ಪಾಲಿಕೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಪಾಲಿಕೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ದಾವಣಗೆರೆ, ಮೇ 26- ನಗರವನ್ನು ಅತ್ಯುತ್ತಮವಾಗಿ ಅಭಿವೃದ್ದಿ ಪಡಿಸಬೇಕೆಂಬ ಆಶಯ ಹೊಂದಿದ್ದೇನೆ. ಈ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಮುಗಿಸಿ, ನಗರದ ಜನತೆಗೆ ಕುಡಿಯುವ ನೀರು, ಉತ್ತಮ ರಸ್ತೆ, ಬೀದಿ ದೀಪಗಳು ಸೇರಿದಂತೆ ಎಲ್ಲ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಪಾಲಿಕೆಯ ಎಲ್ಲ ಅಧಿಕಾರಿಗಳಿಗೆ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ್ ಸೂಚಿಸಿದರು.

ಮಹಾನಗರಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನಗರದ ಎಲ್ಲ ಕಾಮಗಾರಿಗಳನ್ನು ಆರಂಭಿಸಿ, ಆದಷ್ಟು ಶೀಘ್ರ ಕೆಲಸ ಪೂರೈಸಬೇಕು. ಸೀಲ್‍ಡೌನ್ ಆದ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ, ಉಳಿದೆಡೆ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.

ಅಮೃತ್ ಯೋಜನೆಯಡಿ ಕೆಯುಐಡಿಎಫ್‍ಸಿ ವತಿಯಿಂದ ಕೈಗೊಳ್ಳಲಾಗಿರುವ 24×7 ಕುಡಿಯುವ ನೀರಿನ ಯೋಜನೆಯಾದ ಜಲಸಿರಿಯನ್ನು ಆದಷ್ಟು ಶೀಘ್ರವಾಗಿ ಸಂಪೂರ್ಣಗೊಳಿಸಿ, ನಗರದ ಜನರಿಗೆ ನೀರು ಪೂರೈಕೆ ಮಾಡಬೇಕು ಎಂದರು. 

ಕೆಯುಐಡಿಎಫ್‍ಸಿ ಕಾರ್ಯಪಾಲಕ ಅಭಿಯಂತರರು ಮಾತನಾಡಿ, ಈಗಾಗಲೇ ಶೇ.50 ಕೆಲಸ ಮುಗಿದಿದೆ. ಗುರಿ ಹೊಂದಲಾದ 18 ಓವರ್ ಹೆಡ್ ಟ್ಯಾಂಕ್‍ಗಳ ಪೈಕಿ 14 ಓಹೆಚ್‍ಟಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಒಟ್ಟು 50 ಝೋನ್‍ಗಳನ್ನಾಗಿ ಮಾಡಿಕೊಂಡು ಕೆಲಸ ನಿರ್ವಹಿಸಲಾಗುತ್ತಿದೆ. ಓಹೆಚ್‍ಟಿ ನಿರ್ಮಿಸಲು ಚಿಕ್ಕನಹಳ್ಳಿ ಸೇರಿದಂತೆ, ಎರಡು ಕಡೆ ಜಾಗದ ಸಮಸ್ಯೆ ಎದುರಾಗಿದೆ ಎಂದರು. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಿವಶಂಕರ್ ಮಾತನಾಡಿ, ಚಿಕ್ಕನಹಳ್ಳಿಯಲ್ಲಿ ಸರ್ಕಾರಿ ಜಮೀನು ಸಿಗುತ್ತಿಲ್ಲ. ಆದ್ದರಿಂದ ಓಹೆಚ್‍ಟಿ ನಿರ್ಮಾಣ ವಿಳಂಬವಾಗಿದೆ ಎಂದರು.

