ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ

ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ

ಕ್ಷೇತ್ರದ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ರಾಮಚಂದ್ರ

ಜಗಳೂರು, ಜೂ. 13- ಜನರ ಆಶೀರ್ವಾದ ಇರುವ ವರೆಗೂ ನಾನು ಶಾಸಕನಾಗಿ ಇರುತ್ತೇನೆ. ನನಗೆ ಅಧಿ ಕಾರದ ವ್ಯಾಮೋಹ ಇಲ್ಲ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಪಟ್ಟಣದ ತರಳಬಾಳು ಸಮುದಾಯ ಭವನದಲ್ಲಿ ಎಸ್.ವಿ.ಆರ್ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಕೊರೊನ ವಾರಿಯರ್ಸ್‌ಗೆ ಆಭಿನಂದನೆ ಕಾರ್ಯಕ್ರಮ ಹಾಗೂ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ಹಾಗೂ ಮಾಸ್ಕ್ ಮತ್ತು ಸ್ಯಾನಿಟೈಜರ್  ವಿತರಿಸಿ ಅವರು ಮಾತನಾಡಿದರು.

ನನ್ನ ವಿರುದ್ಧ ಯಾವುದೇ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದೆ ಅಭಿವೃದ್ಧಿ ಕಡೆ ಗಮನಹರಿಸುತ್ತೇನೆ. ಪಟ್ಟಣದಲ್ಲಿ 19-20ನೇ ಸಾಲಿನ ಎಸ್ ಎಫ್ ಸಿ ಯೋಜನೆಯ ನಾಲ್ಕು ಕೋಟಿ ರೂಪಾಯಿಗಳ ಅನುದಾನ ದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದರು.

ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನನ್ನ ವಿರುದ್ಧ ದಾಖಲಾಗಿದ್ದ ಅರ್ಜಿ ವಜಾ ಆಗಿದೆ. ಇದು ಸತ್ಯಕ್ಕೆ ದೊರೆತ ಜಯ ಎಂದರು.

ಕೊರೊನಾ ನಿಯಂತ್ರಣ ಹೋರಾಟದಲ್ಲಿ ಆಶಾ ಕಾರ್ಯಕರ್ತರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ. ಆಹಾರದ ಕಿಟ್ ಜೊತೆಗೆ ಎಲ್ಲಾ 173 ಆಶಾ ಕಾರ್ಯಕರ್ತೆಯರಿಗೆ ತಲಾ 500ರೂ. ಪ್ರೋತ್ಸಾಹ ಧನ ನೀಡುತ್ತಿರುವುದಾಗಿ ಶಾಸಕರು ತಿಳಿಸಿದರು.

ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದೂ ಕೊರೊನಾ ಪ್ರಕರಣಗಳು ವರದಿಯಾಗ ದಿರುವುದರಿಂದ ಸಂತಸವಾಗಿದೆ. ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಒಂದು ತಂಡವಾಗಿ, ಎಸ್.ವಿ.ಆರ್. ಟೀಮ್, ಹೆಸರಿನಲ್ಲಿ ಕ್ಷೇತ್ರದಲ್ಲಿ ಪ್ರತಿ ಹಳ್ಳಿಗೂ ತೆರಳಿ ಜಾಗ್ರತೆ ಮೂಡಿಸಿದ್ದು ಫಲಪ್ರದವಾಗಿದೆ. ಇದಕ್ಕಾಗಿ ಕಂದಾಯ, ಪೊಲೀಸ್, ಆರೋಗ್ಯ, ಪುರಸಭೆ, ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು.

ನಿರ್ಗಮಿತ  ತಹಶೀಲ್ದಾರ್ ತಿಮ್ಮಣ್ಣ ಹುಲ್ಲುಮನಿ, ಸಿಪಿಐ ದುರುಗಪ್ಪ, ಡಾ. ಮಲ್ಲಪ್ಪ, ಬಿಜೆಪಿ ಅಧ್ಯಕ್ಷ ಎಚ್.ಸಿ.ಮಹೇಶ್ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ಎಸ್.ವಿ.ಆರ್ ಅಭಿಮಾನಿ ಬಳಗದ ವತಿಯಿಂದ ಶಾಸಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಶಾಸಕರು ತಮ್ಮ ಬದಲಾಗಿ ಓರ್ವ ಆಶಾ ಕಾರ್ಯಕರ್ತೆಯನ್ನು ಕರೆದು ಸನ್ಮಾನಿಸಿದರು. ಇದೇ ವೇಳೆ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿರುವ ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಅವರನ್ನು ಮತ್ತು ತಾಲ್ಲೂಕಿನ ಎಲ್ಲಾ ಕೊರೊನಾ ವಾರಿಯರ್‌ಗಳನ್ನು  ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಇಓ ಮಲ್ಲಾನಾಯ್ಕ, ಎಸ್ಟಿ ಕಲ್ಯಾಣಾಧಿಕಾರಿ ಮಹೇಶ್, ಜಿ.ಪಂ. ಸದಸ್ಯ ಎಸ್.ಕೆ. ಮಂಜುನಾಥ್, ಬಿ.ಸಿದ್ದಪ್ಪ ಇತರರು ಉಪಸ್ಥಿತರಿದ್ದರು.

ನ್ಯಾಯಾಲಯದಲ್ಲಿ ಜಯ ಸಿಕ್ಕ ಹಿನ್ನೆಲೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಅವರು ಪಟ್ಟಣಕ್ಕೆ ಬರುತ್ತಿದಂತೆ, ಅಭಿಮಾನಿಗಳು ಅಂಬೇಡ್ಕರ್  ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸ್ವಾಗತಿಸಿದರು.

Leave a Reply

Your email address will not be published.