ಮಲೇಬೆನ್ನೂರಿನ ವಾರ್ಡ್‌ಗಳಿಗೆ ತುಂಗಾಭದ್ರಾ ನದಿ ನೀರು

ಮಲೇಬೆನ್ನೂರಿನ ವಾರ್ಡ್‌ಗಳಿಗೆ ತುಂಗಾಭದ್ರಾ ನದಿ ನೀರು

ಪಟ್ಟಣದಲ್ಲಿ ಕಳೆದೊಂದು ತಿಂಗಳಿನಿಂದ ಕಾರ್ಯ ನಿರ್ವಹಿಸದ ಸಿಸಿಟಿವಿ ಕ್ಯಾಮರಾ

ಮಲೇಬೆನ್ನೂರು, ಮೇ 22- ಪಟ್ಟಣದ ಜನತೆಗೆ ಅನುಕೂಲವಾಗಲೆಂದು ಶುಕ್ರವಾರದಿಂದ ತುಂಗಭದ್ರಾ ನದಿ ನೀರನ್ನು ವಡೆಯರ ಬಸಾಪುರ ಗ್ರಾಮದ ಬಳಿ ಇರುವ ಪಂಪ್‌ಹೌಸ್‌ನಿಂದ ಸರಬರಾಜು ಮಾಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ತಿಳಿಸಿದ್ದಾರೆ.

ಇದುವರೆಗೆ ಭದ್ರಾ ಕಾಲುವೆಯಲ್ಲಿ ನೀರು ಹರಿಯುತಿತ್ತು. ಹೀಗಾಗಿ ಜನ-ಜಾನುವಾರುಗಳಿಗೆ ನೀರಿನ ತೊಂದರೆ ಇರಲಿಲ್ಲ. ಈಗ ಭದ್ರಾ ಕಾಲುವೆಯಲ್ಲಿ ನೀರು ಬಂದ್ ಆಗಿರುವುದರಿಂದ ಇನ್ಮುಂದೆ ತುಂಗಭದ್ರಾ ನದಿ ನೀರನ್ನು ಪೂರೈಸಲಾಗುವುದು. ರಾಜೀವ್‌ಗಾಂಧಿ ಬಹು ಗ್ರಾಮ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಈ ನದಿಯಿಂದ ಮಲೇಬೆನ್ನೂರು ಸೇರಿದಂತೆ ಸುಮಾರು 25 ಗ್ರಾಮಗಳಿಗೆ ಪೂರೈಸುವ ಗುರಿ ಹೊಂದಲಾಗಿತ್ತು. ಆದರೀಗ ಈ ನೀರು ಮಲೇಬೆನ್ನೂರು ಪುರಸಭೆಯ 14 ವಾರ್ಡ್‌ಗಳಿಗೆ ತಲುಪಲಿದೆ.

ಉಳಿದ 9 ವಾರ್ಡ್‌ಗಳಲ್ಲಿ ಪೈಪ್‌ಲೈನ್ ಕಾಮಗಾರಿ ಮಾಡಿಲ್ಲ. ಹಾಗಾಗಿ ಈ ವಾರ್ಡ್‌ಗಳಿಗೆ ನದಿ ನೀರು ಹೋಗುವುದಿಲ್ಲ. ಇವರಿಗೆ ನೀರಿನ ತೊಂದರೆ ಆಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಮುಖ್ಯಾಧಿ ಕಾರಿ ಧರಣೇಂದ್ರ ಕುಮಾರ್ ಹೇಳಿದರು.

1, 2, 3, 4, 5, 6 ಮತ್ತು 11, 12, 13, 14, 15, 16, 20, 21ನೇ ವಾರ್ಡ್‌ಗಳಲ್ಲಿ ನದಿ ನೀರಿನ ಪೈಪ್ ಲೈನ್ ಇರುವುದರಿಂದ ಇಲ್ಲಿ ನೀರನ್ನು ಪೂರೈಕೆ ಮಾಡಲಾಗುವುದು. ಯೋಜನೆ ಪೂರ್ಣಗೊಂಡಲ್ಲಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ಈ ಕುರಿತು ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುವ ಇಂಗಿತವನ್ನು ಪುರಸಭೆ ಸದಸ್ಯರು ವ್ಯಕ್ತಪಡಿಸಿದ್ದಾರೆ.

ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮರಾ : ಪಟ್ಟಣದಲ್ಲಿ ಪುರಸಭೆಯ ಅನುದಾನದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಗಳು ಕಳೆದೊಂದು ತಿಂಗಳಿ ನಿಂದ ಕಾರ್ಯನಿ ರ್ವಹಿಸುತ್ತಿಲ್ಲ ಎಂಬ ವಿಷಯ ತಡ ವಾಗಿ ಬೆಳಕಿಗೆ ಬಂದಿ ದೆ. ಅಲ್ಲಲ್ಲಿ ಕೇಬಲ್ ಕಟ್ ಆಗಿದ್ದು, ರಿಪೇರಿ ಮಾಡು ವವರು ಲಾಕ್‌ ಡೌನ್ ಇರುವ ಕಾರಣ ಬಂದಿಲ್ಲ. ಹಾಗಾಗಿ ಸಿಸಿಟಿವಿ ಕ್ಯಾಮರಾ ಕೆಲಸ ಮಾಡುತ್ತಿಲ್ಲ ಎಂದು ಪೊಲೀಸರು ತಿಳಿಸಿದರು. ಸಿಸಿಟಿವಿ ಕ್ಯಾಮರಾ ಕೈಕೊಟ್ಟಿರುವುದರಿಂದ ಪಟ್ಟಣದಲ್ಲಿ ಸಣ್ಣ-ಪುಟ್ಟ ಕಳ್ಳತನಗಳನ್ನು ಪತ್ತೆ ಮಾಡುವುದು ಕಷ್ಟವಾಗುತ್ತಿದೆ.

ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಇಲ್ಲಿನ ಮುಖ್ಯ ವೃತ್ತದಲ್ಲಿ ತರಕಾರಿ, ಹಣ್ಣು ಖರೀದಿ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮೊಬೈಲನ್ನು ಜೇಬಿನಿಂದ ಕದ್ದಿದ್ದಾರೆ. ಮೊಬೈಲ್ ಕಳುವು ಮಾಡಿದ ನಿಮಿಷದಲ್ಲೇ ಸ್ವಿಚ್ ಆಫ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿಸಿಟಿವಿ ಕ್ಯಾಮರಾ ಆನ್ ಇದ್ದಿದ್ದರೆ ಕಳ್ಳನನ್ನು ಬಹಳ ಸುಲಭವಾಗಿ ಹಿಡಿಯಬಹುದಿತ್ತೆಂದು ಮೊಬೈಲ್ ಕಳೆದುಕೊಂಡ ಜಿಗಳಿಯ ಜಿ.ಆನಂದಪ್ಪ ಬೇಸರದಿಂದ ಹೇಳಿದರು.

ಮಲೇಬೆನ್ನೂರಿನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ ನಂತರ ಗಲಾಟೆ, ಕಳ್ಳತನ  ಪ್ರಕರಣಗಳು ಗಣನೀಯವಾಗಿ ಕಡಿಮೆ ಆಗಿವೆ. ಆದ್ದರಿಂದ ಪೊಲೀಸರುhttp://janathavani.com/wp-admin/post.php?post=17100&action=edit# ಈ ಕೂಡಲೇ ಸಿಸಿಟಿವಿ ಕ್ಯಾಮರಾಗಳ ಕೇಬಲ್ ದುರಸ್ತಿ ಮಾಡಿಸಿ, ಕ್ಯಾಮರಾಗಳು ಆನ್ ಆಗುವಂತೆ ಮಾಡಬೇಕೆಂದು ಪಟ್ಟಣದ ನಾಗರಿಕರು ಒತ್ತಾಯಿಸಿದ್ದಾರೆ.

ಸುನೀಲ್‌ಕುಮಾರ್ ಹುಲ್ಮನಿ ಅವರು, ಇಲ್ಲಿನ ಪಿಎಸ್‌ಐ ಆಗಿದ್ದಾಗ ಪುರಸಭೆಯ ಮನವೊಲಿಸಿ, ಸುಮಾರು 25 ಲಕ್ಷ ರೂ. ಅನುದಾನ ಪಡೆದು, ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply

Your email address will not be published.