ರಂಗಭೂಮಿಗೆ ದುಡಿದ ಅದಮ್ಯ ಶಕ್ತಿ ಸಿಜಿಕೆ

ರಂಗಭೂಮಿಗೆ ದುಡಿದ ಅದಮ್ಯ ಶಕ್ತಿ ಸಿಜಿಕೆ

ಕುಂಬಳೂರಿನ ಕೆ.ಎನ್. ಹನುಮಂತಪ್ಪ ಅವರಿಗೆ ಸಿಜಿಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ್‌ ಶ್ಲ್ಯಾಘನೆ

ದಾವಣಗೆರೆ, ಜೂ.28- ಕಲಾಸಕ್ತ ಯುವಕರನ್ನು ಸಂಘಟಿಸಿ ಅವರಲ್ಲಿ ರಂಗ ಪ್ರಜ್ಞೆ ಅರಳಿಸಿ, ಪ್ರತಿಭಾವಂತ ಕಲಾವಿದರನ್ನಾಗಿ ತಯಾರು ಮಾಡಿ ರಂಗಭೂಮಿಗೆ ಕೊಡುಗೆ ನೀಡಿದ ಸೃಜನಶೀಲ ನಿರ್ದೇಶಕ, ರಂಗ ಕಾಳ ಜಿಯ ಅನನ್ಯ ಪ್ರತಿಭೆ ಸಿಜಿಕೆ ಅವರದ್ದಾಗಿತ್ತು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ್‌ ತಿಳಿಸಿದರು.

ನಗರದ ಹದಡಿ ರಸ್ತೆಯ ಮಲ್ಲೇಶ್ವರ ನಿಲಯದಲ್ಲಿರುವ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಕಾರ್ಯಾಲಯದಲ್ಲಿ ಕರ್ನಾಟಕ ರಂಗ ಪರಿಷತ್‌ (ಬೆಂಗಳೂರು) ಹಾಗೂ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಇವರ ಆಶ್ರಯದಲ್ಲಿ ನಿನ್ನೆ ಆಯೋಜಿಸಲಾಗಿದ್ದ ಸಿಜಿಕೆ ರಂಗಭೂಮಿ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಜಿಕೆ ಅವರು ರಂಗಭೂಮಿಯಲ್ಲಿ ಹೊಸತನ್ನು ತರುವ ಪ್ರಯತ್ನದಲ್ಲಿ ಯಶಸ್ಸನ್ನು ಕಂಡಿದ್ದರು. ಸಾಣೇಹಳ್ಳಿಯ ಶಿವಸಂಚಾರದ ಮೂಲಕ ವೈಚಾರಿಕ ನಾಟಕಗಳನ್ನು ನಿರ್ದೇಶಿಸಿ ಜನಮನಕೆ ತಲುಪಿಸುವಲ್ಲಿ ನಿರಂತರ ರಂಗ ಕಾಯಕ ಜೀವಿಯಾಗಿ ಶ್ರಮಿಸಿದರು. ಅಂಥ ವರ ಹೆಸರಿನ ಸಿ.ಜಿ.ಕೆ. ಪ್ರಶಸ್ತಿಯನ್ನು ಹರಿಹ ರದ ಕುಂಬಳೂರಿನ, ಸಾಹಿತ್ಯ –
ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಗುರುತಿಸಿಕೊಂಡಿರುವ, ಸಾಮಾಜಿಕ ಸೇವಾ ಕಾರ್ಯಕರ್ತ ಕೆ.ಎನ್. ಹನುಮಂತಪ್ಪನವರಿಗೆ ಪ್ರದಾನ ಮಾಡುತ್ತಿರುವುದು ಸ್ವಾಗತಾರ್ಹವೆಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎ.ಆರ್‌. ಉಜ್ಜಿನಪ್ಪ  ಮಾತನಾಡಿ, ಸಿಜಿಕೆ ರಂಗಭೂಮಿಯ ಮೂಲಕ ಜನಮನ ದಲ್ಲಿ ಉಳಿದಿದ್ದಾರೆ. ಸಾಣೇಹಳ್ಳಿ ಶ್ರೀಮಠದ ಪೂಜ್ಯರ ಆಶಯಗಳನ್ನು ನಾಟಕ ಕಲೆಯ ಮೂಲಕ ಅನಾವರಣಗೊಳಿಸಿದ ಶ್ರೇಷ್ಠ ನಿರ್ದೇ ಶಕರಾಗಿದ್ದರೆಂದು ಅವರ ಶ್ರಮ-ಸಾಧನೆ ಅಮೂಲ್ಯವೆಂದು ಅಭಿಪ್ರಾಯಪಟ್ಟರು.

ಹಿರಿಯ ಪತ್ರಕರ್ತರೂ ಆದ ರಂಗಭೂಮಿ ಕಲಾವಿದ ಬಸವರಾಜ ಐರಣಿ ಮಾತನಾಡಿ, ಸಿಜಿಕೆ ಅವರ ನಿರ್ದೇಶನದ ಪ್ರಭಾವದಿಂದಲೇ ಅವರ ನಾಟಕಗಳು ಯಶಸ್ವೀ ಪ್ರದರ್ಶನ ಕಾಣುತ್ತಾ ನೂರಾರು ಕಲಾವಿದರು ಹೊರ ಬಂದರು, ಅವರ ರಂಗ ಕಾಯಕ ನಿಷ್ಠೆ, ಕಾರ್ಯ ದಕ್ಷತೆಯಿಂದ ನಾಡಿನೆಲ್ಲೆಡೆ ಚಿರಪರಿಚಿತರಾದರು. ರಂಗಕ್ಕೆ ಅವರ ಕೊಡುಗೆ ಅಪಾರವೆಂದರು.

ಜಗಳೂರಿನ ನಿವೃತ್ತ ಉಪನ್ಯಾಸಕ ಸುಭಾಷ್‌ ಚಂದ್ರ ಅವರು ಮಾತನಾಡಿ, ಸರಳ ಸಮಾರಂಭದಲ್ಲೂ ಶ್ರೇಷ್ಠ ನಿರ್ದೇಶಕರ ಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಶ್ಲಾಘನೀಯವಾದುದು, ಬದುಕಿನುದ್ದಕ್ಕೂ ರಂಗಭೂಮಿಗೆ ದುಡಿದ ಅದಮ್ಯ ಶಕ್ತಿ ಸಿಜಿಕೆ ಎಂದು ಬಣ್ಣಿಸಿದರು. 

ಸಮಾರಂಭದ ವೇದಿಕೆಯಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಜಿಲ್ಲಾಧ್ಯಕ್ಷ ಬಸವರಾಜಪ್ಪ, ಜಾಗತಿಕ ಲಿಂಗಾಯತ ಮಹಾಸಭಾದ ಸದಸ್ಯ ನಿಟುವಳ್ಳಿ ಬಸವರಾಜಪ್ಪ, ಕುಂಬಳೂರಿನ ಪತ್ರಕರ್ತ ಹೆಚ್‌.ಎಂ. ಸದಾನಂದ, ಕೈದಾಳೆ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಹರಿಹರ ತಾಲ್ಲೂಕು ಕುಂಬಳೂರಿನ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ನಿರತರಾದ ಕೆ.ಎನ್‌. ಹನುಮಂತಪ್ಪ ಅವರಿಗೆ ಸಿಜಿಕೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸ್ಫೂರ್ತಿ ಸಂಘದ ಅಧ್ಯಕ್ಷ ಎನ್‌.ಎಸ್‌. ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

Leave a Reply

Your email address will not be published.