ಕಂದಾಯ ಪರಿಷ್ಕರಣೆ ವಾಪಸಾತಿಗೆ ಕಾಂಗ್ರೆಸ್ ಒತ್ತಾಯ

ಕಂದಾಯ ಪರಿಷ್ಕರಣೆ ವಾಪಸಾತಿಗೆ ಕಾಂಗ್ರೆಸ್ ಒತ್ತಾಯ

ಎಫ್.ಎ.ಆರ್. ನಿಯಮಗಳನ್ನು ಸಡಿಲಿಸುವಂತೆ ಜಿಲ್ಲಾ ಸಚಿವರಿಗೆ ಪಾಲಿಕೆ ಕಾಂಗ್ರೆಸ್‍ನಿಂದ ಮನವಿ

ದಾವಣಗೆರೆ, ಮೇ 26 – ಮಹಾನಗರ ಪಾಲಿಕೆಯ ಕಂದಾಯ ಪರಿಷ್ಕರಣೆಯನ್ನು ಜಿಲ್ಲಾ ಧಿಕಾರಿಗಳು ನಿರ್ಧರಿಸಿದ್ದು, ಇದನ್ನು ರದ್ದುಪಡಿಸಿ ಪಾಲಿಕೆ ಸರ್ವ ಸದಸ್ಯರ ಸಭೆಯಲ್ಲಿ ಹೊಸದಾಗಿ ಮಂಡಿಸಿ, ತೀರ್ಮಾನ ಕೈಗೊಳ್ಳಲು ಅನುವು ಮಾಡಿಕೊಡಬೇಕು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷವಾದ ಕಾಂಗ್ರೆಸ್ ಒತ್ತಾಯಿಸಿದೆ.

ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಎಫ್.ಎ.ಆರ್. (ಫ್ಲೋರ್ ಏರಿಯಾ ರೇಷಿಯೋ) ನಿಯಮಗಳನ್ನು ಸಡಿಲಿಸಬೇ ಕೆಂದೂ ಸಹ  ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅವರಿಗೆ ಮನವಿ ಮಾಡಿದೆ.

ಮಂಗಳವಾರ ಬೆಳಿಗ್ಗೆ ಮಹಾನಗರ ಪಾಲಿಕೆ ಕಛೇರಿಯಲ್ಲಿ ನಡೆದ ಪಾಲಿಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪನವರ ಸಮ್ಮುಖದಲ್ಲಿ ಪಾಲಿಕೆಯ ವಿಪಕ್ಷ ನಾಯಕ ಎ.ನಾಗರಾಜ್ ಅವರ ನೇತೃತ್ವದಲ್ಲಿ ಸದಸ್ಯರುಗಳ ನಿಯೋಗ ಜಿಲ್ಲಾ ಸಚಿವರಿಗೆ ಮನವಿ ಸಲ್ಲಿಸಿದೆ.

ಪಾಲಿಕೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಪಾಲಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಕಂದಾಯ ಪರಿಷ್ಕರಣೆ ಕುರಿತು ಚರ್ಚಿಸಿ, ಜನ ಸಾಮಾನ್ಯರಿಗೆ ಹೊರೆ ಆಗದಂತೆ ಹಾಗೂ ಸರ್ಕಾರಕ್ಕೂ ಸೂಕ್ತ ಕಂದಾಯ ಬರುವ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳ ಲಾಗುತ್ತಿತ್ತು. ಆದರೆ, ಚುನಾಯಿತ ಸದಸ್ಯರಿದ್ದೂ ಪಾಲಿಕೆ ಅಸ್ತಿತ್ವದಲ್ಲಿ ಬರದೇ ಇರುವ ಸಂದರ್ಭದಲ್ಲಿ, ಜನವರಿ 19ರಂದು ಜಿಲ್ಲಾಧಿಕಾರಿಗಳು ಅವೈಜ್ಞಾನಿಕವಾಗಿ ಕಂದಾಯ ಪರಿಷ್ಕರಿಸಿ, ಸರ್ಕಾರಕ್ಕೆ ಕಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಏಕಾಏಕಿ ವಸತಿಗೆ ಶೇ.18ರಷ್ಟು ಹಾಗೂ ವಾಣಿಜ್ಯ ಮಳಿಗೆಗಳಿಗೆ ಶೇ.24ರಷ್ಟು ಕಂದಾಯ ಏರಿಕೆ ಮಾಡಿರುವುದು ಇಂದಿನ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಲಿದೆ ಎಂದು ತಿಳಿಸಿದರು.

