ವೈದ್ಯಕೀಯ ಕರ್ತವ್ಯವೇ ನಾವು ಮಾಡಬೇಕಿರುವ ಪೂಜೆ

ವೈದ್ಯಕೀಯ ಕರ್ತವ್ಯವೇ ನಾವು ಮಾಡಬೇಕಿರುವ ಪೂಜೆ

ಕೋವಿಡ್-19 ಚಿಕಿತ್ಸೆ

ನ್ಯೂಯಾರ್ಕ್ ನಗರದಲ್ಲಿರುವ ನಮ್ಮ ಮೊಂಟೆಫಿಯುರೆ ಆಸ್ಪತ್ರೆ ಸುಮಾರು ಅರವತ್ತು ಸಾವಿರ ರೋಗಿಗಳನ್ನು ನೋಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ಸುಮಾರು ನಾನೂರು ಕೋವಿಡ್ ರೋಗಿಗಳನ್ನು ನೋಡಿ ಕೊಳ್ಳುತ್ತಿದ್ದೇವೆ. ಮಾರ್ಚ್ ಕೊನೆಯ ವಾರದಲ್ಲಿ ಸಾಲು ಸಾಲಾಗಿ ಕೋವಿಡ್ ರೋಗಿಗಳು ದಾಖಲಾಗಲು ಆರಂಭಿಸಿದರು. ಅವರ ಸಂಖ್ಯೆ ಎಷ್ಟು ಹೆಚ್ಚಾಗತೊಡಗಲು ಶುರುವಾಯಿತು ಎಂದರೆ ಆಸ್ಪತ್ರೆಯ ಆವರಣದಲ್ಲಿ ಟೆಂಟ್‌ಗಳನ್ನು ನಿರ್ಮಿಸಿ ಅವರನ್ನು ದಾಖಲು ಮಾಡುವ ಪರಿಸ್ಥಿತಿ ಬಂದೊದಗಿತ್ತು. 

ನ್ಯೂಯಾರ್ಕ್ ಅಮೆರಿಕಾದ ಕೋವಿಡ್ ರೋಗಿಗಳ ಕೇಂದ್ರ ಬಿಂದುವಾಗಿತ್ತು (Epic center). ಕೆಲವೇ ದಿನಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ಏಳು ಐ.ಸಿ.ಯು. ತುರ್ತು ಘಟಕಗಳನ್ನು ಸಿದ್ಧಪಡಿಸಲಾಯಿತು. ಮೂರು ತಿಂಗಳ ಹಿಂದೆ ರಾತ್ರಿ ಕರೆ ಬಂದಾಗ ಮಾತ್ರ ರೋಗಿಗಳ ಮೇಲ್ವಿಚಾರಣೆ ಮಾಡಲು ಹೋಗುತ್ತಿದ್ದೆ. ಬೆಳಿಗ್ಗೆ ಕೋವಿಡ್ ಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ಮೊದಲಿಗೆ ನಾವು ಹಾಕಿಕೊಳ್ಳಬೇಕಾದ ಪಿ.ಪಿ.ಇ ಸ್ವಯಂ ರಕ್ಷಾ ಕವಚ, ಎನ್-95 ಮಾಸ್ಕ್ ಗಳಿಗೆ ಅಭಾವವಿತ್ತು. ಇದ್ದುದರಲ್ಲಿಯೇ ಕರ್ತವ್ಯ ನಿಭಾಯಿಸಬೇಕಿತ್ತು. ಆರಂಭದ ದಿನಗಳಲ್ಲಿ ಪ್ರತಿ ಅರ್ಧ ಗಂಟೆಗೆ ತುರ್ತು ಘೋಷಣೆಯಾಗುತ್ತಿತ್ತು. ಬಹುತೇಕರಿಗೆ ಉಸಿರಾಟದ ತೊಂದರೆ. ತಕ್ಷಣವೇ ಅಲ್ಲಿಗೆ ಧಾವಿಸುತ್ತಿದ್ದೆವು. ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ವೇಗವಾಗಿ ತಲುಪುತ್ತಿದ್ದೆವು. ಪ್ರತಿ ರಾತ್ರಿ ಐವತ್ತರಿಂದ ಅರವತ್ತು ರೋಗಿಗಳು ದಾಖಲಾಗುತ್ತಿದ್ದರು. ನಂತರದ ಎರಡೇ ವಾರಗಳಲ್ಲಿ ಐ.ಸಿ.ಯು. ನಲ್ಲಿದ್ದ ಶೇಕಡ ಎಂಬತ್ತು ರೋಗಿಗಳು ಮೃತಪಟ್ಟಿದ್ದರು! ಹೆಚ್ಚಾಗಿ ವಯೋವೃದ್ಧರು. ನಾವೆಲ್ಲಾ ಒಂದು ರೀತಿಯಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೆವು. ಈಗ ಪರಿಸ್ಥಿತಿ ಹತೋಟಿಗೆ ಬರುತ್ತಿದೆ.

