ಹಳ್ಳಿಗಳಿಗೆ ಬಸ್ ಬರ್ತಿಲ್ಲ, ನಮ್ ಕಷ್ಟ ತಪ್ಪಿಲ್ಲ

ಹಳ್ಳಿಗಳಿಗೆ ಬಸ್ ಬರ್ತಿಲ್ಲ, ನಮ್ ಕಷ್ಟ ತಪ್ಪಿಲ್ಲ

ನಗರಕ್ಕೆ ಬರಲು ಕಷ್ಟ ಪಡುತ್ತಿರುವ ಹಳ್ಳಿಗರು, ನಗರ ಆರ್ಥಿಕತೆಗೂ ಪೆಟ್ಟು

ದಾವಣಗೆರೆ, ಜು. 28- ಲಾಕ್‌ಡೌನ್‌ ಸಡಿಲಿಕೆಯಾದರೂ ಬಸ್ಸುಗಳು ಹಳ್ಳಿಗಳತ್ತ ಮುಖ ಮಾಡಿಲ್ಲ. ಕೊಡು-ಕೊಳ್ಳುವಿಕೆಗೆ, ಕೆಲಸ, ಕಾರ್ಯಗಳಿಗೆ ಗ್ರಾಮೀಣರು ನಗರಗಳಿಗೆ ಬರಬೇಕಾದರೆ, ಸ್ವಂತ ವಾಹನಗಳನ್ನೇ ಅವಲಂಬಿಸಬೇಕಿದೆ.  ಪರಿಣಾಮ ನಗರಕ್ಕೆ ಬರುವ ಹಳ್ಳಿಗರ ಸಂಖ್ಯೆಯೂ ಕಡಿಮೆಯಾಗಿದೆ.

ಹಳ್ಳಿಗರು ನಗರಕ್ಕೆ ಬಾರದಿರುವುದು ನಗರ ಪ್ರದೇಶದಲ್ಲಿನ ಆರ್ಥಿಕ ಚಟುವಟಿಕೆಗಳ ಮೇಲೂ ಪೆಟ್ಟು ನೀಡಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನಗರದ ವ್ಯಾಪಾರಗಳು ಆರಂಭವಾಗಿವೆ. ಆದರೆ, ವ್ಯವಹಾರವಿಲ್ಲ. ಇದಕ್ಕೆ ಮುಖ್ಯ ಕಾರಣ ಗ್ರಾಮೀಣ ಪ್ರದೇಶದವರು ನಗರದತ್ತ ಮುಖ ಮಾಡದೇ ಇರುವುದು.

ಬಟ್ಟೆ ಅಂಗಡಿಗಳು, ಆಭರಣದ ಅಂಗಡಿಗಳು, ಹಣ್ಣು-ತರಕಾರಿ ಮಾರುಕಟ್ಟೆ ಸೇರಿದಂತೆ ಕೆಲ ಪ್ರದೇಶಗಳಲ್ಲಿ ವ್ಯವಹಾರ ಇನ್ನೂ ಲಾಭದಾಯಕವಾಗಿಲ್ಲ ಎನ್ನುತ್ತಾರೆ ವರ್ತಕರು. 

ಮುಂಗಾರು ಹಂಗಾಮು ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳೂ ಗರಿಗೆದರಿವೆ. ಆದರೆ ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ವಸ್ತುಗಳ ಖರೀದಿಗೆ ಸಾರಿಗೆ ವ್ಯವಸ್ಥೆ ಇಲ್ಲ. ಇದ್ದವರು ಸ್ವಂತ ವಾಹನ ಅವಲಂಬಿಸಿದ್ದಾರೆ. ವಾಹನಗಳು ಇಲ್ಲದವರು ಪರರನ್ನು ಬೇಡುವುದು ಸಾಮಾನ್ಯವಾಗಿದೆ. ಬಸ್ಸುಗಳು ಯಾವಾಗ ಬರುತ್ತವೆ ಎಂಬ ನಿರೀಕ್ಷೆಯಲ್ಲಿ ಹಳ್ಳಿಗರಿದ್ದಾರೆ.

