ಹೋಟೆಲ್, ಬೇಕರಿಗಳಿಗೆ ಮುಖ್ಯಾಧಿಕಾರಿ ಭೇಟಿ : ಪರಿಶೀಲನೆ

ಹೋಟೆಲ್, ಬೇಕರಿಗಳಿಗೆ  ಮುಖ್ಯಾಧಿಕಾರಿ ಭೇಟಿ : ಪರಿಶೀಲನೆ

ಹೊನ್ನಾಳಿ, ಜೂ.8- ಕೋವಿಡ್-19 ಲಾಕ್‌ಡೌನ್‌ ಮತ್ತಷ್ಟು ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಪ.ಪಂ. ಮುಖ್ಯಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪಟ್ಟಣದ ಹೋಟೆಲ್, ಬೇಕರಿಗಳಿಗೆ ಭೇಟಿ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸಿದರು.

ನಿಯಮಗಳನ್ನು ಪಾಲನೆ ಮಾಡದ ಕೆಲವು ಹೋಟೆಲ್-ಬೇಕರಿಗಳಿಂದ ಅವಧಿ ಮೀರಿದ ಪಾನೀಯಗಳನ್ನು ಮಾರಾಟ ಮಾಡಿದ್ದಕ್ಕಾಗಿ ಎಚ್ಚರಿಕೆ ನೀಡಲಾಯಿತು. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾಸ್ಕ್‌ ಧರಿಸದ 70 ವಾಹನ ಸವಾರರಿಂದ ತಲಾ 200 ರೂ.ಗಳಂತೆ 14 ಸಾವಿರ ರೂ. ದಂಡ ವಸೂಲಿ ಮಾಡಲಾಯಿತು.

ಮುಖ್ಯಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ ಅವರು, ಹೋಟೆಲ್‌ಗಳಲ್ಲಿ ಸ್ಯಾನಿಟೈಜರ್‌ ಬಳಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ಟೇಬಲ್‌ಗೆ ಇಬ್ಬರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಬಿಸಿ ನೀರನ್ನು ಕಡ್ಡಾಯವಾಗಿ ಕೊಡಬೇಕು. ಕೈಗಳಿಗೆ ಗ್ಲೌಸ್‌ ಹಾಕಿಕೊಂಡೇ ತಿಂಡಿ, ಊಟ ವಿತರಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪಪಂ ಸಿಬ್ಬಂದಿ ನಾಗೇಶ್, ಅಶೋಕ್, ರವಿ, ರಾಮಚಂದ್ರಪ್ಪ, ಮಂಜುನಾಥ್ ಉಪಸ್ಥಿತರಿದ್ದರು.