ಆಸ್ಪತ್ರೆಯ ಒಳಗೆ ಹೋಗುವ ಮುನ್ನ ಶುಭ್ರ ಬಟ್ಟೆ, ಬೂಟುಗಳು, ಎನ್-95 ಮಾಸ್ಕ್ ಧರಿಸಿ ಸ್ವಯಂ ರಕ್ಷಾ ಕವಚವನ್ನು ಹಾಕಿಕೊಂಡು ನಂತರ ಪ್ರವೇಶಿಸುತ್ತೇವೆ. ಹಿಂದಿರುಗುವಾಗ ಎಲ್ಲವನ್ನೂ ವಿಸರ್ಜಿಸಿ, ಸ್ನಾನ ಮಾಡಿ ಹೊಸ ಉಡುಪನ್ನು ಧರಿಸಿ ವಾಪಸ್ಸಾಗುತ್ತೇವೆ. ಒಳಗೆ ರೋಗಿಯು ಮಾತನಾಡಲು ಶಕ್ತನಿದ್ದಾನೆ ಎಂದಾದರೆ ದೂರವಾಣಿಯಲ್ಲಿಯೇ ಆತನ ವಿವರವನ್ನು, ತೊಂದರೆಗಳನ್ನು ಆಲಿಸಿ ಕೊಡಬೇಕಾದ ಚಿಕಿತ್ಸೆಯ ಬಗ್ಗೆ ನೀತಿ ರೂಪಿಸುತ್ತೇವೆ. ಆತ ಮಾತನಾಡಲು ಅಶಕ್ತನಾಗಿದ್ದರೆ ಅವರ ಸಂಬಂಧಿಗಳೊಡನೆ ಚರ್ಚಿಸಿ, ಆತನ ವೈದ್ಯಕೀಯ ಹಿನ್ನೆಲೆಯನ್ನು ಪಡೆಯುತ್ತೇವೆ. ನಂತರ ಹೆಚ್ಚುವರಿ ಗೌನ್, ಸರ್ಜಿಕಲ್ ಮಾಸ್ಕ್ ಧರಿಸಿ, ರೋಗಿಯ ಬಳಿ ತೆರಳಿ ಅಗತ್ಯ ಚಿಕಿತ್ಸೆ ನೀಡುತ್ತೇವೆ. ಅಲ್ಲಿರುವ ವೆಂಟಿಲೇಟರ್ ಸೆಟ್ಟಿಂಗ್ಸ್ ಅನ್ನು ಪರೀಕ್ಷಿಸಿ ಅಗತ್ಯ ಬಿದ್ದರೆ ಅದನ್ನು ರೋಗಿಯ ಪರಿಸ್ಥಿತಿಗೆ ಅನುಗುಣವಾಗಿ ಸೆಟ್ ಮಾಡುತ್ತೇವೆ. ಕೋವಿಡ್ ಸೋಂಕಿತ ರೋಗಿಯ ಬಳಿ ಅದರಲ್ಲೂ ಐ.ಸಿ.ಯು.ನಲ್ಲಿ ಹೆಚ್ಚು ಓಡಾಡುವುದನ್ನು ಕಡಿತಗೊಳಿಸುತ್ತೇವೆ. ನಮ್ಮ ನರ್ಸ್‌ಗಳೂ ಅಷ್ಟೇ. ರೋಗಿಗಳ ರಕ್ತನಾಳಗಳಿಗೆ ಲಸಿಕೆ ಪ್ರವಹಿಸುವ ಟ್ಯೂಬ್‌ಗಳನ್ನು ಲಂಬವಾಗಿಸಿದ್ದಾರೆ. ಅದರ ಸ್ತಂಬವನ್ನು ಹೊರಗಡೆಗೇ ಇರಿಸಿ ಅಗತ್ಯ ಲಸಿಕೆ ಪ್ರಮಾಣವನ್ನು ನಿಯಂತ್ರಿಸುತ್ತಾರೆ.

