`ಮರವಿದ್ದರೆ ಮಳೆ, ಮಳೆಯಿದ್ದರೆ ಕೃಷಿ, ಕೃಷಿಯಿದ್ದರೆ ರೈತ, ರೈತನಿದ್ದರೆ ದೇಶ’

`ಮರವಿದ್ದರೆ ಮಳೆ, ಮಳೆಯಿದ್ದರೆ ಕೃಷಿ, ಕೃಷಿಯಿದ್ದರೆ ರೈತ, ರೈತನಿದ್ದರೆ ದೇಶ’

ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. 

ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ದಾವಣಗೆರೆಯ ಪ್ರತಿಯೊಬ್ಬರೂ ಸ್ವಇಚ್ಚೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಿ ಹಚ್ಚ ಹಸಿರಾಗಿಸೋಣ.

ಗಿಡ ಮರಗಳ ಬೆಳೆಸುವಿಕೆಯಿಂದಾಗುವ ಉಪಯೋಗವೇನೆಂದು ಇಂದಿನ ಯುವ ಜನತೆಗೆ ಅರಿವು ಮೂಡಿಸುವ ಜವಾಬ್ದಾರಿ ನಮ್ಮದಾಗಬೇಕು. ಪರಿಸರ ತಜ್ಞ ಡಾಟ್ ರವರ ಪ್ರಕಾರ ಒಂದು ಮರ 1 ಕೋಟಿ 5 ಲಕ್ಷಕ್ಕೆ ಬೆಲೆ ಬಾಳುತ್ತದೆ ಎಂದು 20 ವರ್ಷಗಳ ಹಿಂದೆಯೇ ತಿಳಿಸಿದ್ದರು. ಮೋಡಗಳನ್ನು ಹಿಡಿದಿಟ್ಟು ಮಳೆಯನ್ನು ತರಿಸುವುದು, ಬಿದ್ದ ಮಳೆಯ ನೀರನ್ನು ಭೂಮಿಗೆ ಇಂಗಿಸುವುದು ಮರಗಳ ಕೆಲಸ, ಅಲ್ಲದೇ ಭೂ ಸವೆತವನ್ನು ತಪ್ಪಿಸಿ, ಮಣ್ಣನ್ನು ಫಲವತ್ತಾಗಿ ಮಾಡುವುದು, ಹಣ್ಣು, ಆಹಾರ, ಆಕ್ಸಿಜನ್ ಕೊಡುವುದರ ಜೊತೆಗೆ ಸೌಂದರ್ಯದ ರೂಪಕವೂ ಹೌದು. ಇಂತಹ ಮರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಎಂತಹ ಸವಾಲುಗಳಿದ್ದರೂ ಸಹ ಕ್ಷುಲ್ಲಕ ಕಾರಣ ಕೊಡದೇ ನಮ್ಮ ಹಾಗೂ ನಗರದ ಹಿತಕ್ಕಾಗಿ ನಾವು ಮರಗಳನ್ನು ಬೆಳೆಸಲೇಬೇಕು ಎನ್ನುವುದು ಜನರಿಗೆ ಮನದಟ್ಟಾಗುವಂತೆ ಮಾಡೋಣವೇ?

ಈಗಾಗಲೇ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ವತಿಯಿಂದ ದಾವಣಗೆರೆಯಾದ್ಯಂತ ಹಲವು ವರ್ಷಗಳಿಂದ ಸಾಕಷ್ಟು ಗಿಡಗಳನ್ನು ನೆಟ್ಟು ಸಂರಕ್ಷಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ತಕ್ಷಣ 1100 ಗಿಡಗಳನ್ನು ಹಾಕುವ ಉದ್ದೇಶ ಟ್ರಸ್ಟ್‌ನದಾಗಿದೆ. ತಮ್ಮ ಮನೆಯ ಮುಂದೆ ಗಿಡ ನೆಟ್ಟು ಸಂರಕ್ಷಿಸಲು ಮುಂದೆ ಬಂದರೆ ಜುಲೈ ತಿಂಗಳ ಕೊನೆಯಷ್ಟರಲ್ಲಿ ಅತೀ ಹೆಚ್ಚಿನ ಗಿಡಗಳನ್ನು ನೆಡಲು ಟ್ರಸ್ಟ್ ಪ್ರಯತ್ನಿಸುತ್ತದೆ. ಈಗಾಗಲೇ 50 ಗಿಡಗಳನ್ನು ಆಂಜನೇಯ ಬಡಾವಣೆಯಲ್ಲಿ ಹಾಕಲಾಗಿದೆ. 200 ಗಿಡಗಳನ್ನು ಮನೆಯ ಮುಂದೆ ಹಾಕುವವರಿಗೆ ಕೊಡಲಾಗಿದೆ. 

