವಿಧ ಕ್ಷೇತ್ರದ ಕೈಗಾರಿಕೋದ್ಯಮಿಗಳು ಉಪಸ್ಥಿತರಿದ್ದರು.

Leave a Reply

Your email address will not be published.