ಇತ್ತೀಚೆಗೆ ಚಿಕಿತ್ಸಾ ಪದ್ಧತಿ ಹೆಚ್ಚು ಪರಿಣಾಮಕಾರಿಯಾಗುವಂತೆ ಬದಲಾಗುತ್ತಿದೆ. ಈಗ ರೆಮೆಡಿಸಿವಿರ್ ಜೊತೆಗೆ ಕನ್ವಲೋಸೆಂಟ್ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡುತ್ತೇವೆ.
(Remdesivir & convalescent plasma theraphy) ರೋಗಿಗಳಿಗೆ ರಕ್ತ ಹೆಪ್ಪುಗಟ್ಟದಂತೆ ಹೆಬರಿನ್ ಮುಂತಾದ ಲಸಿಕೆ ಹಾಕುತ್ತೇವೆ. ಇದು ಸ್ಟ್ರೋಕ್ ಆಗುವುದನ್ನೂ ಸಹ ತಪ್ಪಿಸುತ್ತದೆ.

ರೋಗಿಗಳಿಗೆ ಸಾಧ್ಯವಾದಷ್ಟು ಹೊಟ್ಟೆಯ ಭಾಗವನ್ನು ಕೆಳ ಮುಖವಾಗಿ ಮಾಡಿ ಮಲಗಲು ಸೂಚಿಸುತ್ತೇವೆ. ಸುಮಾರು ದಿನಕ್ಕೆ ಹನ್ನೆರಡರಿಂದ ಹದಿನಾಲ್ಕು ಗಂಟೆಗಳ ಕಾಲ ಅವರು ಈ ಭಂಗಿಯಲ್ಲಿ ಮಲಗಬೇಕು. ಇದು ಅವರ ಶ್ವಾಸ ಕೋಶ ಚೆನ್ನಾಗಿ ಕೆಲಸ ಮಾಡಲು ಸಹಕಾರಿಯಾಗುತ್ತದೆ.

ಆಸ್ಪತ್ರೆಯಲ್ಲಿ ಅಡ್ಮಿಟ್ ಆದ ರೋಗಿಗಳಿಗೆ ನಾವು ಸಾಧ್ಯವಾದಷ್ಟು ಧೈರ್ಯ ತುಂಬಲು ಪ್ರಯತ್ನಿಸುತ್ತೇವೆ. ಅವರ ಸಂಬಂಧಿಗಳೊಡನೆ ದೂರವಾಣಿ ಮುಖಾಂತರ ಮಾತನಾಡಲು, ಮೊಬೈಲ್ ವಿಡಿಯೋ ಕಾಲ್ ಮೂಲಕ ಪರಸ್ಪರ ನೋಡಿ ಮಾತನಾಡಿ, ಗೆಲುವಾಗಿ ಇರುವಂತೆ ನೋಡಿಕೊಳ್ಳುತ್ತೇವೆ.

