ಬದುಕಿಗೆ ಭರವಸೆ ನೀಡುವ ವೈದ್ಯರಿಗೊಂದು ನಮನ…

ಬದುಕಿಗೆ ಭರವಸೆ ನೀಡುವ ವೈದ್ಯರಿಗೊಂದು ನಮನ…

ಇಂದು ರಾಷ್ಟ್ರೀಯ ವೈದ್ಯರ ದಿನ. ಭಾರತ ದೇಶ ಕಂಡ ಅಪ್ರತಿಮ ವೈದ್ಯರು ಹಾಗೂ 14 ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಭಾರತ ರತ್ನ ಪುರಸ್ಕೃತ ಡಾ|| ಬಿಧಾನ್ ಚಂದ್ರ ರಾಯ್ ರವರ ಜನ್ಮ ಮತ್ತು ಮರಣ ದಿನ – ಜುಲೈ 1 ರಾಷ್ಟ್ರೀಯ ವೈದ್ಯರ ದಿನ ಎಂದು ಗುರುತಿಸಲಾಗಿದೆ. ಡಾ|| ಬಿ.ಸಿ ರಾಯ್ ರವರು ದೇಶದ ವೈದ್ಯಕೀಯ ವ್ಯವಸ್ಥೆಗೆ ನೀಡಿರುವ ಅಪಾರ ಕೊಡುಗೆಗೆ ಗೌರವ ಸೂಚಿಸುವ ಜೊತೆಗೆ ಸಮಾಜದಲ್ಲಿ ವೈದ್ಯರ ಪಾತ್ರ, ಶ್ರಮ ಹಾಗೂ ಮಹತ್ವವನ್ನು ಎತ್ತಿಹಿಡಿಯುವ ಉದ್ದೇಶ ಈ ದಿನಾಚರಣೆ ಹೊಂದಿದೆ.  

ಪುರಾಣಗಳಲ್ಲಿ ವೈದ್ಯರ ಬಗ್ಗೆ ಉಲ್ಲೇಖವಾಗಿರುವ ಎರಡು ಶ್ಲೋಕಗಳನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಬಹುದು.  `ಶರೀರೇ ಜರ್ಜರಿಭೂತೆ ವ್ಯಾಧಿಗ್ರಸ್ತೇ ಕಲೆಬರೆ , ಔಷಧಂ ಜಾಹ್ನವಿತೋಯಂ ವೈದ್ಯೋ ನಾರಾಯಣ ಹರಿ’. ಈ ಶ್ಲೋಕದ ಅರ್ಥ- ಮಾನವನ ದೇಹ ರೋಗಗ್ರಸ್ತಗೊಂಡಾಗ ಪವಿತ್ರ ಗಂಗಾ ನೀರಿನಂತಹ ಔಷಧಿ ನೀಡುವ ವೈದ್ಯನು ಭಗವಂತ ನಾರಾಯಣನಿಗೆ ಸಮಾನ ಎಂಬುದು. ಮಾನವ ತಾನು ಅನಾರೋಗ್ಯ ಹೊಂದಿದಾಗ ಮೊದಲು ಹುಡುಕಿಕೊಂಡು ಹೋಗುವುದೇ ವೈದ್ಯರನ್ನು . ಸಾವಿನ ಅಂಚಿನಲ್ಲಿರುವವರನ್ನು ಬದುಕಿಸಿ ಅವರ ಹಾಗೂ ಅವರ ಕುಟುಂಬಕ್ಕೆ ಪುನರ್ಜೀವ ನೀಡುವ ಮಹಾತ್ಮರೇ ವೈದ್ಯರು. ಕಡುಬಡವರಿಂದ ಹಿಡಿದು ಆಗರ್ಭ ಶ್ರೀಮಂತರಿಗೂ ಆರೋಗ್ಯವೇ ಪರಮ ಆಸ್ತಿ. ಇಂತಹ ಬೆಲೆ ಕಟ್ಟಲಾಗದ ಆಸ್ತಿಯನ್ನು ಒದಗಿಸುವ ಕೆಲಸದಲ್ಲಿ ವೈದ್ಯರು ದಿನನಿತ್ಯ ಕಾರ್ಯೋನ್ಮುಖರಾಗಿರುತ್ತಾರೆ. 

