ಕೊರೊನಾ ವಾರಿಯರ್ಸ್ ಪೊಲೀಸರ ಅನುಭವದ ಮಾತುಗಳು…

ಕೊರೊನಾ ವಾರಿಯರ್ಸ್ ಪೊಲೀಸರ ಅನುಭವದ  ಮಾತುಗಳು…

ಸ್ವಂತ ಅನುಭವಿಸಿದ ಸಿಬ್ಬಂದಿಯ  ಕಷ್ಟಕಾರ್ಪಣ್ಯದ ನೈಜ ಘಟನೆಯ ಚಿತ್ರಣವನ್ನು ತಮ್ಮ ಜಾಗರೂಕತೆಗಾಗಿ ತಮಗೆಲ್ಲಾ ತಿಳಿಸಬಯಸುತ್ತೇನೆ.

ನಮ್ಮ ರಾಜ್ಯದ ಒಂದು ಜಿಲ್ಲೆಯ ಪೊಲೀಸ್ ಠಾಣಾ ಒಬ್ಬ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆಂಬ್ಯುಲೆನ್ಸ್ ಕಳುಹಿಸಲು ಜಿಲ್ಲಾ ಆಡಳಿತದಿಂದ ಹಿಡಿದು ಎಲ್ಲಾ ವೈದ್ಯರುಗಳನ್ನು ಸಂಪರ್ಕಿಸಿದರೂ ಒಂದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಸುಮಾರು 16 ಗಂಟೆಗಳ ಕಾಲ ಜಾತಕ ಪಕ್ಷಿಯಂತೆ ಕಾಯಬೇಕಾಯ್ತು. ಆ ಸಮಯದಲ್ಲಿ ಆತ ಹೇಳಿದ ಒಂದು ಮಾತು ಎಲ್ಲರ ಮನಕಲಕುವಂತಿತ್ತು. `ಸಾರ್ ನನಗೆ ಮನೇಲಿ ಇರಲು ಸಾಧ್ಯವಿಲ್ಲ, ನಮ್ಮವರು, ಅಕ್ಕ ಪಕ್ಕದವರು ನನ್ನನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಲ್ಲಿಂದ ಬೇಗ ಆಸ್ಪತ್ರೆಗೆ ಶಿಫ್ಟ್ ಮಾಡಿಸಿ’ ಎಂದು ಅಂಗಲಾಚುತ್ತಿದ್ದ, ನಮ್ಮ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದವು. ಒಬ್ಬ ಪೊಲೀಸ್‌ಗೆ ಸಮಯಕ್ಕೆ ಸರಿಯಾಗಿ ಕೋವಿಡ್-19 ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಮಾಡಲಾಗದ ಅಸಹಾಯಕತೆ ನಮ್ಮದು. ಇದು ಈಗ `ಕೊರೊನಾ ವಾರಿಯರ್ಸ್’ ಎಂದು ಚಪ್ಪಾಳೆ, ಶಂಕು, ತಮಟೆ ಭಾರಿಸಿ, ದೀಪ ಹಚ್ಚಿ  ಹಲವಾರು ಹೊಗಳಿಕೆ ಪಡೆದ ನಮ್ಮ ಪರಿಸ್ಥಿತಿ ಎಂದು ತೀವ್ರ ನೊಂದು ಹೇಳುತ್ತಾರೆ.

ನಮ್ಮ ರಾಜ್ಯದ ಒಂದು ಜಿಲ್ಲೆಯ ಪೊಲೀಸ್ ಠಾಣೆ ಸೀಲ್‌ಡೌನ್ ಮಾಡಲಾಗಿದೆ. ಆತನೊಂದಿಗೆ ಕೆಲಸ ಮಾಡಿದ ಇತರೆ ಅಧಿಕಾರಿಗಳು, ಸಿಬ್ಬಂದಿಗಳು ತೀವ್ರ ಉದ್ವೇಗಕ್ಕೆ ಒಳಗಾಗಿದ್ದಾರೆ. ಎಲ್ಲರೂ ಕೋವಿಡ್ 19 ಪರೀಕ್ಷೆ ಮಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಟೆಸ್ಟ್ ಮಾಡಿಸಲು ಆಸ್ಪತ್ರೆಯಲ್ಲಿ ನಿರಾಕರಿಸಿದ್ದಾರೆ. ಕೆಲವು ಪೊಲೀಸರು ಹೇಳಿದರೂ ಮಾಡಲಿಲ್ಲ. ನಿಮಗೆಲ್ಲಾ ರೋಗದ ಲಕ್ಷಣಗಳು ಇಲ್ಲ ಎಂಬುದು ಡಾಕ್ಟರ್‌ಗಳ ವಾದ. ಆದರೆ ಕೊರೊನಾ ಪಾಸಿಟಿವ್ ಬಂದ ಪೋಲೀಸರಿಗೂ ಕೊನೆಯವರೆಗೂ ಯಾವುದೇ ಲಕ್ಷಣಗಳೇ ಇರಲಿಲ್ಲ‌.

