ರೈತೋದ್ಧಾರಕ ಕ್ರಮಗಳು… ಕಣ್ಣೊರೆಸುವ ತಂತ್ರಗಳು…

ರೈತೋದ್ಧಾರಕ ಕ್ರಮಗಳು… ಕಣ್ಣೊರೆಸುವ ತಂತ್ರಗಳು…

ಸ್ವತಂತ್ರ ಬಂದಾಗಿನಿಂದ ನಮ್ಮ ದೇಶದ ಬೆನ್ನೆಲುಬು ರೈತನೆಂದು ಬಿಂಬಿಸುತ್ತಿರುವ ರಾಜಕೀಯ ಪಕ್ಷಗಳು ಹಾಗೂ ಸರ್ಕಾರಗಳು ರೈತನ ಬಾಗಿದ  ಬೆನ್ನೆಲುಬನ್ನು ನೇರವಾಗಿಸುವಲ್ಲಿ ವಿಫಲವಾಗಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೆ ತಂದಿದ್ದು, ಕಾಯ್ದೆಯ ರೂಪು ರೇಷೆಗಳ ಸ್ಪಷ್ಟ ಚಿತ್ರಣ ಮೂಡಿ ಬರುತ್ತಿಲ್ಲ.

ಈ ಕಾಯ್ದೆಯ ಮುಖ್ಯ ಉದ್ದೇಶ, ರೈತ ತಾನು ಬೆಳೆದ ಬೆಳೆಗೆ ದೇಶದ ಯಾವ ಭಾಗದಲ್ಲಿ ಹೆಚ್ಚಿನ ಬೆಲೆ ದೊರಕುವುದೋ ಅಲ್ಲಿ ಕೊಂಡೊಯ್ದು ಮಾರುವಂತಾಗುವುದು ಅಥವಾ ದೇಶದ ಯಾವುದೇ ಭಾಗದ ವರ್ತಕ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸುವಂತಾಗಿ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರಕುವಂತಾಗುವುದು ಎಂಬುದಾಗಿದೆ. ಆದರೆ ಹಾಲಿ ವಾಸ್ತವವಾಗಿ ಬಹುಪಾಲು ರೈತರು ತಾವು ಬೆಳೆದ ಬೆಳೆಯನ್ನು ತಮ್ಮ ಮನೆಯಂಗಳದ ಖಣಗಳಲ್ಲೇ ರಾಶಿ ಹಾಕಿ ಮಾರುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲಿಯೂ ಸಾಕಷ್ಟು ವರ್ತಕರಿದ್ದು, ಪೇಟೆಯಿಂದಲೂ ಬಹಳಷ್ಟು ವರ್ತಕರು ಹಳ್ಳಿಗಳಿಗೆ ತೆರಳಿ ಕೃಷಿ ಉತ್ಪನ್ನಗಳನ್ನು ಖರೀದಿಸುವುದರಿಂದ ಸ್ಪರ್ಧಾತ್ಮಕ ಬೆಲೆ ರೈತರಿಗೆ ಮನೆ ಬಾಗಿಲಲ್ಲೇ ದೊರೆಯುತ್ತಿದೆ. ಇನ್ನೂ ಕೆಲವು ರೈತರು `ಮಾಲೀಕತ್ವ ಪತ್ರ’ದ ಆಧಾರದ ಮೇಲೆ ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಲ್ಲೂ ತಮ್ಮ ಉತ್ಪನ್ನಗಳನ್ನು ಸ್ಪರ್ಧಾತ್ಮಕ ಬೆಲೆಗೆ ಮಾರುತ್ತಿದ್ದಾರೆ. ವಾಸ್ತವ ಸ್ಥಿತಿ ಹೀಗಿದ್ದು, ತಿದ್ದುಪಡಿ ಕಾಯ್ದೆಯ ಉದ್ದೇಶ ಸುಲಭವಾಗಿ ಈಡೇರುತ್ತಿರುವಾಗ ಕಾಯ್ದೆ ಮಾರ್ಪಾಡಿನ ಅವಶ್ಯಕತೆ ಇರಲಿಲ್ಲ ಎನಿಸುತ್ತದೆ, ಜೊತೆಗೆ ಈ ಮಾರ್ಪಾಡಿನ ಹಿಂದೆ ಏನೋ ಅಡಗಿದೆ ಎಂಬ ಅನುಮಾನವೂ ಮೂಡುತ್ತದೆ.