“ವೈದ್ಯರಾಜ ನಮಸ್ತುಭ್ಯಂ ಯಮರಾಜ ಸಹೋದರ, ಯಮಸ್ತು ಹರತಿ ಪ್ರಾಣಾನ್ ವೈದ್ಯೋ ಪ್ರಾಣಾನ್ ಧನನ ಚ”.  ಈಗಿನ ಕಾಲಮಾನದ ಯೋಚನಾಲಹರಿಗೆ ಸರಿಹೊಂದುವ ಶ್ಲೋಕವಿದು. ಇದರ ಅರ್ಥ – ವೈದ್ಯನು ಯಮರಾಜನ ಸಹೋದರನಂತೆ, ಯಮರಾಜ ಕೇವಲ ಪ್ರಾಣವನ್ನು ಕಿತ್ತುಕೊಂಡರೆ, ವೈದ್ಯನು ಪ್ರಾಣದ ಜೊತೆ ದುಡ್ಡನ್ನೂ ಸಹ ಕಿತ್ತುಕೊಳ್ಳುತ್ತಾನೆ. ಪ್ರಸ್ತುತ ಪೀಳಿಗೆಯಲ್ಲಿ ವೈದ್ಯರ ಬಗ್ಗೆ ಈ ತರಹದ ಅಭಿಪ್ರಾಯವೇ ಹೆಚ್ಚು. ವೈದ್ಯರನ್ನು ಕೃತಜ್ಞತಾಭಾವದಿಂದ ನೋಡುವವರ ಸಂಖ್ಯೆ ಇಳಿಮುಖವಾಗುತ್ತಿದೆ.

ಈ ಎರಡು ದೃಷ್ಟಿಕೋನದ ನಡುವೆ ವೈದ್ಯರ ಜೀವನೋಪಾಯ ಹಾಗೂ ಅವರ ಬದುಕಿನ ವಾಸ್ತವಿಕ ಚಿತ್ರಣ ಹೇಗಿರುತ್ತದೆ ಎಂಬುದರ ಬಗ್ಗೆ ತುಸು ಗಮನ ಹರಿಸೋಣ. ಪ್ರಸ್ತುತ ಕಾಲಘಟ್ಟದಲ್ಲಿ ಒಬ್ಬ ವೈದ್ಯನಾಗುವುದು ಸುಲಭದ ಮಾತೇನಲ್ಲ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಂದ ಬಂದಿರುವವರಿಗೆ ಅದು ಹರ ಸಾಹಸವೇ ಸರಿ.

ಒಬ್ಬ ತಜ್ಞ ವೈದ್ಯರಾಗಲು 5-6 ವರ್ಷದ MBBS , 1-2 ವರ್ಷದ ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ ಸಿದ್ಧತೆ, 3 ವರ್ಷದ ಸ್ನಾತಕೋತ್ತರ ಟ್ರೈನಿಂಗ್ . ಇದಾದ ನಂತರ ಹಲವರು ಇನ್ನೂ 3 ವರ್ಷದ ಸೂಪರ್ ಸ್ಪೆಷಾಲಿಟಿ ಪದವಿಯನ್ನು ಕೂಡ ಪಡೆಯುತ್ತಾರೆ. ಈ ತೆರನಾಗಿ ಕನಿಷ್ಠ 10-12 ವರ್ಷಗಳ ಕಾಲ ಅವಿರತವಾಗಿ ಶ್ರಮ, ಶ್ರದ್ಧೆ, ಸಹನೆ ತೋರಿ ಅಭ್ಯಾಸ ಮಾಡಿರುತ್ತಾರೆ. ರಾತ್ರಿ-ರಜೆ ಎನ್ನದೆ ಸತತವಾಗಿ 24 – 36 ಗಂಟೆ ಡ್ಯೂಟಿ ಮಾಡುವುದು ಸರ್ವೇಸಾಮಾನ್ಯ, ಜೊತೆಗೆ ಲಕ್ಷಗಟ್ಟಲೆ ಖರ್ಚು ಸಹ ಭರಿಸಬೇಕು. ತಜ್ಞ ವೈದ್ಯರೆಂದು ಮೆಡಿಕಲ್ ಕಾಲೇಜ್‌ಗಳಲ್ಲಿ ಸೇರಿದಾಗ ಲಕ್ಷಗಟ್ಟಲೆ ಸಂಬಳವೇನೂ ಕೊಡುವುದಿಲ್ಲ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಷ್ಟೇ ಉತ್ತಮ ವೇತನ ದೊರೆಯುವುದು. ಆದರೆ ಅದಕ್ಕೆ ತಕ್ಕಷ್ಟೇ ಕೆಲಸದ ಸಮಯ ಹಾಗೂ ಒತ್ತಡವಿರುತ್ತದೆ. ಇರುವ ಕೆಲವೇ ಸರ್ಕಾರಿ ಮೆಡಿಕಲ್ ಕಾಲೇಜ್‌ಗಳಲ್ಲಿ ಹುದ್ದೆ ಸಿಗಲು ಅದೃಷ್ಟ ಹಾಗೂ ಪ್ರಭಾವ ಹೊಂದಿರಬೇಕು. ಸರ್ಕಾರಿ ಹುದ್ದೆ ಸಿಕ್ಕರೂ ಸಹ ತಾವು ಕಲಿತಿರುವ ಆಧುನಿಕ ಜ್ಞಾನ- ಕೌಶಲ್ಯಗಳನ್ನು ಅಳವಡಿಸಲು ಸೂಕ್ತ ವ್ಯವಸ್ಥೆ ಹಾಗೂ ಸೌಲಭ್ಯವಿರುವುದಿಲ್ಲ. 