ಕೊನೆಗೆ  ಒಬ್ಬ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿದ, ಆದರೂ ಇತರೆ ನಮ್ಮ ಸಿಬ್ಬಂದಿಗಳಿಗೆ ಟೆಸ್ಟ್ ಮಾಡಿಸಲು ಒಪ್ಪಲಿಲ್ಲ. ಕೊನೆಗೆ ಒಬ್ಬ ಡಾಕ್ಟರ್ ಸತ್ಯ ಹೇಳಿದರು `ಈಗ ನಮ್ಮ ಜಿಲ್ಲೆಯ ಯಾವುದೇ ಕೋವಿಡ್-19  ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲ, ಆದ್ದರಿಂದ ಟೆಸ್ಟ್ ಮಾಡಬೇಡಿ. ಅವರು ಬೇರೆ ಕಡೆ ಹೋಗಿ ಚಿಕಿತ್ಸೆ ಪಡೆಯಲಿ’  ಎಂದು ಕೆಲವು ಅಧಿಕಾರಿಗಳು ಹೇಳಿದ್ದಾರೆಂದು ತಿಳಿಸಿದರು. 

ಇದು ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳು ಹಾಗೂ ಬೆಂಗಳೂರು ನಗರದ ಪರಿಸ್ಥಿತಿಯೂ ಕೂಡ ಭಿನ್ನವಾಗಿಲ್ಲ. ಕೊನೆಗೆ ವಾದ-ವಿವಾದದ ನಂತರ ನನ್ನೊಬ್ಬನಿಗೆ ಟೆಸ್ಟ್ ಮಾಡಿದರು ಎಂದು ಒಬ್ಬ ಸಿಬ್ಬಂದಿ ಹೇಳಿದರು. ಉಳಿದವರಿಗೆ ಹಾಗೆ ಕಳಿಸಿದರು. ಮಿತ್ರರೇ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ, ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ. ಯಾವುದಕ್ಕೂ ನಿಮ್ಮ ಜಾಗ್ರತೆಯಲ್ಲಿ ನೀವು ಇರುವುದು ಒಳ್ಳೆಯದು. ಮೊನ್ನೆ ಒಬ್ಬ ಪೊಲೀಸ್ ಅಧಿಕಾರಿ ಕೋವಿಡ್ ಆಸ್ಪತ್ರೆಯೊಳಗೆ ಇರುವ ತೊಂದರೆ ಬಗ್ಗೆ ಹೇಳಿ ಕೊಂಡಿದ್ದ. ಇಂದು ಈ ನೋವು  ಕೊರೊನಾ ವಾರಿಯರ್ಸ್‌ಗಳು ಅನುಭವಿಸಿದ ನೊಂದವರ ಮಾತುಗಳು. ಈಗಿನ ವ್ಯವಸ್ಥೆ ಯಂತೆ ಮುಂದುವರೆದರೆ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ ಪರಿಸ್ಥಿತಿ ಊಹಿಸಲೂ ಸಾಧ್ಯವಿಲ್ಲ! ಆದ್ದರಿಂದ ಸರಿಯಾಗಿ ಟೆಸ್ಟ್ ಮಾಡದೆ ಮುಚ್ಚಿ ಹಾಕುವ ಪ್ರಯತ್ನ ನಡೆದರೆ ಮುಂದೆ ದೇವರೇ ಗತಿ !

ನಮ್ಮ ಜನಪ್ರತಿನಿಧಿಗಳ ಸಭೆಗಳು, ಹೇಳಿಕೆಗಳು, ಪ್ರೆಸ್ ಮೀಟ್‌ಗಳು ಏನೋ ಪವಾಡ ಮಾಡುತ್ತವೆ ಎಂದು ಭಾವಿಸಿದರೆ, ಅದು ಕೇವಲ ಭ್ರಮೆ ಅಷ್ಟೇ! ನೀವು ನಿಮ್ಮ ಕರ್ತವ್ಯ ಪ್ರಜ್ಞೆ  ಜೊತೆಗೆ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಪರಿಸ್ಥಿತಿ ಹಾಳಾಗುತ್ತದೆ. ಆದ್ದರಿಂದ ಜಾಗ್ರತೆ ವಹಿಸಿ, ನಿಮ್ಮ ಹಾಗೂ ನಿಮ್ಮ ಕುಟುಂಬದ ರಕ್ಷಣೆ ಮಾಡಿಕೊಳ್ಳಿ, ನನಗೆ ಒಂದು ನಂಬಿಕೆ ಇತ್ತು. ಕನಿಷ್ಠ ಪೊಲೀಸರಿಗೆ ಉತ್ತಮ ಚಿಕಿತ್ಸೆ ಸಿಗುತ್ತದೆ ಅನ್ನುವ ನಂಬಿಕೆ ಸಂಪೂರ್ಣ ಸುಳ್ಳಾಗಿದೆ. ನಮ್ಮ ಅಧಿಕಾರ, ಹುದ್ದೆ, ಸ್ಥಾನಮಾನ ಯಾವುದು ಸಹಾಯಕ್ಕೆ ಖಂಡಿತಾ ಬರುವುದಿಲ್ಲ. ಕೇವಲ ಚಪ್ಪಾಳೆ ಗಿಟ್ಟಿಸಿದರೆ ಸಾಲದು ಬದುಕು ಬೇಕು. ಆದ್ದರಿಂದ ನಿಮ್ಮ ರಕ್ಷಣೆ ನೀವೇ ಮಾಡಿ ಕೊಳ್ಳಬೇಕು. `ಕೊರೊನಾ ವೈರಸ್ ಜೊತೆಗೆ ಬದುಕುವುದನ್ನು ಕಲಿಯಿರಿ ಎಂದರೆ ಕೊರೊನಾ ಅಂಟಿಸಿಕೊಳ್ಳಿ ಎಂದಲ್ಲ’ ಕೊರೊನಾ ವೈರಸ್ ನಿಂದ ದೂರವಿದ್ದು ಸದಾ ಜಾಗೃತರಾಗಿರಿ ಎಂದರ್ಥ.