ಸುಮ್ಮನೆ ಮಾತಿಗೆ ಗಿಡ ಮರ ಬೆಳೆಸಿ, ನಾಡು ಉಳಿಸಿ, ಗಿಡ ಮರಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿದರೆ ಸಾಲದು, ವಾಸ್ತವವಾಗಿ ಗಿಡಗಳನ್ನು ನೆಡಬೇಕು. ಗಿಡಗಳನ್ನು ನೆಟ್ಟು ಎರಡು, ಮೂರು ವರ್ಷಗಳು ಸಂರಕ್ಷಿಸದಿದ್ದರೆ ಯಾವ ಪ್ರಯೋಜನವೂ ಇಲ್ಲ. ಗಿಡ ನೆಟ್ಟು ಮೂರು ವರ್ಷ ಸಂರಕ್ಷಿಸಿದರೆ, ಅದು ನಮಗೆ ನೂರು ವರ್ಷ ಉಪಯೋಗಕ್ಕೆ ಬರುತ್ತದೆ. ದಾವಣಗೆರೆಯಲ್ಲಿ 40 ವರ್ಷಗಳ ಹಿಂದೆ ಮಾಜಿ ನಗರಸಭಾ ಅಧ್ಯಕ್ಷರು, ಮಾಜಿ ಶಾಸಕರಾದ ದಿ|| ಕಾಮ್ರೆಡ್‌ ಪಂಪಾಪತಿಯವರನ್ನು ಕೃತಜ್ಞತೆಯಿಂದ ಸ್ಮರಿಸಿ ಅವರು ಅಂದು ಮಾಡಿದ ಸತ್ಕಾರ್ಯವನ್ನು ನಾವೆಲ್ಲರೂ ಇಂದು ಕೈಗೆತ್ತಿಕೊಳ್ಳಬೇಕಾಗಿದೆ.

ಬನ್ನಿ, ದಯವಿಟ್ಟು ಮುಂದಿನ ಪೀಳಿಗೆಗೆ ಗಿಡ ನೆಟ್ಟು ಸಂರಕ್ಷಿಸುವ ಮನೋಭಾವವನ್ನು ಬೆಳೆಸಲು ಸಮಾರೋಪಾದಿ ಯಲ್ಲಿ ಕಾರ್ಪೊರೇಷನ್, ಗ್ರೀನ್ ಸಿಟಿ ಕಮಿಟಿ, ಶಾಲಾ-ಕಾಲೇಜುಗಳು, ಸಂಘ-ಸಂಸ್ಥೆಗಳು ಮುಂದಾಗಿ ವಿಶಿಷ್ಟ ಪರಿಸರ ದಿನಾಚರಣೆ ಆಚರಿಸೋಣ ನಮ್ಮೊಂದಿಗೆ ಕೈ ಜೋಡಿಸಿ. ಗಿಡಗಳನ್ನು ನೆಟ್ಟು ಸುರಕ್ಷಿತವಾಗಿ ಸಂರಕ್ಷಿಸುತ್ತೇನೆಂದು ಪಣ ತೊಟ್ಟವರಿಗೆ ಮೊದಲ ಆದ್ಯತೆ ಕೊಡಲಾಗುವುದು.

ತಮ್ಮ ಮನೆಯ ಮುಂದೆ ಗಿಡ ನೆಡಲು ಇಚ್ಚಿಸುವವರು ಸಂಪರ್ಕಿಸಿ : ಲಿಂಗರಾಜು (95380 24422), ಸದಾನಂದ (63631 51534).


ಶಿವನಕೆರೆ ಬಸವಲಿಂಗಪ್ಪ
ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.
karunatrustdvg@gmail.com