ಸುಗ್ಗಿ ಕಾಲದಲ್ಲಿ ಹೊಸ ಪೈರಿನ ಆವಕ ಜಾಸ್ತಿಯಾಗಿ ಬೇಡಿಕೆ ಕಡಿಮೆಯಾದಾಗ ಬೆಲೆ ಕುಸಿಯುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿ ರೈತರಿಗೆ  ಬೆಂಬಲ ನೀಡಬೇಕು, ಖರೀದಿ ಮಾಡಿದ ಉತ್ಪನ್ನಗಳ ಮೊಬಲಗನ್ನು ಕೂಡಲೇ ನೀಡಬೇಕು. ಅಧಿಕ ಇಳುವರಿ ಮತ್ತು ಉತ್ತಮ ಗುಣಮಟ್ಟದ ಬೆಳೆ ಬೆಳೆಯಲು ಸಹಕಾರಿಯಾಗುವಂತೆ ರೈತರಿಗೆ ಯಾವ ಯಾವ ಭಾಗದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬ ಮಾಹಿತಿ ನೀಡಬೇಕು. ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳು ರಿಯಾಯಿತಿ ದರದಲ್ಲಿ ದೊರಕುವಂತಾಗಬೇಕು. ಕಳಪೆ ಗುಣಮಟ್ಟದ ಸರಕುಗಳಿಗೆ ಕಡಿವಾಣ ಹಾಕಬೇಕು. ಬೇಸಿಗೆಯಲ್ಲಿ ಬೆಳೆಗಳು ಬಾಡದಂತೆ ನಿರಂತರ ವಿದ್ಯುತ್ ನೀಡಬೇಕು. ಆದರೆ ವಾಸ್ತವವಾಗಿ ಪ್ರತಿ ವರ್ಷವೂ ಕಳಪೆ ಬೀಜ ಗೊಬ್ಬರದ ದೂರುಗಳು ಕೇಳಿ ಬರುತ್ತಲೇ ಇವೆ, ಯಾವ ಭಾಗದಲ್ಲಿ ಯಾವ ಬೆಳೆ ಬೆಳೆದರೆ ಸೂಕ್ತ ಎಂಬ ಮಾಹಿತಿ ಕೊರತೆ ಬಹುಪಾಲು ರೈತರನ್ನು ಕಾಡುತ್ತಿದೆ. ನಿರಂತರ ವಿದ್ಯುತ್ ಸರಬ ರಾಜಂತೂ ಕನಸಿನ ಮಾತಾಗಿದೆ. ಬೆಂಬಲ ಬೆಲೆ ಯೋಜನೆಯ ಪ್ರಚಾರ ಸುಗ್ಗಿ ಕಾಲದಲ್ಲಿ ಪ್ರಾರಂಭವಾಗಿ ಸುಗ್ಗಿಯ ಅಂತ್ಯಕ್ಕೆ ಅಲ್ಪ ಸ್ವಲ್ಪ ಖರೀದಿಯೊಂದಿಗೆ ಅಂತ್ಯವಾಗುತ್ತದೆ. ಅದರಲ್ಲೂ ಮಧ್ಯವರ್ತಿಗಳದೇ ಮೇಲುಗೈ ಆಗಿದ್ದು, ನಿಜವಾದ ರೈತರಿಗೆ ಈ ಸೌಲಭ್ಯ ದೊರಕದಂತಾಗಿದೆ.

 

