ಮಳೆ

ಮಳೆ

ಮಳೆ ಬಂದು ಹೊಳೆ ಹರಿದು
ಬೀಡು ಬಿಟ್ಟ ಕೊಳೆ ತೊಳೆದು
ಬಾಯಾರಿ ಬಾಯ್ಬಿಟ್ಟ ಭುವಿಯನ್ನು
ತಣಿಸುತ್ತ ವಯ್ಯಾರಿ ಗಂಗೆ
ಓಡುತಿಹಳು ಸಡಗರದಿ ಸಾಗರವನರಸುತ್ತ.

ಚಿಗುರಿನ ಹಸಿರನು ನೋಡುತ
ನೇಗಿಲ ಯೋಗಿಯ ಮನದಲಿ ಆಸೆಯು ತುಂಬಿತು
ಒಳ್ಳೆಯ ಪೈರಿನ ಕನಸನು ಕಾಣುತ ನಾಳೆಯ
ಬಾಳಲಿ ಬೆಳಕನು ಅರಸುತ
ವರುಣಗೆ ನಮಿಸಿದನಾ ರೈತ.

ಇಳೆಗೆ ಇಳಿಯಿತು
ದೇವಲೋಕದ ಕಳೆಯು
ಹಳೆಯ ದುರಿತಗಳ ಮರೆಮಾಡಿ
ಪ್ರಕೃತಿಗೆ ನೆಲೆಯಿರಲಿ ಬೆಲೆಯಿರಲಿ
ನಿನ್ನೊಳಿತಿನಾ ಅರಿವಿರಲಿ
ಎಂದೆಚ್ಚರವ ನೀಡುತ್ತ.

ಪ್ರಕೃತಿ ಸೌಮ್ಯತೆ ಬೇಕದು ಜಗಕೆ
ಗಿಡಮರಗಳು ಅಕ್ಕರೆಯಿಂದಿದ್ದರೆ
ಪ್ರಕೃತಿಗಾನಂದ ಪ್ರಕೃತಿ ನಕ್ಕರೆ
ನಮ್ಮಯ ಪ್ರಗತಿ ಹಸಿಯುಸಿರದ
ಮರೆಯಾದರೆ ಪ್ರಕೃತಿ ಪ್ರಕೋಪ.

ತ್ವರೆಯಲಿ ನಡೆವುದು ಜಗದ ವಿರೂಪ!
ಅರಿತುಕೋ ಮಾನವ
ಗಿಡಗಂಟೆಗಳಾ ನಾದ
ಇಲ್ಲವಾದಡೆ ದೊರಕದು
ನಿನಗದು ನಿನ್ನಾಹಾರ
ಗಿಡಗಳ ಜೀವವೆ ನಿನ್ನುಸಿರು
ಅವುಗಳ ಸಾವೇ ನಿನ್ನಳಿವು!


ಅಣ್ಣಾಪುರ್‌ ಶಿವಕುಮಾರ್,  ಲಿಬರ್ಟಿವಿಲ್
ಇಲಿನಾಯ್, ಯುಎಸ್ಎ.
ashivakumar@yahoo.com