ಸ್ಮಾರ್ಟ್‍ಸಿಟಿ ಎಂಡಿ ಮತ್ತು ಜಲಸಿರಿ ಯೋಜನೆಯ ಅಧಿಕಾರಿ ರವೀಂದ್ರ ಮಲ್ಲಾಪರ ಮಾತನಾಡಿ, 2022 ರ ಜನವರಿಗೆ ಜಲಸಿರಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ನೀಡಲಾಗಿದೆ. 50 ಝೋನ್‍ಗಳ ಪೈಕಿ 2 ಝೋನ್‍ಗಳಲ್ಲಿ ಕಾರ್ಯ ಪೂರ್ಣಗೊಳಿಸಿ ಡೆಮೋ ನೀಡಬೇಕಿತ್ತು. ಕೊರೊನಾ ಹಿನ್ನೆಲೆಯಲ್ಲಿ ಈ ಕೆಲಸ ತಡವಾಗಿದೆ. ಡಿಸೆಂಬರ್ ಅಂತ್ಯದೊಳಗೆ ಈ ಎರಡೂ ಝೋನ್‍ಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಡೆಮೋಗೆ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಈ ಯೋಜನೆ ಆರಂಭಿಸಿದ ಆರು ತಿಂಗಳಲ್ಲೇ 2 ಜೋನ್‍ನಲ್ಲಿ 24×7 ನೀರು ಕೊಡುತ್ತೇವೆಂದು ಅಧಿಕಾರಿಗಳು ಹೇಳಿದ್ದರು. ಆದರೆ ಇಷ್ಟು ದಿನವಾದರೂ ಕಾಮಗಾರಿಯೇ ಪೂರ್ಣಗೊಂಡಿಲ್ಲ. ಇಂಜಿನಿಯರ್‍ಗಳ ಕೆಲಸ ತೃಪ್ತಿಕರವಾಗಿಲ್ಲ ಎಂದರು.

ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಕಾವೇರಿ ಬಿ.ಬಿ ಮಾತನಾಡಿ, ಜಲಸಿರಿ ಯೋಜನೆಗೆ ನೀಡಿರುವ ಟೈಮ್‍ಲೈನ್ ಪ್ರಕಾರ ಕೆಲಸ ಆದರೂ ನಿಗದಿತ ಸಮಯದಲ್ಲಿ ಮುಗಿಯುತ್ತದೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು.

ಸಚಿವರು ಪ್ರತಿಕ್ರಿಯಿಸಿ ಕಂಟ್ರಾಕ್ಟ್ ಹಿಡಿದಿರುವ ಕಂಪೆನಿಗಳಿಗೆ ನೋಟಿಸ್ ನೀಡಿ ಕೆಲಸಗಾರರನ್ನು ಕರೆಯಿಸಿಕೊಂಡು ಕೆಲಸವನ್ನು ಆರಂಭಿಸಿ, ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಪಿ.ಬಿ ರಸ್ತೆ ಸೇರಿದಂತೆ, ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ನಾನೇ ನೋಡಿದ್ದೇನೆ. ಅನೇಕ ಲೈಟುಗಳು ಉರಿಯುತ್ತಿಲ್ಲ. ಸಂಬಂಧಿಸಿದ ಕಾರ್ಯಪಾಲಕ ಇಂಜಿನಿಯರ್ ಒಂದು ವಾರದೊಳಗೆ ಈ ದೀಪಗಳ ನಿರ್ವಹಣೆ ಕೆಲಸ ಮಾಡಿಸಬೇಕು. ಇಲ್ಲದಿದ್ದರೆ ಅಧಿಕಾರಿ ವಿರುದ್ದ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಒಟ್ಟು 381 ಮನೆಗಳು ಮಂಜೂರಾಗಿದ್ದು, ಈ ಪೈಕಿ 244 ಗೃಹಗಳ ಮೇಲ್ಛಾವಣೆ ಪೂರ್ಣಗೊಂಡಿದೆ. 56 ಮನೆಗಳು ನಿಂಟ್ಲ್ ಹಂತದಲ್ಲಿದ್ದರೆ, 81 ತಳಪಾಯ ಹಂತದಲ್ಲಿವೆ ಎಂದರು. 

