ಖರ್ಗೆಗೆ ಬೆದರಿಕೆ: ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

ಖರ್ಗೆಗೆ ಬೆದರಿಕೆ: ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

ಜಗಳೂರು, ಜೂ.20- ಲೋಕಸಭೆ ವಿರೋಧ ಪಕ್ಷದ ಮಾಜಿ ನಾಯಕ ಹಾಲಿ ರಾಜ್ಯಸಭಾ ಸದಸ್ಯ, ಕಾಂಗ್ರೆಸ್‍ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿ ಬೆದರಿಕೆಯೊಡ್ಡಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ, ಬಂಧಿಸಿ ಕಾನೂನು ಕ್ರಮ ಜರುಗಿಸುವಂತೆ ತಾಲ್ಲೂಕು ಛಲವಾದಿ ಹಾಗೂ ಮಾದಿಗ ಸಮಾಜ ಒತ್ತಾಯಿಸಿದೆ.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ರಾಜ್ಯ ಛಲವಾದಿ ಮಹಾಸಭಾದ ಉಪಾಧ್ಯಕ್ಷ ಹಾಗೂ ಕೆಪಿಸಿಸಿ ಎಸ್‍ಸಿ ವಿಭಾಗದ ಸದಸ್ಯ ಸಿ.ತಿಪ್ಪೇ ಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಉತ್ತಮ ಸಂಸ ದೀಯ ಪಟುವಾಗಿ ಬಿಜೆಪಿ ಹಾಗೂ ಮನುವಾದದ ವಿರುದ್ಧ ನಿರಂತರ ಹೋರಾಟ ಮಾಡುವ ಮೂಲಕ ಶೋಷಿತ ಸಮಾಜಗಳ ಬೆನ್ನೆಲುಬಾಗಿ ನಿಂತಿರುವ ಖರ್ಗೆಯವರಿಗೆ ಬೆದರಿಕೆ ಕರೆ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಎಸ್‍ಸಿ ವಿಭಾಗದ ಉಪಾಧ್ಯಕ್ಷ ಜಿ.ಹೆಚ್.ಶಂಭುಲಿಂಗಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸತ್ಯ ಹೇಳುವವರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದ್ದು, ದೇಶದಲ್ಲಿ ದಲಿತರನ್ನು ದಮನ ಮಾಡುವಂತಹ ಕೃತ್ಯಗಳು ನಡೆಯುತ್ತಿರುವ ಬಗ್ಗೆ ವ್ಯಾಕುಲತೆ ವ್ಯಕ್ತಪಡಿಸಿದರು. 

ಛಲವಾದಿ ಯುವ ವೇದಿಕೆಯ ಅಧ್ಯಕ್ಷ ಧನ್ಯಕುಮಾರ್ ಮಾತನಾಡಿ, ಖರ್ಗೆಯವರು ಶೋಷಿತರು, ರೈತರು, ಮಹಿಳೆಯರು ಹಾಗೂ ದಮನಿತರ ಪರವಾಗಿ ಹೋರಾಟ ಮಾಡಿದ್ದಾರೆ. ಆದರೆ, ಇಂತಹ ನಾಯಕರಿಗೆ ಬೆದರಿಕೆ ಕರೆಗಳು ಬಂದಿರುವ ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದರು. 

ಈ ಸಂದರ್ಭದಲ್ಲಿ ಛಲವಾದಿ ಸಮಾಜದ ಗೌರವಾಧ್ಯಕ್ಷ ಸಿ.ಲಕ್ಷ್ಮಣ, ಅಧ್ಯಕ್ಷ ನಿಜಲಿಂಗಪ್ಪ, ಕಾರ್ಯಾಧ್ಯಕ್ಷ ಕೆ.ಟಿ.ವೀರಸ್ವಾಮಿ, ಮಾದಿಗ ಸಮಾಜದ ಮುಖಂಡ ಗ್ಯಾಸ್ ಓಬಣ್ಣ, ಪಪಂ ಮಾಜಿ ಅಧ್ಯಕ್ಷ ಪಿ.ಮಂಜುನಾಥ್, ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯ ಶಶಿಧರ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.