ಪ್ರಸಕ್ತ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡಲ್ಲಿ, ಸಾಮಾನ್ಯವಾಗಿ ರಾಗಿಯ ಹೆಚ್ಚಿನ ಅವಕ ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಪ್ರಾರಂಭವಾಗುವುದರಿಂದ ಖರೀದಿ ಕೇಂದ್ರಗಳು ಈ ಸಮಯದಲ್ಲಿ ಸೂಕ್ತ ಉಗ್ರಾಣ ಮತ್ತು ಹಣದ ವ್ಯವಸ್ಥೆಯೊಂದಿಗೆ ಸನ್ನದ್ಧವಾಗಿರಬೇಕು. ಆದರೆ ಈ ಸಮಯದಲ್ಲಿ ಸರ್ಕಾರ ಖರೀದಿ ಪ್ರಾರಂಭಿಸುವುದಾಗಿ ಬರೀ ಘೋಷಣೆ ಮಾಡಲಾಯಿತೇ ಹೊರತು, ಖರೀದಿ ಪ್ರಾರಂಭಿಸಲಿಲ್ಲ. ಪರಿಣಾಮ ರಾಗಿಯ ಬೆಂಬಲ ಬೆಲೆ ರೂ.3,150 ಇದ್ದರೂ ಸಹ ಮುಕ್ತ ಮಾರುಕಟ್ಟೆಯಲ್ಲಿ ರೂ.1,800 ರಿಂದ 2,000 ದವರೆಗೆ ವ್ಯವಹಾರವಾಗುತ್ತಿತ್ತು. ಈಗ ಏಪ್ರಿಲ್, ಮೇ ತಿಂಗಳಲ್ಲಿ ಸುಗ್ಗಿಯ ಮುಕ್ತಾಯದ ಸಮಯದಲ್ಲಿ ಸರ್ಕಾರ ಖರೀದಿ ಪ್ರಾರಂಭಿಸಿ ಅಂತ್ಯಗೊಳಿಸಿದ್ದು, ಮುಕ್ತ ಮಾರುಕಟ್ಟೆಯಲ್ಲಿ ರಾಗಿಯ ಧಾರಣೆ ರೂ. 2,200 ರಿಂದ 2,500 ರವರೆಗೆ ಇದೆ. ಕಳಪೆ ಗುಣಮಟ್ಟದ ಸರಕುಗಳನ್ನು ಹೊರತುಪಡಿಸಿ, ಉತ್ತಮ ಗುಣಮಟ್ಟದ ಸರಕುಗಳಾದರೂ  ಬೆಂಬಲ ಬೆಲೆಯ ಆಸು ಪಾಸಿನಲ್ಲಿ ವ್ಯಾಪಾರ ವಾಗುವಂತೆ ವಾತಾವರಣ ನಿರ್ಮಾಣ ಮಾಡುವುದು ಸರ್ಕಾರದ  ಕರ್ತವ್ಯ. ಆ ನಿಟ್ಟಿನಲ್ಲಿ ಸರ್ಕಾರ ವಿಫವಾಗಿದೆ. ಹಾಲಿ ಇರುವ ಕಾಯ್ದೆ ಕಾನೂನಿನಡಿಯೇ ಇಂತಹ ವಿಫಲತೆ ಗಳನ್ನು ಸರಿಪಡಿಸಿಕೊಂಡು ರೈತರ ಶ್ರೇಯಸ್ಸಿಗೆ ಶ್ರಮಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾ ರಗಳು ಅಂದರೆ ಅಧಿಕಾರಿಗಳು ಮತ್ತು ರಾಜ ಕಾರಣಿಗಳು ಸ್ವಪ್ರೇರಣೆಯಿಂದ ಮಾಡಬೇಕಿದೆ.

ಇನ್ನು ಡಿಸಿಸಿ ಬ್ಯಾಂಕ್ ಮುಖಾಂತರ ಪ್ಯಾಕ್ಸ್‌ಗಳಿಗೆ ಹಾಗೂ ಪ್ಯಾಕ್ಸ್ ಮುಖಾಂತರ ರೈತರಿಗೆ ನೀಡುವ ಬಡ್ಡಿ ರಹಿತ ಕೃಷಿ ಸಾಲಗಳು, ಒಬ್ಬ ರೈತನಿಗೆ ರೂ. 3 ಲಕ್ಷ ದವರೆಗೆ ಸಾಲ ಎಂಬಂತಹ ಹೇಳಿಕೆಗಳು ಬರೀ ಹೇಳಿಕೆಗಳಾಗಿದ್ದು, ಒಂದು ಜಿಲ್ಲೆಯಲ್ಲಿ ಹೆಚ್ಚೆಂದರೆ 20-30 ಜನಕ್ಕೆ 3 ಲಕ್ಷ ರೂಪಾಯಿ ಸಾಲ ನೀಡಿರಬಹುದು, ಅದೂ ಉಳ್ಳವರಿಗೆ ಅಥವಾ ಪ್ರಭಾವೀ ವ್ಯಕ್ತಿಗಳಿಗೆ, ಇನ್ನು ಶೇ.90-95  ಸಾಮಾನ್ಯ ರೈತರಿಗೆ 5 ರಿಂದ 20 ಸಾವಿರದವರೆಗೆ ಸಾಲ ಮಾತ್ರ ವಿತರಣೆಯಾಗುತ್ತದೆ. ಅಲ್ಲಿಯೂ  ಮಧ್ಯವರ್ತಿಗಳ ಹಾವಳಿಯಿಂದ ಬಡ್ಡಿ ರಹಿತ ಸಾಲಕ್ಕೆ ರೈತ ಬಡ್ಡಿ ಕಟ್ಟಿದಂತಾಗುತ್ತದೆ.