ಇಂದಿನ ರೋಗಿ ಹಾಗೂ ವೈದ್ಯರ ಸಂಬಂಧ ಕ್ಷೀಣಿಸುತ್ತಿರುವುದಂತೂ ಸತ್ಯ. ಅವರಿಗೆ ವೈದ್ಯರಿಂದ ಅವಾಸ್ತವಿಕ ನಿರೀಕ್ಷೆಗಳು. ಡಾಕ್ಟರ್ ಬಳಿ ಹೋಗುವ ಮುನ್ನವೇ ಗೂಗಲ್ ಮಾಡಿ, ಒಂದು ತೊಂದರೆಗೆ ಹತ್ತಾರು ಪ್ರಶ್ನೆಗಳನ್ನು ಮುಂದಿಡುತ್ತಾರೆ. ಆಸ್ಪತ್ರೆಯಲ್ಲಿ ರೋಗಿ ತೀವ್ರ ತೊಂದರೆಯಿಂದ ICU ನಲ್ಲಿ ಅಡ್ಮಿಟ್ಟಾದರೆ, ಕುಟುಂಬದವರು ವೈದ್ಯರ ಮೇಲೆ ಅನಗತ್ಯ ಸಂಶಯ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ವೈದ್ಯರ ಪ್ರಯತ್ನ ಮೀರಿ ಸಹ ರೋಗಿ ಸಾವನ್ನಪ್ಪಿದರೆ ವೈದ್ಯರ ಮೇಲೆ ಅವಹೇಳನ, ಹಲ್ಲೆ ಮಾಡುವ ಘಟನಾವಳಿಗಳು ಸಾಮಾನ್ಯವಾಗಿವೆ. ಈ ತರಹದ ಉದ್ಧಟತನದಿಂದ ವೈದ್ಯರ ಆತ್ಮವಿಶ್ವಾಸ ಹಾಗೂ ಗೌರವದ ಮೇಲೆ ದೊಡ್ಡ ಪೆಟ್ಟು ಬೀಳುತ್ತದೆ. 

ಇನ್ನೂ ವೈದ್ಯರ ಮೇಲೆ ಬಹು ಸಾಮಾನ್ಯ ಆಪಾದನೆ ಎಂದರೆ ರೋಗಿಗಳನ್ನು ಹೆದರಿಸಿ ಅನಾವಶ್ಯಕ ಪರೀಕ್ಷೆಗಳನ್ನು ಮಾಡುತ್ತಾರೆ , `ಬಡವರ ಸುಲಿಗೆ’, `ಹಗಲು ದರೋಡೆ’ ಎಂಬ ಕಠೋರ ಶಬ್ದಗಳಿಂದ ನಿಂದಿಸುತ್ತಾರೆ. ಈ ರೀತಿ ಹೇಳಿಕೆ ನೀಡುವ ಮುಂಚೆ ಕೊಂಚ ಆಲೋಚನೆ ಮಾಡಬೇಕು. ಮಾನವನ ದೇಹ ದೇವರು ಸೃಷ್ಟಿಸಿರುವ ಒಂದು ವಿಸ್ಮಯ. ಅದು ಯಾವುದೇ ಮಾನವ ನಿರ್ಮಿತ ಯಂತ್ರದಂತೆ ಅಲ್ಲ. ಒಂದೇ ರೋಗ ಬೇರೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಬಹುದು ಹಾಗೂ ಚಿಕಿತ್ಸೆಗೆ ಸ್ಪಂದಿಸುವ ಶಕ್ತಿ ಮತ್ತು ಸಮಯ ಸಹ ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.  ರೋಗಿಯ ಆರ್ಥಿಕ ಪರಿಮಿತಿಯನ್ನು ತಿಳಿದು, ಅಗತ್ಯ ಪರೀಕ್ಷೆಗಳನ್ನು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯ ಸೌಲಭ್ಯಕ್ಕೆ, ತಜ್ಞರ ಪರಿಣಿತಿ, ಸೇವೆಯ ಗುಣಮಟ್ಟದ ಅನುಸಾರ ಶುಲ್ಕವಿರುತ್ತದೆ. ಜನರು ಅವರ ಪರಿಮಿತಿ ತಿಳಿದು, ಸರಿಯಾದ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಉತ್ತಮ ರೀತಿಯ ಸೌಕರ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯ ಗೊಳಿಸಿ, ತಜ್ಞ ವೈದ್ಯರಿಗೆ ಉತ್ತಮ ವೇತನ ನೀಡಿ, ಔಷಧಿಗಳ ದರ ನಿಯಂತ್ರಣ ಮಾಡಿದರೆ ಇಂತಹ ಯಾವ ತಾಪತ್ರಯವೂ ಉದ್ಭವಿಸುವುದಿಲ್ಲ. ಜೊತೆಗೆ ಸರ್ಕಾರಿ MBBS/PG ಸೀಟುಗಳನ್ನು ಹೆಚ್ಚಿಸಿ, ಖಾಸಗಿ ಕಾಲೇಜಿನ ಸೀಟುಗಳ ಶುಲ್ಕ ನಿಯಂತ್ರಣಕ್ಕೆ ತರಬೇಕು. ಆಗ ರೋಗಿಗಳು ಹಾಗೂ ವೈದ್ಯರಿಬ್ಬರಿಗೂ ಅನುಕೂಲವಾಗುತ್ತದೆ. 

