ಕಷ್ಟಗಳಿಗೆ ಸ್ಪಂದಿಸಿದ ಕೈ ಖಾಲಿ ಮಾಡಿದ ಕೊರೊನಾ

ಕಷ್ಟಗಳಿಗೆ ಸ್ಪಂದಿಸಿದ ಕೈ ಖಾಲಿ ಮಾಡಿದ ಕೊರೊನಾ

ನೆರವು ನೀಡಲು ವಿನಂತಿಸಿದ್ದಾರೆ ಸಮಾಜ ಸೇವಕ ಹೆಲ್ಪ್‌ಲೈನ್ ಸುಭಾನ್

ದಾವಣಗೆರೆ, ಜೂ. 3- ನಗರದ ಯಾವುದೋ ಬಡಾವಣೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದರೆ, ತಕ್ಷಣ ಈ ವ್ಯಕ್ತಿ ತನ್ನ ಹಣದಲ್ಲಿಯೇ ಟ್ಯಾಂಕರ್ ನೀರು ಪೂರೈಸುತ್ತಿದ್ದ. ಯಾವುದೋ ರಸ್ತೆಯಲ್ಲಿ ಭಿಕ್ಷುಕಿಯೊಬ್ಬಳು ನರಳುತ್ತಿದ್ದರೆ ಈತ ಆರೈಕೆ ಮಾಡಿ ಸಂತೈಸುತ್ತಿದ್ದ.

ಆಸ್ಪತ್ರೆಯಲ್ಲಿ ಬಡ ರೋಗಿಗಳು ಚಿಕಿತ್ಸೆ ಪಡೆದ ಬಿಲ್ ಪಾವತಿ ಮಾಡಲು ಸಾಧ್ಯವಾಗದಿದ್ದರೆ ಈ ವ್ಯಕ್ತಿ ನೆರವಿಗೆ ಧಾವಿಸುತ್ತಿದ್ದ. ಕಳೆದ ಹಲವಾರು ವರ್ಷಗಳಿಂದ ಚಳಿಗಾಲದಲ್ಲಿ ನಿರ್ಗತಿಕರಿಗೆ ರಗ್ ವಿತರಣೆ ಮಾಡುತ್ತಿದ್ದ. 

ಹೀಗೆ ಒಂದೇ, ಎರಡೇ.. ಸಮಾಜ ಸೇವೆಯ ಕಾರ್ಯಗಳು ಹಲವು. ಆ ವ್ಯಕ್ತಿ ಮಹಾನ್ ಧನಿಕನಲ್ಲ. ತಾನು ಮಾಡುತ್ತಿದ್ದ ಸಂಪಾದನೆಯನ್ನೇ ಸಮಾಜ ಸೇವೆಗೆ ಮೀಸಲಿಟ್ಟಿದ್ದ. ತನಗಾಗಿ ಉಳಿಸಿಕೊಳ್ಳಬೇಕೆಂಬ ಚಿಕ್ಕ ಆಸೆಯೂ ಆತನಿಗಿರಲಿಲ್ಲ. ಆದರೆ ಕಳೆದ ಮೂರು ತಿಂಗಳು ಕೊರೊನಾ ಆರ್ಭಟಿಸಿದ್ದೇ ತಡ ಸಮಾಜ ಸೇವೆ ಮಾಡುವ ಕೈ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ಆ ವ್ಯಕ್ತಿಯೋ ಹೆಲ್ಪ್ ಲೈನ್ ಸುಭಾನ್, ಪ್ರಾಯಶಃ ದಾವಣಗೆರೆಯಲ್ಲಿ ಈ ಹೆಸರು ಕೇಳದವರೇ ಇಲ್ಲ.  ಇವರ ಸೇವೆ ಗುರುತಿಸಿ `ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಾಜ್ಯ ಪ್ರಶಸ್ತಿ’ `ರಾಜ್ಯ ಯುವ ಪ್ರಶಸ್ತಿ’, `ಜೀವ ರಕ್ಷಕ ಪ್ರಶಸ್ತಿ’ ಗಳನ್ನು ನೀಡಿ ಗೌರವಿಸಲಾಗಿದೆ. 

ಕಷ್ಟ ಎಂದು ಒಂದು ಕರೆ ಬಂದರೂ ಸ್ಪಂದಿಸುವ ಗುಣದ ಸುಭಾನ್, ಇಂದು ತನಗೊಂದು ಕೆಲಸವನ್ನು ನೀಡುವಂತೆ, ಆರ್ಥಿಕವಾಗಿ ಸಹಾಯ ಮಾಡಿ ಎಂದು ವಿನಂತಿಸಿಕೊಂಡಿದ್ದಾರೆ.