ಐ.ಸಿ.ಯುನಲ್ಲಿದ್ದ ಒಬ್ಬ ರೋಗಿಯ ಗ್ಲಾಸ್ ಡೋರಿಗೆ ಆತನ ಮುದ್ದು ಮಕ್ಕಳ ಫೋಟೋ ಲಗತ್ತಿಸಲಾಗಿತ್ತು. ಜೊತೆಗೆ ಐದು ವರ್ಷದ ಮಗಳು `ಅಪ್ಪಾ ನೀನು ಬೇಗ ಗುಣಮುಖವಾಗ್ತೀಯ ನಮ್ಮ ಜೊತೆ ಇರಲು ಖಂಡಿತಾ ಬರುತ್ತೀಯ ಧೈರ್ಯವಾಗಿರು’ ಎಂಬ ಕಾಗದವೂ ಇತ್ತು. ಅದನ್ನು ನೋಡಿದಾಗಲೆಲ್ಲಾ ನಾವು ಧೈರ್ಯ ತುಂಬಿಕೊಳ್ಳುತ್ತಿದ್ದೇವು. ಉತ್ಸುಕರಾಗಿ ಕೆಲಸ ಮಾಡುತ್ತಿದ್ದೆವು. ಇನ್ನೊಂದೆಡೆ ದಾಖಲಾಗಿದ್ದ ಭಾರತೀಯ ರೋಗಿಗೆ ಅವರ ಹೆಂಡತಿ ಹನುಮಾನ್ ಚಾಲಿಸಾ ಪ್ರಾರ್ಥನೆ ಕೇಳಿಸಲು ಮನವಿ ಮಾಡಿದ್ದರು. ನಾವು ಆ ರೋಗಿಯ ಬಳಿ ಭೇಟಿ ಕೊಟ್ಟಾಗ ಅದನ್ನು ಮೊಬೈಲಿನಲ್ಲಿ ಸ್ಪೀಕರ್ ಆನ್ ಮಾಡಿ ಕೇಳಿಸುತ್ತಿದ್ದೆವು. ಇವೆರಡೂ ಇಲ್ಲಿಯವರೆಗೆ ನಾನು ಮರೆಯಲಾಗದ ಘಟನೆಗಳು.