ದೇಶದ ಆರೋಗ್ಯ ವ್ಯವಸ್ಥೆಯ ದುಸ್ಥಿತಿಗೆ ವೈದ್ಯರನ್ನು ಬಲಿಪಶು ಮಾಡುವುದು ಯಾವ ರೀತಿ ಸರಿ. ವೈದ್ಯರಾದವರೆಲ್ಲರೂ ಐಷಾರಾಮಿ ಜೀವನವನ್ನೇನು ನಡೆಸುತ್ತಿರುವುದಿಲ್ಲ. ವೃತ್ತಿ ಜೀವನದಲ್ಲಿ ಅವರು ಹಾಕುವ ಶ್ರಮಕ್ಕೆ ಪ್ರತ್ಯುತ್ತರವಾಗಿ ಸಮಾಜದಲ್ಲಿ ಗೌರವ, ಉತ್ತಮ ಆರ್ಥಿಕ ಜೀವನ, ಪಡೆದ ಪರಿಣಿತಿಗೆ ಅರ್ಹ ಶುಲ್ಕ, ವೇತನ ಅಪೇಕ್ಷಿಸುತ್ತಾರೆ. ಜನರು ಹೋಟೆಲ್, ಅಲಂಕಾರ, ಪಾರ್ಲರ್, ಮೋಜು, ಕಾರು ಆಡಂಬರಕ್ಕೆಲ್ಲಾ ಏನನ್ನೂ ಲೆಕ್ಕಿಸದೆ, ಕೇಳಿದಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ ತಮ್ಮ ಆರೋಗ್ಯಕ್ಕೆಂದು ವೈದ್ಯರ ಬಳಿ ಹೋದಾಗ ಸಂಕುಚಿತ ದೃಷ್ಟಿಕೋನವೇಕೆ? 

ಎಲ್ಲಾ ಕ್ಷೇತ್ರಗಳಲ್ಲಿರುವಂತೆ ವೈದ್ಯಕೀಯ ಲೋಕದಲ್ಲಿಯೂ ಕೂಡ ಲೋಪದೋಷಗಳು ಹಾಗೂ ಅಧರ್ಮದ ದಾರಿ ಹಿಡಿದವರು ಇರಬಹುದು. ಹಾಗೆಂದು ಇಡೀ ವೈದ್ಯ  ಸಮೂಹಕ್ಕೆ ನಿಂದಿಸುವುದು ಸಮಂಜಸವಲ್ಲ. ಮಾನವೀಯತೆಯ ಹೆಸರಲ್ಲಿ ಕೇವಲ ಅವರತ್ತ ಬೆರಳು ತೋರಿಸುವಂತಹ ಪರಿಸ್ಥಿತಿ ಎದುರಾಗಿರುವುದು ವಿಪರ್ಯಾಸ. ಮಾಧ್ಯಮ ಹಾಗೂ ಚಲನಚಿತ್ರಗಳಲ್ಲೂ ಸಹ ವೈದ್ಯರನ್ನು ನಕಾರಾತ್ಮಕವಾಗಿ ಬಿಂಬಿಸುವ ಪ್ರಯತ್ನಗಳು ಹೆಚ್ಚಾಗಿವೆ. ಕೊರೊನಾ ಎಂಬ ಮಹಾಮಾರಿ ವಿಶ್ವವನ್ನೆಲ್ಲಾ ಆವರಿಸಿದೆ. ಇಂತಹ ಭಯಾನಕ ಸನ್ನಿವೇಶದಲ್ಲಿಯೂ ಕೂಡ ಎದೆಗುಂದದೆ, ತನ್ನ ಹಾಗೂ ಕುಟುಂಬವನ್ನು ಅಪಾಯದಲ್ಲಿಟ್ಟು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಈ ಅನರ್ಘ್ಯ ಸೇವೆಗೆ ಬೆಲೆ ಕಟ್ಟಲಾಗುವುದೇ? ಕೊರೊನಾ ಅಷ್ಟೇ ಅಲ್ಲ ಈ ತರಹದ ನೂರಾರು ರೋಗಗಳು ಬಂದರೂ, ವೈದ್ಯರು ತನ್ನ ರೋಗಿಯ ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದ್ದಾರೆ, ಹೋರಾಡುತ್ತಿದ್ದಾರೆ, ಮುಂದೆಯೂ ಹೋರಾಡಲು ಸನ್ನದ್ಧ ರಾಗಿದ್ದಾರೆ. 

