ಪರಿಸರ ನಾಶವಾದರೆ ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಸಂಕಷ್ಟ

ಪರಿಸರ ನಾಶವಾದರೆ ಭವಿಷ್ಯದಲ್ಲಿ ಜೀವ ಸಂಕುಲಕ್ಕೆ ಸಂಕಷ್ಟ

ಹರಪನಹಳ್ಳಿ ಪುರಸಭೆ ಸದಸ್ಯ ಹೆಚ್.ಎಂ.ಅಶೋಕ್

ಹರಪನಹಳ್ಳಿ, ಜೂ. 27- ಅರಣ್ಯ ನಾಶದಿಂದ ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು  ಕೃಷಿ, ಆರೋಗ್ಯ, ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾ ಮಗಳು ಬೀರತೊಡಗಿವೆ. ಮಳೆಯ ಅಭಾವದಿಂದಾಗಿ ಪ್ರಕೃತಿ ಅಸಮತೋಲನ ಉಂಟಾಗಿದ್ದು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಪುರಸಭೆ ಸದಸ್ಯ ಹೆಚ್.ಎಂ.ಅಶೋಕ್ ಹಾರಾಳ್ ಹೇಳಿದರು.

ತಮ್ಮ 50ನೇ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಆಚಾರ್ ಬಡಾವಣೆ ಶಿಕ್ಷಕರ ಕಾಲೋನಿಯಲ್ಲಿರುವ ಪಾರ್ಕ್‍ಗಳಲ್ಲಿ ಮತ್ತು ಬಾಪೂಜಿ ನಗರ, ಸಾರ್ವಜನಿಕ ಆಸ್ಪತ್ರೆ ಹಾಗೂ ತರಳಬಾಳು ಕಲ್ಯಾಣ ಮಂಟಪದ ಸುತ್ತಮುತ್ತಲೂ ಬಿಲ್ವ ಪತ್ರೆ, ಬನ್ನಿ, ಬಾದಾಮಿ, ಹೊಂಗೆ, ನೇರಳೆ, ಬೇವು ಸೇರಿದಂತೆ 1000ಕ್ಕೂ ಹೆಚ್ಚು ವಿವಿಧ ಬಗೆಯ ಸಸಿಗಳನ್ನು ನೆಟ್ಟ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಾನವ ದುರಾಸೆಯಿಂದಾಗಿ ಇಂದು ವಿಪರೀತವಾಗಿ ಪರಿಸರ ನಾಶ ಮಾಡುತ್ತಾ ಬಂದಿದ್ದಾನೆ. ಇದೇ ಪ್ರಮಾಣದಲ್ಲಿ ಪರಿಸರ ನಾಶವಾದರೆ, ಭವಿಷ್ಯದಲ್ಲಿ ಜೀವಸಂಕುಲಕ್ಕೆ ಸುಗಮವಾಗಿ ಜೀವನ ನಡೆಸುವುದು ಕಷ್ಟಕರವಾಗುತ್ತದೆ. ಈಗಾಗಲೇ ತೀವ್ರವಾದ ಬರ ಎದುರಿಸುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ನದಿಗಳು ಬತ್ತಿ ಹೋಗಿವೆ. ನದಿಗಳು ಪುನರುಜ್ಜೀವನಗೊಳ್ಳಬೇಕಾದರೆ ಅರಣ್ಯ ರಕ್ಷಣೆ ಅತೀ ಮುಖ್ಯವಾಗಿದೆ. ಹಾಗಾಗಿ ಅರಣ್ಯ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ನಾಗಭೂಷಣ್‌ ಸ್ವಾಮಿ, ನ್ಯಾಯವಾದಿ ಗಂಗಾಧರ್‌ ಗುರುಮಠ್,  ಮುಖಂಡರಾದ ಎ.ಹೆಚ್.ಮೋಹನ್, ಸಿದ್ದಪ್ಪ ರೆಡ್ಡಿ, ಪಿ.ಕೆ.ಎಂ. ಶಂಭುಲಿಂಗ ಸ್ವಾಮಿ, ತೌಡೂರು ಭರ್ಮಣ್ಣ, ಭನ್ಯಪ್ಪ, ಪ್ರಭುದೇವ, ದರ್ಶನ್‌ ಸೇರಿದಂತೆ ಮತ್ತಿತರರು ಇದ್ದರು. 

Leave a Reply

Your email address will not be published.