ವಾರಿಯರ್ಸ್‌ಗಳ ಶ್ರಮದಿಂದ ಸೋಂಕು ಪ್ರಮಾಣ ಇಳಿಕೆ, ದೇಶ ಸುಭಿಕ್ಷ

ವಾರಿಯರ್ಸ್‌ಗಳ ಶ್ರಮದಿಂದ ಸೋಂಕು  ಪ್ರಮಾಣ ಇಳಿಕೆ, ದೇಶ ಸುಭಿಕ್ಷ

ಹೊನ್ನಾಳಿ: ಕೊರೊನಾ ವಾರಿಯರ್ಸ್‌ಗೆ ಹೂಮಳೆ

ಹೊನ್ನಾಳಿ, ಜೂ.1- ಕಳೆದೆರಡು ತಿಂಗಳು ಗಳಿಂದ ಕುಟುಂಬವನ್ನು ಮರೆತು, ಪ್ರಾಣವನ್ನು ಪಣಕ್ಕಿಟ್ಟು ಕೊರೊನಾ ವಿರುದ್ಧ ಕೆಲಸ ಮಾಡಿದ್ದ ಕೊರೊನಾ ವಾರಿಯರ್ಸ್‌ಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾ ಚಾರ್ಯ ಅಭಿನಂದನೆ ಸಲ್ಲಿಸಿದರು. 

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಿರೇಕಲ್ಮಠದವರೆಗೆ ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನ ಸಾವಿರಾರು ಕೊರೊನಾ ವಾರಿಯರ್ಸ್‌ಗೆ ಪುಪ್ಪವೃಷ್ಟಿ ಸುರಿಸಲಾಯಿತು.

ಆನೆಗಳ ಮೂಲಕ ಕೊರೊನಾ ವಾರಿಯರ್ಸ್‌ಗೆ ಹೂಮಳೆ ಸುರಿಸಿದ ಶಾಸಕರಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಹನುಮಂತರಾಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾಥ್ ನೀಡಿದರು. 

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೊರೊನಾ ವಾರಿಯರ್ಸ್‌ಗೆ ಪುಷ್ಪವೃಷ್ಟಿ ಸುರಿಸಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ದಾವಣಗೆರೆ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪಾಸಿಟಿವ್ ಪ್ರಕರಣ ಕಡಿಮೆಯಾಗುತ್ತಿದ್ದು, ಜಿಲ್ಲೆಯಲ್ಲಿ 156 ಕೊರೊನಾ ಪ್ರಕರಣಗಳು ಪತ್ತೆಯಾಗಿ ಅದರಲ್ಲಿ 121 ಪ್ರಕರಣಗಳು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ಇದಕ್ಕೆ ಕೊರೊನಾ ವಾರಿಯರ್ಸ್‌ ಶ್ರಮವೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕೊರೊನಾ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸುವ ಮೂಲಕ ನಿಮಗೆ ಪ್ರೇರಣಾ ಕಾರ್ಯಕ್ರಮ ಇದಾಗಿದ್ದು, ಇದರಿಂದ ನಿಮ್ಮ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದರು. 

ದಿವ್ಯ ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೊರೊನಾ ಜಾಗೃತಿ ಮೂಡಿಸುವಲ್ಲಿ ಕೊರೊನಾ ವಾರಿಯರ್ಸ್‌ನ ಪಾತ್ರ ಮಹತ್ವದ್ದು, ನಿಮ್ಮ ಸೇವೆಯಿಂದಲೇ ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆ ತೀರಾ ಕಡಿಮೆಯಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಮಾತನಾಡಿ, ಕೊರೊನಾ ಸೋಂಕು ಹರಡುವುದರಿಂದ ಯಾರೂ ಸಹ ಆತಂಕ ಪಡಬೇಡಿ. ಆದರೆ, ಗ್ರಾಮಾಂತರ ಸೇರಿದಂತೆ, ಎಲ್ಲಾ ಕಡೆಗಳಲ್ಲಿ ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ವೃದ್ಧರು ಹಾಗೂ ಮಕ್ಕಳ ಬಗ್ಗೆ ಎಚ್ಚರ ಇರಲಿ ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ  ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಘವೇಂದ್ರ, ಜಿಲ್ಲಾ ಸರ್ಜನ್ ನಾಗರಾಜ್, ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ, ಹೊನ್ನಾಳಿ ತಹಶೀಲ್ದಾರ್ ತುಷಾರ್ ಬಿ ಹೊಸೂರು, ನ್ಯಾಮತಿ ತಹಶೀಲ್ದಾರ್ ತನುಜಾ ಸೌದತ್ತಿ  ಮತ್ತಿತರರು ಉಪಸ್ಥಿತರಿದ್ದರು.