ಕೋವಿಡ್ ಪ್ರಕರಣಗಳ ಆರಂಭದ ದಿನಗಳಲ್ಲಿ ನಾವುಗಳೆಲ್ಲಾ ಆತಂಕದಲ್ಲಿದ್ದೆವು. ನಮ್ಮ ಆರೋಗ್ಯವೂ ಹಾನಿಯಾಗುವ ಭಯವಿತ್ತು. ನಮಗೆ ಎರಡು ಪುಟ್ಟ ಮಕ್ಕಳು. ಪ್ರತಿದಿನ ಒಂದಷ್ಟು ಹೊತ್ತು ಬೇಬಿ ಸಿಟ್ಟರ್ ನಲ್ಲಿ ಕೂಡಿಸಿರುತ್ತೇವೆ. ನೀವು ಕೆಲಸಕ್ಕೇ ಹೋಗಬೇಡಿ. ಸುಮ್ಮನೆ ದೇಶಕ್ಕೆ ಹಿಂತಿರುಗಿ ಎಂದು ಕೆಲವು ಸಂಬಂಧಿಗಳು, ಸ್ನೇಹಿತರು ಕರೆ ಮಾಡುತ್ತಿದ್ದರು. ನನ್ನ ಪತಿ ಡಾ. ಸಮರ್ಥ್ ಆರಾಧ್ಯ ಕನೆಕ್ಟಿಕಟ್‌ನಲ್ಲಿರುವ ನಾರ್ವಾಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾರೆ. ನಾವಿಬ್ಬರೂ ಕುಳಿತು ಸಮರ್ಥವಾಗಿ ಯೋಚಿಸಿದೆವು. ವೈದ್ಯರಾಗಿ ನಾವು ಹೇಡಿಗಳಂತೆ ವರ್ತಿಸುವುದು ಬೇಡ. ರೋಗಿಯ ಒಳಿತಿಗೆ, ರೋಗದ ವಿರುದ್ಧ ಹೋರಾಡುವುದೇ ನಮ್ಮ ಕರ್ತವ್ಯ. ನಮ್ಮ ಶಪಥದ ಸಮರ್ಥನೆಗೆ ಇದು ಸಕಾಲ. ಕೂಡಲೇ ಒಂದು ನಿರ್ಧಾರಕ್ಕೆ ಬಂದೆವು. ಬಾಸ್ಟನ್ ನಲ್ಲಿದ್ದ ನನ್ನ ಸಹೋದರ ನಂದೀಶ್ ಹೆಬ್ಬಾಳ್‌ಗೆ ಕರೆ ಮಾಡಿದೆವು. ಆತ ಅಲ್ಲಿ ಎಂ.ಬಿ.ಎ ವ್ಯಾಸಂಗ ಮಾಡುತ್ತಿದ್ದಾನೆ. ಒಂದಷ್ಟು ದಿವಸ ಇಲ್ಲಿಗೆ ಬಂದು ನಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವೇ ಎಂದು ಕೇಳಿಕೊಂಡೆವು. ಆತ ಸಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣವೇ ನಾವಿದ್ದಲ್ಲಿಗೆ ಬಂದ. ನಿಮ್ಮಿಬ್ಬರದು ಈ ಪರಿಸ್ಥಿತಿಯಲ್ಲಿ ತುಂಬಾ ಜವಾಬ್ದಾರಿಯುತ ಕೆಲಸ. ನೀವು ಕೆಲಸಕ್ಕೆ ಹೋಗಿ ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ. ಈಗ ನಮ್ಮ ಶಿಕ್ಷಣ ಏನಿದ್ದರೂ ಆನ್‌ಲೈನಿನಲ್ಲಿ ನಡೆಯುತ್ತಿದೆ ತೊಂದರೆಯಾಗುವುದಿಲ್ಲ ಎಂದ. ನಾವು ನಮ್ಮಿಬ್ಬರ ಆಸ್ಪತ್ರೆಗಳಿಗೆ ಹತ್ತಿರವಾಗುವ ಹೋಟೆಲ್ ಒಂದರಲ್ಲಿ ಇಬ್ಬರಿಗೂ ಪ್ರತ್ಯೇಕ ಕೋಣೆಗಳನ್ನು ಬುಕ್ ಮಾಡಿ ಅಲ್ಲಿಂದ ಹೊರಟೆವು. ಸುಮಾರು ಆರು ವಾರಗಳ ಕಾಲ ಮಕ್ಕಳನ್ನು ಸಹೋದರನ ಸುಪರ್ದಿಗೆ ಒಪ್ಪಿಸಿ ನಮ್ಮ ಕರ್ತವ್ಯಗಳಲ್ಲಿ ನಿರತರಾದೆವು. ಈಗ ಮತ್ತೆ ಎಲ್ಲರೂ ಒಟ್ಟಿಗೆ ಇದ್ದೇವೆ.

ಬೆಳಗಿನ ಹೊತ್ತು ನಾನು ನನ್ನ ಕರ್ತವ್ಯಕ್ಕೆ ಹಾಜರಾಗುತ್ತೇನೆ. ನನ್ನ ಪತಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ರಾತ್ರಿಯ ಹೊತ್ತು ಅವರು ಆಸ್ಪತ್ರೆಯ ಕರ್ತವ್ಯಕ್ಕೆ ಹೋಗುತ್ತಾರೆ, ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಹೀಗಿದೆ ನಮ್ಮ ದಿನಚರಿ. ವೈದ್ಯರಾಗಿ ನಮ್ಮ ಕರ್ತವ್ಯ ನಿಭಾಯಿಸುವುದೇ ನಮ್ಮ ಗುರಿ ಮತ್ತು ಸಾರ್ಥಕತೆ. ನಮಗೆ ಅಮೂಲ್ಯವಾದ ಬೆಂಬಲವನ್ನು ನೀಡುತ್ತಿರುವ ಸಹೋದರ ಮತ್ತು ಭಾರತದಿಂದ ಪ್ರೋತ್ಸಾಹ ನೀಡುತ್ತಿರುವ ನಮ್ಮಿಬ್ಬರ ಪೋಷಕರಿಗೆ ಚಿರ ಋಣಿಯಾಗಿದ್ದೇವೆ.


 ಅರುಣ್‌ಕುಮಾರ್  ಆರ್.ಟಿ.
9663793337
arunartist@gmail.com