ರೋಗಿ-ವೈದ್ಯರ ಸಂಬಂಧ ತುಂಬಾ ವಿಶೇಷವಾದದ್ದು. ರೋಗಿಗೆ ಚಿಕಿತ್ಸೆ ನೀಡುವುದರ ಜೊತೆ ಜೊತೆಗೆ, ತೊಂದರೆಗಳನ್ನು ಆಲಿಸುವ ಕಿವಿ, ಭರವಸೆ ಮೂಡಿಸುವ ಮಾತು, ನೋವಿನಲ್ಲಿ ಸಾಥ್ ನೀಡುವ ಕೈ , ತಳಮಳ ಅರ್ಥ ಮಾಡಿಕೊಳ್ಳುವ ಹೃದಯ, ನೋವು ಮರೆಸುವ ತಿಳಿಹಾಸ್ಯ – ವೈದ್ಯರು ಇವನ್ನೆಲ್ಲಾ ನೀಡಿ ರೋಗಿ ಬೇಗನೆ ಚೇತರಿಸಿಕ್ಕೊಳ್ಳವಂತೆ ಮಾಡುತ್ತಾರೆ. ಒಬ್ಬ ರೋಗಿ ಸಾವಿನ ದವಡೆಯಿಂದ ಹೊರಬಂದಾಗ, ಅರಿವಳಿಕೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಸಫಲವಾದಾಗ, ಪ್ರಪಂಚಕ್ಕೆ ಒಂದು ಜೀವವನ್ನು ತಂದಾಗ ವೈದ್ಯನಿಗಾಗುವ ಖುಷಿ- ತೃಪ್ತಿ ಉತ್ತುಂಗ ಮಟ್ಟದ್ದು.  

ವೈದ್ಯ ಬಳಗದ ಕಳಕಳಿಯ ಮನವಿ ಏನೆಂದರೆ, ಅವರನ್ನು ಸಾಮಾನ್ಯ ಮಾನವರೆಂದು ನೋಡಿ. ಅವರನ್ನು ನಾರಾಯಣನಿಗೆ ಹೋಲಿಸಿ ಹಿಗ್ಗಿಸುವುದು ಬೇಡ, ಯಮನ ಸಹೋದರನೆಂದು ಕುಗ್ಗಿಸುವುದು ಬೇಡ. ಅವರ ಪ್ರಯತ್ನಗಳಿಗೆ ಗೌರವಿಸಿ, ಅವರ ಮೇಲಾಗುತ್ತಿರುವ ಅವಹೇಳನ ಹಾಗೂ ಹಲ್ಲೆಗಳನ್ನು ವಿರೋಧಿಸಿ. ವೈದ್ಯರ ಮೇಲೆ ನಂಬಿಕೆ ವಿಶ್ವಾಸ ಹೆಚ್ಚಾಗಲಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವೈಯಕ್ತಿಕ ಹಾಗೂ ಸಮುದಾಯದ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿರುವ ವೈದ್ಯರೆಲ್ಲರಿಗೂ ನನ್ನ ಸೆಲ್ಯೂಟ್.


ಡಾ. ಅಜಿತ್ ಈಟಿ
ಶ್ವಾಸಕೋಶ ತಜ್ಙರು
ದಾವಣಗೆರೆ. 9900806121
ajith.eti1@gmail.com

Leave a Reply

Your email address will not be published.