ಶಿವಶಂಕರ್ ಕೊಲೆ ಸಂಚು ಪ್ರಕರಣ ಆರೋಪಿ ನ್ಯಾಯಾಂಗ ಬಂಧನ

ದಾವಣಗೆರೆ, ಜೂ.29- ಹರಿಹರ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಗುತ್ತಿಗೆದಾರ ಮಂಜುನಾಥ್‌ನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಹರಿಹರದ ಗ್ರೀನ್ ಸಿಟಿ ಅಭಿವೃದ್ಧಿ ಕಾಮಗಾರಿಗೆ  ಆರೋಪಿ ಮಂಜುನಾಥ್ ಯಾವುದೇ ಇಲಾಖೆಗಳಿಂದ ಅನುಮೋದನೆ ಪಡೆಯದೇ ಇರುವ ಬಗ್ಗೆ ಶಿವಶಂಕರ್ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದಿದ್ದರು. ಇದರಿಂದ ಕೆಲವು ಇಲಾಖೆಗಳು ಕಾಮಗಾರಿಗಳನ್ನು ತಡೆಹಿಡಿದಿದ್ದರಿಂದ ವಿಚಲಿತನಾಗಿ ವಿನಯಕುಮಾರ ಮತ್ತು ರಾಕೇಶ್ ಎಂಬುವರೊಂದಿಗೆ ಮಂಜುನಾಥ ಸೇರಿ ತಮ್ಮನ್ನು   ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಶಿವಶಂಕರ್ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಜಿಲ್ಲಾ ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದ ಪೊಲೀಸ್ ಅಧೀಕ್ಷಕ ನರಸಿಂಹ ತಾಮ್ರಧ್ವಜ ಅವರುಗಳ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಎಂ. ಶಿವಪ್ರಸಾದ್, ಹರಿಹರ ಗ್ರಾಮಾಂತರ ಠಾಣೆ  ಸಬ್ ಇನ್ ಸ್ಪೆಕ್ಟರ್ ಡಿ. ರವಿಕುಮಾರ್ ಮತ್ತು ಸಿಬ್ಬಂದಿಗಳು ಇದೇ ದಿನಾಂಕ 15ರಂದು ಪ್ರಕರಣಕ್ಕೆ ಸಂಬಂಧಿಸಿದ ವಿನಯ ಕುಮಾರ್ ಮತ್ತು ರಾಕೇಶ್ ನನ್ನು ಬಂಧಿಸಿದ್ದರು. ದಿನಾಂಕ 20ರಂದು ಮಂಜುನಾಥನನ್ನು ಬಂಧಿಸಿ ನ್ಯಾಯಾ ಲಯಕ್ಕೆ ಹಾಜರುಪಡಿಸಿದ ಪೊಲೀಸರು ನಂತರ ಹೆಚ್ಚಿನ ವಿಚಾರಣೆಗಾಗಿ  ತಮ್ಮ ವಶಕ್ಕೆ ಪಡೆದಿದ್ದರು. 

ವಿಚಾರಣೆ ನಡೆಸಿದ ನಂತರ ಆರೋಪಿಯನ್ನು ನ್ಯಾಯಾಲ ಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶಿಸಿದೆ.

Leave a Reply

Your email address will not be published.