ಪಾಲಿಕೆಯು ಆಸ್ತಿ ತೆರಿಗೆ ವಸೂಲಾತಿಯಲ್ಲಿ 2018-19 ರಲ್ಲಿ ಶೇ.83 , 2019-20 ರಲ್ಲಿ ಶೇ. 83.49 ಪ್ರಗತಿ ಸಾಧಿಸಿದರೆ 2020-21 ರಲ್ಲಿ 0.24 ಪ್ರಗತಿ ಸಾಧಿಸಿದೆ. ಕಾರಣ ಆಸ್ತಿ ತೆರಿಗೆ ಬಹುತೇಕ ಏಪ್ರಿಲ್ ಮತ್ತು ಮೇ ಮಾಹೆಯಲ್ಲಿ ಆಗುತ್ತದೆ. ಈ ಬಾರಿ ಕೊರೊನಾ ಕಾರಣ ತೆರಿಗೆ ವಸೂಲಾತಿ ಕಡಿಮೆಯಾಗಿದೆ. ಆದ್ದರಿಂದ ಶೇ.5ರಷ್ಟು ವಿನಾಯಿತಿಯನ್ನು ಜೂನ್ ಮಾಹೆಯ ಅಂತ್ಯದವರೆಗೆ ವಿಸ್ತರಿಸಬೇಕೆಂದು ಮನವಿ ಮಾಡಿದರೆ, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ತೆರಿಗೆ ರಿಬೇಟ್‍ಗೆ ಮುಂದಿನ ವರ್ಷದ ವರೆಗೆ ಅವಧಿ ವಿಸ್ತರಿಸಬೇಕೆಂದು ಮನವಿ ಮಾಡಿದರು.

ಆಯುಕ್ತರು ನೀರಿನ ಶುಲ್ಕದಲ್ಲಿ ನಿಗದಿತ ಬೇಡಿಕೆಗಿಂತ ಕಡಿಮೆ ವಸೂಲಾತಿ ಆಗುತ್ತಿದೆ. ಕಾರಣ ಈ ಹಿಂದೆ ವಾರ್ಷಿಕ ತಲಾ ಮನೆಯಿಂದ 1500ರೂ. ವಸೂಲಾತಿ ಮಾಡಬೇಕೆಂದು ಆದೇಶಿಸಲಾಗಿತ್ತು. ನಂತರ 2100 ರೂ.ಗಳ ವಸೂಲಾತಿಗೆ ಆದೇಶವಾಗಿತ್ತು. ಆದರೆ ಅನೇಕರು 1500 ರೂ.ಗಳನ್ನೇ ಕಟ್ಟುತ್ತಾ ಬಂದಿದ್ದರಿಂದ ನಿಗದಿತ ಬೇಡಿಕೆಗಿಂತ ಕಡಿಮೆ ಇದೆ. ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಶೇಕಡಾವಾರು ಪ್ರಗತಿ ಕೂಡ ಕಡಿಮೆ ಇದೆ ಎಂದರು. ಮಳಿಗೆ ಬಾಡಿಗೆ ವಸೂ ಲಾತಿಯಲ್ಲಿ 2019-20 ರಲ್ಲಿ ಶೇ.30.83 ಸಾಧನೆಯಾಗಿದ್ದರೆ, 2020-21 ರಲ್ಲಿ ಈವರೆಗೆ ಶೇ.4.28 ಪ್ರಗತಿ ಆಗಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಮಾತನಾಡಿ, ಮಳಿಗೆಗಳನ್ನು ಸಬ್‍ಲೀಸ್ ಮಾಡುತ್ತಿರುವುದರಿಂದ ಆದಾಯ ಮಧ್ಯವರ್ತಿಗಳ ಪಾಲಾಗುತ್ತಿದೆ. ಇದನ್ನು ತಪ್ಪಿಸಬೇಕೆಂದರು.

ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರಕುಮಾರ್, ಪಾಲಿ ಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಪ್ರಸನ್ನಕುಮಾರ್, ಜಯಮ್ಮ ಆರ್ ಗೋಪಿ ನಾಯಕ್, ಎಸ್.ಟಿ.ವೀರೇಶ್, ಗೌರಮ್ಮ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪಾಲಿಕೆ ಸದಸ್ಯರು ಹಾಗೂ ಇತರೆ ಅಧಿಕಾರಿಗಳು ಇದ್ದರು.

Leave a Reply

Your email address will not be published.