ಕೆಎಸ್ಸಾರ್ಟಿಸಿ ಬಸ್ಸುಗಳ ಓಡಾಟ ಆರಂಭವಾಗಿದೆಯಾದರೂ ಬೇರೆ ಜಿಲ್ಲೆಗಳಿಗೆ,  ತಾಲ್ಲೂಕುಗಳ ರೂಟ್‌ಗೆ ಮಾತ್ರ ಸೀಮಿತವಾಗಿವೆ. ಹಳ್ಳಿಗಳ ಕಡೆ  ಕೆಂಪು ಬಸ್ಸು ಸುಳಿಯುತ್ತಿಲ್ಲ. ಇನ್ನೂ ಖಾಸಗಿ ಬಸ್ಸುಗಳಂತೂ ಇಲ್ಲವೇ ಇಲ್ಲ.

ರಾಜ್ಯ ಸರ್ಕಾರ ಬಸ್‌ಗಳನ್ನು ಓಡಿಸಲು ಅನುಮತಿ ನೀಡಿದ್ದರೂ ಸಹ, ಸರ್ಕಾರ ವಿಧಿಸಿರುವ ಹಲವಾರು ಷರತ್ತು ಗಳ ಕಾರಣದಿಂದಾಗಿ ಖಾಸಗಿ ಬಸ್‌ ಮಾಲೀಕರಲ್ಲಿ ಆಸಕ್ತಿ ಕಂಡು ಬರುತ್ತಿಲ್ಲ.

ಪ್ರತಿ ಬಸ್‌ನಲ್ಲಿ 30 ಪ್ರಯಾಣಿಕರು ಮಾತ್ರ ಇರಬೇಕು ಎಂಬುದು ಖಾಸಗಿ ಬಸ್‌ಗಳಿಗೆ ಹೊರೆಯಾಗಲಿದೆ. ಕೆಎಸ್ಸಾರ್ಟಿಸಿ ಬಸ್‌ಗಳು ಈ ನಿಯಮ ಪಾಲನೆಯಿಂದ ಅನುಭವಿಸುವ ನಷ್ಟ ಭರಿಸುವುದಾಗಿ ರಾಜ್ಯ ಸರ್ಕಾರ ಸಮ್ಮತಿಸಿದೆ. ಆದರೆ, ಖಾಸಗಿಯವರ ನಷ್ಟ ಭರಿಸುವ ಬಗ್ಗೆ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲದೇ, ಬಸ್ ಮಾಲೀಕರು ಪಡೆದಿರುವ ಸಾಲದ ಬಡ್ಡಿಯನ್ನು ಸರ್ಕಾರವೇ ಭರಿಸಬೇಕು. ಮೂರು ತಿಂಗಳ ಅನುಮತಿ ಶುಲ್ಕಕ್ಕೆ ವಿನಾಯಿತಿ ನೀಡಬೇಕು. ಆರು ತಿಂಗಳು ತೆರಿಗೆ ವಿನಾಯಿತಿ ನೀಡಬೇಕು ಎಂಬ ಖಾಸಗಿ ಬಸ್ ಮಾಲೀಕರ ಬೇಡಿಕೆಯ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ದರ ಏರಿಕೆ ಸಾಧ್ಯತೆ: ದಿನೇ ದಿನೇ ತೈಲ ಬೆಲೆ ಏರಿಕೆಯಾಗುತ್ತಿರುವು ದರಿಂದ  ಖಾಸಗಿ ಬಸ್ ದರ ಏರಿಕೆ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.   ಪ್ರಯಾಣಿಕರ ಮಿತಿ, ರಿಪೇರಿಗೆ ಬಂದ ಬಸ್‌ನ ಭಾಗಗಳ ಸರಿಪಡಿಸುವಿಕೆ, ಸಿಬ್ಬಂದಿಗಳ ವೇತನ, ತೆರಿಗೆ ಮುಂತಾಗಿ ಖರ್ಚುಗಳ ಹೊಣೆ ಹೊತ್ತಿರುವ ಬಸ್ ಮಾಲೀಕರು ದರ ಹೆಚ್ಚಿಸಿ ನಷ್ಟ ಸರಿದೂಗಿಸಿ ಕೊಳ್ಳುವ ಸಾಧ್ಯತೆಯೂ ಇದೆ. ಆದರೆ ದರ ಹೆಚ್ಚಳದ ಬಿಸಿ ತಗಲುವುದು ಮಾತ್ರ ಶ್ರಮಿಕ ವರ್ಗಕ್ಕೆ.

Leave a Reply

Your email address will not be published.