ಹರಿಹರ : ಮರಳು ಸಾಗಾಣಿಕೆದಾರರ ದಬ್ಬಾಳಿಕೆ ತಡೆಯಲು ಗ್ರಾಮಸ್ಥರ ಮನವಿ

ಹರಿಹರ : ಮರಳು ಸಾಗಾಣಿಕೆದಾರರ ದಬ್ಬಾಳಿಕೆ ತಡೆಯಲು ಗ್ರಾಮಸ್ಥರ ಮನವಿ

ಹರಿಹರ, ಮೇ 23- ತಾಲ್ಲೂಕಿನ ದೀಟೂರು, ಸಾರಥಿ, ಪಾಮೇನಹಳ್ಳಿ ಇನ್ನಿತರೆ ಗ್ರಾಮಗಳಲ್ಲಿ ಅಕ್ರಮವಾಗಿ ಮರಳು ಮತ್ತು ಮಣ್ಣು  ಸಾಗಿಸುತ್ತಿದ್ದು, ಅದನ್ನು ತಡೆಯಲು ಹೋದ ಗ್ರಾಮಸ್ಥರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ.  ಇದನ್ನು ತಡೆದು, ಗ್ರಾಮಸ್ಥರು ನೆಮ್ಮದಿಯ ಜೀವನ ನಡೆಸುವಂತೆ ಮಾಡಬೇಕೆಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ದೀಟೂರು ಗ್ರಾಮದ ಬಸವರಾಜಪ್ಪ ಮಾತನಾಡಿ, ದೀಟೂರು, ಸಾರಥಿ, ಪಾಮೇನಹಳ್ಳಿ, ಚಿಕ್ಕಬಿದರಿ ಗ್ರಾಮದಲ್ಲಿ ಹಗಲು, ರಾತ್ರಿಯೆನ್ನದೇ ಅಕ್ರಮವಾಗಿ ಮರಳು ಮತ್ತು ಮಣ್ಣನ್ನು ಲಾರಿಗಳ ಮೂಲಕ ಸಾಗಾಣಿಕೆ ಮಾಡುತ್ತಿದ್ದಾರೆ. 

ಇದಕ್ಕೆ ಪೊಲೀಸ್ ಸಿಬ್ಬಂದಿ ಕರಿಯಪ್ಪ ಹಾಗೂ ಗ್ರಾಮ ಲೆಕ್ಕಾಧಿಕಾರಿ ದೇವರಾಜ್ ಸಾಥ್ ನೀಡಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎಂದು ಹೇಳಿದರು.

ರೇವಣಸಿದ್ದಪ್ಪ ಮಾತನಾಡಿ, ಗ್ರಾಮಸ್ಥರು ತಡೆಯಲು ಮುಂದಾದರೆ ನಾವು ತಹಶೀಲ್ದಾರರಿಗೆ ಹಾಗೂ ಪೊಲೀಸ್ ಅಧಿಕಾರಿ ವರ್ಗದವರಿಗೆ ಹಣ ನೀಡಿ ಸಾಗಾಟಕ್ಕೆ ಕೈ ಹಾಕಿದ್ದೇವೆ ಎಂದು ಹೇಳುತ್ತಾರೆ ಎಂದು ಹೇಳಿದರು. ಮಹೇಶ್ವರಪ್ಪ ಮಾತನಾಡಿ, ಮರಳು ಲಾರಿಗಳು ಓಡಾಡುವುದರಿಂದ ಗ್ರಾಮದಲ್ಲಿ ವಾಯುಮಾಲಿನ್ಯ ಉಂಟಾಗಿ, ಮಕ್ಕಳಿಗೆ ವಿವಿಧ ಕಾಯಿಲೆಗಳು ಹರಡುತ್ತಿವೆ. ಲಾರಿ ಅಪಘಾತದಲ್ಲಿ ಮರಣವನ್ನು ಸಹ ಹೊಂದಿದ್ದಾರೆ ಎಂದು ದೂರಿದರು.

ತಹಶೀಲ್ದಾರ್ ರಾಮಚಂದ್ರಪ್ಪ ಮಾತನಾಡಿ, ಅಕ್ರಮ ಮರಳು ಮತ್ತು ಮಣ್ಣು ಸಾಗಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಸಿಪಿಐ ಮತ್ತು ಐಪಿಎಲ್‌ ಅವರನ್ನು ಕರೆಸಿ ಮಾತನಾಡಿ  ಇದನ್ನು ತಡೆಗಟ್ಟಲು ಸೂಚನೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಸುರೇಶ್, ಶೇಖರಪ್ಪ, ಬಸಪ್ಪ, ಬಸೆಟ್ಟಪ್ಪ, ಬೀರಪ್ಪ, ರುದ್ರೇಶ್, ಅಣ್ಣಪ್ಪ, ಶಬರೀಶ್, ಗೋವಿಂದ, ರಾಜಪ್ಪ, ಪ್ರಭಾಕರ್, ನಾಗರಾಜ್, ಬಸವರಾಜ್, ರಾಮಪ್ಪ ಹಾಗೂ ಇನ್ನಿತರರಿದ್ದರು.

Leave a Reply

Your email address will not be published.