ಈ ಬೆಲೆ ಏರಿಕೆ ತಡೆಯಬೇಕು ಹಾಗೂ ಮೇ 30ರ ಒಳಗೆ ಪಾವತಿಸುವ ಖಾತೆದಾರರಿಗೆ ಶೇ.5 ರಿಯಾಯಿತಿ ಇದ್ದು, ಈ ರಿಯಾಯಿತಿಯನ್ನು ಜೂನ್ ಅಂತ್ಯದವರೆಗೂ ಮುಂದುವರೆಸಬೇಕು. 6 ತಿಂಗಳು ತಡವಾಗಿ ಕಟ್ಟಿದರೂ ಯಾವುದೇ ರೀತಿಯ ಬಡ್ಡಿ ದರ ವಿಧಿಸದಂತೆ ನೊಂದ ನಾಗರಿಕರ ನೆರವಿಗೆ ತಾವು ಬರಬೇಕೆಂದು ಒತ್ತಾಯಿಸಿದರು.  

ಎಫ್.ಎ.ಆರ್. ಹೆಚ್ಚಿಸಿ : ಅದೇ ರೀತಿ ದಾವಣಗೆರೆಯು ರಾಜ್ಯದ ಕೇಂದ್ರ ಬಿಂದುವಾಗಿದ್ದು ಇಲ್ಲಿ ಜನ ಸಾಮಾನ್ಯರಿಗೆ ವಸತಿ ಮತ್ತು ನಿವೇಶನಗಳ ಕೊರತೆ ಇದೆ. ಸರ್ಕಾರದ ನಿಯಮಗಳಲ್ಲಿ ಇರುವ ನಿವೇಶನದಲ್ಲಿ ಬೇರೆ ನಗರಪಾಲಿಕೆಗಳಲ್ಲಿ ಇರುವಂತೆ ಎಫ್.ಎ.ಆರ್. (ಫ್ಲೋರ್ ಏರಿಯಾ ರೇಷಿಯೋ)  ವಸತಿಗಳಿಗೆ 2-5 ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ 3-5ಕ್ಕೆ ಏರಿಕೆ ಮಾಡುವುದರಿಂದ ದಾವಣಗೆರೆ ಮಹಾ ನಗರ ಪಾಲಿಕೆಗೆ ಹೆಚ್ಚಿನ ಆದಾಯ ಬರಲಿದೆ ಎಂದು ಕಾಂಗ್ರೆಸ್ ಇದೇ ಸಂದರ್ಭದಲ್ಲಿ ತಿಳಿಸಿದೆ.

ಜನರಿಗೂ ಸದ್ಯ ಅವರ ನಿವೇಶನದಲ್ಲಿ ಬೇರೆ ಪಾಲಿಕೆಗಳಲ್ಲಿ ಇರುವ ಎಫ್.ಎ.ಆರ್ ನಿಯಮದಂತೆ ಇಲ್ಲಿಯೂ ನಿರ್ಧರಿಸಿದರೆ ಜನರಿಗೂ ಅನುಕೂಲವಾಗಲಿದೆ. ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರವು ಸಿ.ಡಿ.ಪಿ. ಅನ್ನು ಸರ್ಕಾರದ ಅನುಮೋದನೆಗಾಗಿ ಕಳುಹಿಸಿ ಕೊಟ್ಟಿದ್ದು, ಅದರ ಅನುಮೋದನೆಯನ್ನು ಸರ್ಕಾರ ಇಲ್ಲಿಯವರೆಗೂ ಕೊಟ್ಟಿರುವುದಿಲ್ಲ ಎಂದೂ ಸಹ ಕಾಂಗ್ರೆಸ್ ತಿಳಿಸಿದೆ.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಪಾಲಿಕೆ ಸದಸ್ಯರು ಗಳಾದ ದೇವರಮನೆ ಶಿವಕುಮಾರ್, ಜಿ.ಎಸ್.ಮಂಜುನಾಥ್, ವಿನಾಯಕ ಪೈಲ್ವಾನ್, ಸೈಯದ್ ಚಾರ್ಲಿ, ಅಬ್ದುಲ್ ಲತೀಫ್, ಚಮನ್‍ಸಾಬ್, ಜೆ.ಎನ್.ಶ್ರೀನಿವಾಸ್, ಉದಯ್ ಕುಮಾರ್, ಶ್ರೀಮತಿ ಆಶಾ ಉಮೇಶ್, ಶ್ರೀಮತಿ ಸುಧಾ ಇಟ್ಟಿಗುಡಿ ಮಂಜುನಾಥ್, ಸವಿತಾ ಗಣೇಶ್ ಹುಲ್ಮನಿ ಮತ್ತಿತರರಿದ್ದರು.

Leave a Reply

Your email address will not be published.