ಸುಭಾನ್ ಮಾತಿನಲ್ಲಿಯೇ ಹೇಳಬೇಕೆಂದರೆ, `ನಾನು ಹಿರಿಯ ನಾಗರಿಕರಿಂದ ದಾಖಲೆ ಸಂಗ್ರಹಿಸಿ, ಅವರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ನೀಡುವ ಕಾಯಕ ಮಾಡುತ್ತಿದ್ದೆ. ಅದಕ್ಕಾಗಿ ನಾಲ್ಕು ಹುಡುಗರು ನನ್ನ ಜೊತೆಗಿದ್ದರು. ಅದರಿಂದ ಬಂದ ಅತ್ಯಲ್ಪ ಹಣದಲ್ಲಿಯೇ ಜೀವನ ನಡೆಯುತ್ತಿತ್ತು. ಸಮಾಜ ಸೇವೆಯ ಕೆಲಸವೂ ಸಹ.’

`ಆದರೆ ಕೊರೊನಾ ಸೋಂಕು ಹೆಚ್ಚಾಗಿ, ಲಾಕ್‌ಡೌನ್‌ ಘೋಷಣೆಯಾದ ನಂತರ ಕೆಲಸಕ್ಕೆ ಕುತ್ತು ಬಿದ್ದಿದೆ. ಲಾಕ್‌ಡೌನ್ ಸಡಿಲವಾಗಿದೆಯಾದರೂ, ಹಿರಿಯ ನಾಗರಿಕರು ನಮ್ಮನ್ನು ತಮ್ಮ ಬಳಿ ಬಿಟ್ಟುಕೊಳ್ಳುತ್ತಿಲ್ಲ. ಕಳೆದ ಮೂರು ತಿಂಗಳಿಂದ  ಕೆಲಸವಿಲ್ಲ. ಸುಮಾರು 9 ಲಕ್ಷ ರೂ.ಗಳನ್ನು ಸಮಾಜ ಸೇವೆಗೆಂದೇ ಖರ್ಚು ಮಾಡಿದೆ. ಆದರೆ ಇಂದು ಸ್ವತಃ ನಾನೇ ಜೀವನ ಸಾಗಿಸುವುದು ದುಸ್ತರವಾಗಿದೆ. ದಯಮಾಡಿ ಯಾರಾದರೂ ನನಗೆ ಆರ್ಥಿಕವಾಗಿ ಸಹಾಯ ಮಾಡಿ ಅಥವಾ ಉದ್ಯೋಗವನ್ನಾದರೂ ನೀಡಿ.’

ಕೊರೊನಾ ಎಂಬ ಮಹಾಮಾರಿ ಸಾಕಷ್ಟು ಜನರ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ದಿನಗೂಲಿ, ತಿಂಗಳ ವೇತನವನ್ನೇ ನೆಚ್ಚಿಕೊಂಡವರು ಕಳೆದ ಮೂರು ತಿಂಗಳು ಕೆಲಸವೂ ಇಲ್ಲ, ವೇತನವೂ ಇಲ್ಲದೇ ಕಂಗಾಲಾಗಿದ್ದಾರೆ. ಅನೇಕರಿಗೆ ಮನೆ ಬಾಡಿಗೆ ಕಟ್ಟಲೂ ಹಣವಿಲ್ಲ. ಬೃಹತ್ ಮಾಲ್‌ಗಳು, ಬಟ್ಟೆ ಅಂಗಡಿಗಳು, ಸಂಸ್ಥೆಗಳು ಬಾಗಿಲು ಮುಚ್ಚಿವೆ. ಕೆಲಸ ಮಾಡುತ್ತಿದ್ದವರಿಗೆ ವೇತನ ಇಲ್ಲವಾಗಿದೆ. 

ದುಡಿದ ಹಣದಲ್ಲಿ ಭವಿಷ್ಯಕ್ಕೆಂದು ಒಂದಿಷ್ಟು ಉಳಿಸಿಕೊಂ ಡವರು ತುಸು ನಿರಾಳ. ಆದರೆ ಸೇವೆಯೇ ದೈವ ಎಂದುಕೊಂಡ ಈ ಸುಭಾನ್ ಕಥೆ?  ಸುಭಾನ್‌ನಿಂದ ಸಹಾಯ ಪಡೆದವರು ಹರಸಿದ್ದಾರೆ. ಆದರೆ ದಾನಿಗಳ ನಗರ ಎಂದೇ ಹೆಸರಾಗಿರುವ
ಈ ಊರಿನಲ್ಲಿ ನನಗೊಂದು ಉದ್ಯೋಗ ಕೊಡಿ ಎನ್ನುತ್ತಿದ್ದಾರೆ ಸುಭಾನ್.  ನೆರವಾಗಲು ಸಂಪರ್ಕಿಸಿ ಹೆಲ್ಪ್‌ಲೈನ್ ಸುಭಾನ್-99161 76418.

Leave a Reply

Your email address will not be published.