ಗೇಟ್ ಸಮಸ್ಯೆಗೆ ಅವಳಿ ಕೆಳ ಸೇತುವೆ

ಗೇಟ್ ಸಮಸ್ಯೆಗೆ ಅವಳಿ ಕೆಳ ಸೇತುವೆ

ದಾವಣಗೆರೆ ಜೂ.26 – ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅಶೋಕ ಟಾಕೀಸ್ ರೈಲ್ವೇ ಗೇಟ್‌ ಸಮಸ್ಯೆಯನ್ನು ಎರಡು ಕೆಳ ಸೇತುವೆಗಳನ್ನು ನಿರ್ಮಿಸುವ ಮೂಲಕ ಪರಿಹರಿಸಬೇಕೆಂದು ರೈಲ್ವೇ ಖಾತೆ ಅಧೀನ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.

ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ರೈಲ್ವೇ ಯೋಜನೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ.

ಅಶೋಕ ಟಾಕೀಸ್ ರೈಲ್ವೇ ಗೇಟ್ ಬಳಿ ಒಂದು ಹಾಗೂ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಇನ್ನೊಂದು ಕೆಳ ಸೇತುವೆ (ವೆಂಟ್) ನಿರ್ಮಿಸಬೇಕೆಂಬ ಪ್ರಸ್ತಾಪಕ್ಕೆ ಸಚಿವರು ಸಮ್ಮತಿಸಿದ್ದಾರೆ.

ಈ ಕೆಳ ಸೇತುವೆಗಳಲ್ಲಿ ದೊಡ್ಡ ವಾಹನಗಳು ಸಾಗಲು ಅವಕಾಶ ಕಲ್ಪಿಸಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ ಮಾಡಿಕೊಂಡ ಮನವಿಗೂ ಸಚಿವರು ಅನುಮೋದನೆ ನೀಡಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕೆಳ ಸೇತುವೆಗಳ ಸರ್ವೀಸ್ ರಸ್ತೆಗಾಗಿ ಜಮೀನು ವಶದ ಅಗತ್ಯ ಬರಬಹುದು. ಈ ಸಂದರ್ಭದಲ್ಲಿ ಕೆಳ ಸೇತುವೆಗೆ ಬಿಡುಗಡೆಯಾಗಿರುವ 35 ಕೋಟಿ ರೂ. ಹಣವನ್ನೇ ಬಳಸಲು ಅನುಮತಿ ನೀಡಬೇಕೆಂದು ಕೇಳಿದರು. ಅದಕ್ಕೂ ಸಚಿವರು ಅನುಮೋದನೆ ನೀಡಿದರು.

ರೈಲ್ವೇ ನಿಲ್ದಾಣದ ಎದುರು ಇರುವ ಉಪ ವಿಭಾಗಾಧಿ ಕಾರಿ ಕಚೇರಿಯನ್ನು ಬೇರೆ ಕಡೆ ಸ್ಥಳಾಂತರಿಸಿ, ಆ ಜಾಗವನ್ನು ರೈಲ್ವೇ ಇಲಾಖೆಗೆ ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ರೈಲ್ವೆಯ ಮೂಲಕ ಈ ಜಾಗವನ್ನು ಬೇರೆ ಜಾಗದ ಜೊತೆ ವಿನಿಮಯ ಮಾಡಿಕೊಳ್ಳಲು ಸಿದ್ಧವಿದ್ದೇವೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಜಮೀನು ವಶಪಡಿಸಿಕೊಳ್ಳುವ ಬಗ್ಗೆ ದಾವಣಗೆರೆ ತಾಲ್ಲೂಕಿನ 11 ಗ್ರಾಮಗಳ ಜನರು 40 ತಕರಾರುಗಳನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್ ತಿಳಿಸಿದರು.. ಈ ಯೋಜನೆಗಾಗಿ ಇನ್ನೂ 30 ಎಕರೆ ಹೆಚ್ಚುವರಿಯಾಗಿ ಜಮೀನು ಪಡೆಯಬೇಕಿದೆ. ಈ ಜಾಗ ವನ್ನೂ ಗುರುತಿಸಲಾಗುತ್ತಿದೆ ಎಂದವರು ಹೇಳಿದರು.

ಈ ತಿಂಗಳಲ್ಲೇ ವಶಪಡಿಸಿಕೊಳ್ಳಬೇಕಾದ ಎಲ್ಲಾ 209 ಎಕರೆ ಜಮೀನಿನ ಪ್ರಕ್ರಿಯೆ ಪೂರ್ಣಗೊಳಿಸಲಾ ಗುವುದು ಎಂದು ಜಿಲ್ಲಾಧಿಕಾರಿ ಬೀಳಗಿ ಹೇಳಿದರು.

ಶಿವಮೊಗ್ಗ-ಶಿಕಾರಿಪುರ-ರಾಣೇಬೆನ್ನೂರು ಹೊಸ ರೈಲು ಮಾರ್ಗಕ್ಕಾಗಿ ಎರಡು ಹಂತಗಳಲ್ಲಿ ಒಟ್ಟು 1349.23 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಸರೋಜಾ ಹೇಳಿದಾಗ, ಸಚಿವರು ಇನ್ನು ನಾಲ್ಕು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದರು.

ಸಭೆಯಲ್ಲಿ ಶಾಸಕರಾದ ಎಸ್.ಎ  ರವೀಂದ್ರನಾಥ್, ಪ್ರೊ. ಲಿಂಗಣ್ಣ, ಎಸ್.ವಿ ರಾಮಚಂದ್ರಪ್ಪ, ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಎ.ಕೆ. ಸಿಂಗ್, ಮೈಸೂರು ವಿಭಾಗದ ಡಿಆರ್‍ಎಂ ಅಪರ್ಣ ಗಾರ್ಗ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಎಸಿ ಮಮತಾ ಹೊಸಗೌಡರ್, ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published.