ಬರದ ನಾಡಿನಲ್ಲಿ ಜಿಲ್ಲಾ ಕೊರೊನಾ ವಾರಿಯರ್‌ಗಳಿಗೆ ಸನ್ಮಾನ

ಬರದ ನಾಡಿನಲ್ಲಿ ಜಿಲ್ಲಾ ಕೊರೊನಾ ವಾರಿಯರ್‌ಗಳಿಗೆ ಸನ್ಮಾನ

ಅಧಿಕಾರಿಗಳ, ವ್ಯೆದ್ಯರ ಅವಿರತ ಸೇವೆ ಶ್ಲ್ಯಾಘನೀಯ : ಜಗಳೂರು ಶಾಸಕ ಎಸ್.ವಿ. ರಾಮಚಂದ್ರ

ಜಗಳೂರು, ಜೂ.19- ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಹಾಗೂ ಡಾಕ್ಟರ್‌ಗಳ ಸೇವೆ ಶ್ಲಾಘನೀಯ ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.

ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಎಸ್.ವಿ.ಆರ್. ಅಭಿಮಾನಿ ಬಳಗ ಹಾಗೂ ಭಾರತೀಯ ಜನತಾ ಪಾರ್ಟಿ ಆಶ್ರಯದಲ್ಲಿ   ಜಿಲ್ಲಾ ಮಟ್ಟದ ಕೊರೊನಾ ವಾರಿಯರ್ ಗಳಿಗೆ ಅಭಿನಂದನೆ ಹಾಗೂ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕರಿಗೆ ಆಹಾರದ ದಿನಸಿ ಕಿಟ್, ಸ್ಯಾನಿಟೈಸರ್, ಮಾಸ್ಕ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಮಟ್ಟದಲ್ಲಿ  ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಎಸ್ಪಿ ಹನುಮಂತರಾಯ ಮತ್ತು ವೈದ್ಯಾಧಿಕಾರಿಗಳು ಒಂದು ತಂಡವಾಗಿ ಸಾಕಷ್ಟು ಪರಿಶ್ರಮದಿಂದ ಕೊರೊನಾ ವೈರಸ್ ಎಂಬ ಮಹಾಮಾರಿ ರೋಗವನ್ನು ನಿಯಂತ್ರಿಸುವಲ್ಲಿ ಹಗಲು ರಾತ್ರಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಕ್ಷೇತ್ರದ ಜನತೆಯ ಪರವಾಗಿ ಅವರನ್ನು ಗೌರವದಿಂದ ಸನ್ಮಾನ ಮಾಡುತ್ತೇನೆ ಎಂದರು.

ತಾಲ್ಲೂಕಿನಲ್ಲಿ ಒಂದೂ ಕೊರೊನಾ ಪ್ರಕರಣ ಇಲ್ಲ. ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ಅಧಿಕಾರಿಗಳು, ತಾ.ಪಂ. ಕಾರ್ಯ ನಿರ್ವಹಣಾಧಿ ಕಾರಿಗಳು, ವೈದ್ಯಾಧಿ ಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಗಳು, ಪೊಲೀಸ್ ಇಲಾಖೆ ಯವರು, ಅಂಗನ ವಾಡಿ, ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿಯೆನ್ನದೆ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಈ ಸಂದರ್ಭದಲ್ಲಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಯಾವುದೇ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ನಾನು ಪ್ರತಿ ಹಳ್ಳಿಗೂ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇನೆ ಎಂದರು.

ತರಳಬಾಳು ಜಗದ್ಗುರು ಶ್ರೀಗಳ ಪ್ರಯತ್ನದಿಂದಾಗಿ ಜಗಳೂರು ಕ್ಷೇತ್ರದ 57 ಕೆರೆಗಳನ್ನು ತುಂಬಿಸುವ ಯೋಜನೆಯ ಕಾಮಗಾರಿ ಭರದಿಂದ ಸಾಗಿದೆ. ಮುಂದಿನ ವರ್ಷ ಮಳೆಗಾಲಕ್ಕೆ ಕೆರೆಗಳಿಗೆ ನೀರು ತುಂಬಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಅಪ್ಪರ್ ಭದ್ರಾ ಯೋಜನೆಯು ಪ್ರಗತಿಯಲ್ಲಿದೆ. ಶೀಘ್ರದಲ್ಲಿಯೇ ಟೆಂಡರ್ ಕರೆಯಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ  ಮಾತನಾಡಿ, ಜನಪ್ರತಿನಿಧಿಗಳು, ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಹಕಾರದಿಂದ ಸರ್ಕಾರದ ನಿರೀಕ್ಷೆಯಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಂದು ತಂಡವಾಗಿ ಕೊರೊನಾ ನಿಯಂತ್ರಣಕ್ಕಾಗಿ ಕೆಲಸ ಮಾಡಿದ್ದೇವೆ ಎಂದರು.

ಒಂದು ಕೋಟಿ ರೂ. ವೆಚ್ಚದಲ್ಲಿ ಲ್ಯಾಬ್ ಸ್ಥಾಪಿಸಲಾಗಿದೆ. ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದ ಅವರು, ನಮ್ಮ ಪಾಲಿನ ಕೆಲಸವನ್ನು ನಾವೆಲ್ಲರೂ ಅತ್ಯಂತ ಶ್ರದ್ಧೆಯಿಂದ ಮಾಡಿದ್ದೇವೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಇನ್ನು ಮುಂದಿನ ದಿನಗಳಲ್ಲಿ ನಮ್ಮ ಜನರು ಮುಖಕ್ಕೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ಗಳನ್ನು ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು ಈ ರೋಗವನ್ನು ನಿಯಂತ್ರಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ತಾ|| ಬಿಜೆಪಿ ಅಧ್ಯಕ್ಷ ಹೆಚ್.ಸಿ. ಮಹೇಶ್‌ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಶಾಂತಮ್ಮ, ದೂಡಾ ಆಯುಕ್ತ ಕುಮಾರಸ್ವಾಮಿ, ವಿಶ್ವನಾಥ್ ಮುದಜ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ, ನಗರ ಯೋಜನಾ ಅಧಿಕಾರಿ ನಜ್ಮಾ, ದಾವಣಗೆರೆ ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ಉಪವಿಭಾಗಧಿಕಾರಿ ತಿಮ್ಮಣ್ಣ ಹುಲ್ಲುಮನಿ, ತಾಲ್ಲೂಕು ದಂಡಾಧಿಕಾರಿ ಗಿರೀಶ್ ಬಾಬು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜು ಡಿ. ಬಣಕಾರ್, ಪೊಲೀಸ್ ಆರಕ್ಷಕ ನಿರೀಕ್ಷಕ ದುರ್ಗಪ್ಪ, ಪೊಲೀಸ್ ಉಪನಿರೀಕ್ಷಕ ಉಮೇಶ್ ಬಾಬು, ಪರಿಶಿಷ್ಟ ಪಂಗಡದ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.