ದೇಶದಲ್ಲಿ ಕೊರೊನಾ ವಾರಿಯರ್ಸ್‌ಗಳಾದ ಹಲವಾರು ಪೊಲೀಸರು, ಖ್ಯಾತ ವೈದ್ಯರು, ನರ್ಸ್‌ಗಳು ಕರ್ತವ್ಯದಲ್ಲಿದ್ದಾಗಲೇ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನಪ್ಪಿರುವುದು ಅತ್ಯಂತ ವಿಷಾದನೀಯವಾಗಿದೆ. ನಮ್ಮ ರಾಜ್ಯದಲ್ಲಿ 125 ಕ್ಕೂ ಹೆಚ್ಚು ಪೊಲೀಸರು, 37 ಕ್ಕೂ ಹೆಚ್ಚು ವೈದ್ಯರು ಕೊರೊನಾ ಸೋಂಕಿತರಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ವರು ಪೊಲೀಸರು ಮೃತಪಟ್ಟಿದ್ದಾರೆ. ಕೊರೊನಾ ವೈರಸ್ ಸೋಂಕಿನ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬಾರದು. ಆದರೆ ಯಾರೂ ಭಯಬೀತರಾಗುವ ಅವಶ್ಯಕತೆ ಇಲ್ಲ.

  ಪ್ರಸ್ತುತ ಈ ಪುಟ್ಟ ಲೇಖನ ನಿಮ್ಮ ಕಣ್ಣು ತೆರೆಸಲೇಬೇಕು.ಇನ್ನಾದರೂ ಅತ್ಯಂತ ಎಚ್ಚರಿಕೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿರಿ. ನಿಮ್ಮ ಸುತ್ತಮುತ್ತ ಕೊರೊನಾ ಆವರಿಸಿದೆ  ಎಂದು ಭಾವಿಸಿರಿ, ಪ್ರತಿಕ್ಷಣ ಹೆಜ್ಜೆ ಹೆಜ್ಜೆಗೂ ಮೈತುಂಬಾ ಕಣ್ಣಿರಲಿ, ಯಾವುದೇ ನಿರ್ಲಕ್ಷ್ಯಬೇಡ, ನಿಮಗೆ ಕರ್ತವ್ಯ ಎಷ್ಟು ಮುಖ್ಯವೋ, ಜೀವವೂ ಅಷ್ಟೇ ಮುಖ್ಯ ಎಂಬುದನ್ನು  ಅರ್ಥ ಮಾಡಿಕೊಳ್ಳಲೇಬೇಕು. ನಿಮ್ಮನ್ನು ನಂಬಿದ ಹೆಂಡತಿ, ಮಕ್ಕಳು, ತಂದೆ-ತಾಯಿಗಳಿದ್ದಾರೆ. ಯಾರೂ ಅನಾಥರಾಗಬಾರದು. ನಿಮ್ಮ ನಂತರ ನಿಮ್ಮ ಕುಟುಂಬದವರ ಪರಿಸ್ಥಿತಿ ಊಹಿಸಲು ಸಾಧ್ಯವಿಲ್ಲ! ಅಪಾಯಕಾರಿ ಕೊರೊನಾ ವೈರಸ್ ಮಹಾಮಾರಿಯ ಬಗ್ಗೆ ಅತ್ಯಂತ ಎಚ್ಚರಿಕೆಯಿಂದಿರಲು ಕೋರುತ್ತೇನೆ.


ಜಿ. ಎ.ಜಗದೀಶ್
ಪೊಲೀಸ್ ಅಧೀಕ್ಷಕರು(ನಿ)
ga.jagadeesh@gmail.com

 

Leave a Reply

Your email address will not be published.