ಮನೆಗೆ ಕನ್ನ: ಚಿನ್ನ, ನಗದು ಕಳ್ಳತನ ದರೋಡೆಗೆ ಸಂಚು ಹೂಡಿದ್ದಕ್ಕೆ ಚೆಲ್ಲಿದ ಕಾರದಪುಡಿ ಸುಳಿವು !

ದಾವಣಗೆರೆ, ಜೂ. 30- ಮನೆಗೆ ಕನ್ನ ಹಾಕಿ 4.50 ಲಕ್ಷ ರೂ. ಮೌಲ್ಯದ ಬಂಗಾರದ ಒಡವೆಗಳು ಹಾಗೂ 100 ಗ್ರಾಂ ತೂಕದ ಬೆಳ್ಳಿಯ ವಿವಿಧ ವಸ್ತುಗಳು ಮತ್ತು 31 ಸಾವಿರ ರೂ. ನಗದು ದೋಚಿರುವ ಘಟನೆ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಿನ್ನೆ ರಾತ್ರಿ ನಡೆದಿದೆ.  

ನ್ಯಾಮತಿ ತಾಲ್ಲೂಕು ಚೀಲೂರು ಗ್ರಾಮದ ಜಿ.ಎಸ್. ರಮೇಶ ಎಂಬಾತ ಕಳೆದ ಎರಡು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದ ಹೆಂಡತಿ ಮತ್ತು ಮಕ್ಕಳನ್ನು ಕರೆದುಕೊಂಡು ಬರಲು ನ್ಯಾಮತಿ ನಗರಕ್ಕೆ ರಾತ್ರಿ 7 ಗಂಟೆಗೆ ಮನೆಗೆ ಬೀಗ ಹಾಕಿ ಬೀಗದ ಕೀ ಅನ್ನು ಮನೆಯ ಮುಂಭಾಗದ ತಗಡಿನ ಸಂದಿಯಲ್ಲಿಟ್ಟು ಹೋಗಿದ್ದರು. ವಾಪಸ್ ರಾತ್ರಿ 9.45 ಗಂಟೆಗೆ ಬರುವುದರೊಳಗಾಗಿ ತಗಡಿನ ಸಂದಿಯಲ್ಲಿದ್ದ ಮನೆಯ ಬೀಗದ ಕೀ ನಿಂದ ಬಾಗಿಲು ತೆಗೆದು ಒಳನುಗ್ಗಿ ಚಿನ್ನಾಭರಣ ಮತ್ತು ನಗದು ದೋಚಿದ್ದಾರೆ. ಬಾಗಿಲ ಬಳಿ ಹಾಗೂ ಒಳ ಭಾಗದಲ್ಲಿ ಖಾರದ ಪುಡಿ ಚೆಲ್ಲಿರುವುದು ಕಂಡು ಬಂದಿತು ಎಂದು  ರಮೇಶ ದೂರಿನಲ್ಲಿ ತಿಳಿಸಿದ್ದಾರೆ. ಈ ಪ್ರಕರಣ ಗಮನಿಸಿದಾಗ, ಮನೆಗೆ ನುಗ್ಗಿ ಕಳ್ಳರು ದರೋಡೆ ನಡೆಸಲು ಸಂಚು ರೂಪಿಸಿದ್ದರೇ ಎಂಬ ಅನುಮಾನಕ್ಕೆ ಖಾರದಪುಡಿ ಚೆಲ್ಲಿರುವುದೇ ಸಾಕ್ಷಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ.

Leave a Reply

Your email address will not be published.