ಇದುವರೆಗೂ ರೈತರಿಗೆ ಉಚಿತವಾಗಿ ನೀಡುತ್ತಿದ್ದ ವಿದ್ಯುತ್ ಸರಬರಾಜಿಗೆ ತಡೆ ತಂದು ಹೊಸ ಕಾಯ್ದೆ ರೂಪಿಸುವ ಪ್ರಯತ್ನಗಳು ನಡೆಯುತ್ತಿವೆ. ಮೇಲೆ ತಿಳಿಸಿದ ಬೆಂಬಲ ಬೆಲೆ, ಬೀಜ, ಗೊಬ್ಬರ ಸರಬರಾಜು, ಬೆಳೆಗಳ ಮಾಹಿತಿ, ಬಡ್ಡಿ ರಹಿತ ಸಾಲ ಎಲ್ಲಾ ಯೋಜನೆಗಳಲ್ಲೂ ಸರ್ಕಾರ ರೈತರನ್ನು ಸಂಪೂರ್ಣವಾಗಿ ತಲುಪಲು ವಿಫಲವಾಗಿ ಮಧ್ಯವರ್ತಿಗಳು ಪಾಲುದಾರರಾಗಿದ್ದಾರೆ. ಆದರೆ ಉಚಿತ ವಿದ್ಯುತ್ ಯೋಜನೆಯಲ್ಲಿ ಮಾತ್ರ ಫಲಾನುಭವಿ ರೈತ ಸಂಪೂರ್ಣ ಫಲವನ್ನು ತಾನೇ ಅನುಭವಿಸುತ್ತಿದ್ದಾನೆ. ಇಲ್ಲಿ ಯಾವ ಮಧ್ಯವರ್ತಿಗಳ ಉಪಟಳವೂ ಇಲ್ಲ. ಬಾಗಿದ ಬೆನ್ನೆಲುಬಿನ ರೈತ ಬದುಕಿರುವುದೇ ಈ ಉಚಿತ ವಿದ್ಯುತ್ ಯೋಜನೆಯಿಂದ. ಈ ಯೋಜನೆ ಸಂಪೂರ್ಣವಾಗಿ ಕೃಷಿ ಉತ್ಪನ್ನ ಬೆಳೆಯಲೇ ವಿನಿಯೋಗವಾಗುತ್ತದೆ. ಆ ಮೂಲಕ ರೈತನ ಏಳಿಗೆಗೆ, ದೇಶದ ಉತ್ಪಾದನೆಗೆ ಭಾರೀ ಕೊಡುಗೆ ನೀಡುತ್ತಿದೆ.ಇಂತಹ ಯೋಜನೆಗಳನ್ನು ಮಾರ್ಪಡಿಸಿ ರೈತನ ಬೆಳವಣಿಗೆಗೆ ಧಕ್ಕೆ ತರುವ  ಮೂಲಕ ದೇಶದ ಉತ್ಪಾದನೆಗೂ ಧಕ್ಕೆ ತರುವ ಕ್ರಮ ಖಂಡನೀಯ. ಯಾವ ರೈತರೂ ಸಾಲ ಮನ್ನಾ ಮಾಡಿ, ಬಡ್ಡಿ ಮನ್ನಾ ಮಾಡಿ ಎಂದು ಸರ್ಕಾರದ ಬಳಿ ಅಂಗಲಾಚಿಲ್ಲ, ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕೀಳು ಮಟ್ಟದ ಯೋಜನೆಗಳ ಆಸೆಗಳನ್ನು ತೋರಿಸಿ ರೈತರನ್ನು ದಾರಿ ತಪ್ಪಿಸುತ್ತಿವೆ. ದೇಶದಲ್ಲಿ ಬಂಡವಾಳ ಶಾಹಿಗಳ ಪರವಾಗಿಯೇ ಬಹಳಷ್ಟು ಕಾನೂನುಗಳು ಮಾರ್ಪಾಡಾಗು ತ್ತಿದ್ದು, ರೈತ ಬಂಡವಾಳ ಶಾಹಿಗಳ ಕಪಿಮುಷ್ಠಿ ಯಲ್ಲಿ ಸಿಲುಕದಂತೆ ಹಾಲಿ ಇರುವ ಕಾನೂನು ಮತ್ತು ಯೋಜನೆಗಳೇ ರೈತನಿಗೆ ನೇರ ತಲುಪುವಂತೆ ಮಾಡಿದಲ್ಲಿ ರೈತನ ಶ್ರೇಯಸ್ಸಿಗೆ ಶ್ರಮಿಸಿದಂತಾಗುವುದು. ಇಲ್ಲವಾದಲ್ಲಿ ರೈತರ ಉದ್ಧಾರಕ್ಕೆ ಜಾರಿಗೊಳಿಸಿದ ಯೋಜನೆಗಳು ಕಣ್ಣೊರೆಸುವ ತಂತ್ರಗಳಂತಾಗುತ್ತವೆ.


ಐಗೂರು ಸಿ. ಚಂದ್ರಶೇಖರ್‌
ದಾವಣಗೆರೆ.
ಮೊ: 98445 37171