ನಮ್ಮ ಜೀವನ `ಚೋರಿ ಚೋರಿ ಚುಪ್ಕೆ ಚುಪ್ಕೆ’

ನಮ್ಮ ಜೀವನ `ಚೋರಿ ಚೋರಿ ಚುಪ್ಕೆ ಚುಪ್ಕೆ’

ದಾವಣಗೆರೆ, ಮೇ 22- ಈ ಏರಿಯಾದಲ್ಲಿ ಕೊರೊನಾ ಪಾಸಿಟಿವ್‌ ಕೇಸ್‌ ಇದೆ ಅಂತಾ ಹೇಳಿದ ಇಡೀ ಬೀದಿನೇ ಸೀಲ್‌ಡೌನ್‌ ಮಾಡಿದ್ದಾರೆ. ಆದರೆ ನಮಗೆ ಜೀವನೋಪಾಯಕ್ಕೆ ಬೇಕಾಗಿರುವ ಸಾಮಗ್ರಿಗಳ ಕೊರತೆ ಇದ್ದು, ಇದನ್ನು ತರಲು ನಾವುಗಳು ಹೋಗಬೇಕಾದರೆ ಪೊಲೀಸರ ಸರ್ಪಗಾವಲಿನಿಂದ ಬಚಾವ್‌ ಆಗಿ ಹೋಗಿ ತರಬೇಕಾದಂತಹ ದುಸ್ಥಿತಿ ನಮ್ಮದಾಗಿದೆ ಎನ್ನುತ್ತಾರೆ ಶಿವನಗರದ ನಿವಾಸಿಯೊಬ್ಬರು.

ಇನ್ನು ಎರಡು ದಿನ ಬಿಟ್ಟರೆ ರಂಜಾನ್‌ ಹಬ್ಬ. ಇಲ್ಲಿಯವರೆಗೆ ನಮ್ಮ ಮನೆಯಲ್ಲಿ ಹಬ್ಬದ ಮಾರ್ಕೆಟ್‌ ಮಾಡಿಲ್ಲ. ದಿನ ಬೆಳಿಗ್ಗೆ ಎದ್ದು ಬೀದಿಗೆ ಹಾಕಿರುವ ಗೇಟ್‌ಗಳನ್ನು ನೋಡ್ತಾ ಕಾಲ ಕಳೆಯುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಹಬ್ಬಕ್ಕಾದರೂ ಸ್ವಲ್ಪ ಸಡಿಲಿಕೆ ಕೊಡಲೇ ಕೊಡಬೇಕೆಂದು ಮನವಿ ಮಾಡಿದರು.

ಸಮಯಕ್ಕೆ ಸರಿಯಾಗಿ ನೀರು ಸರಬರಾಜು ಸಿಗುತ್ತಿಲ್ಲ. ತರಕಾರಿ ಗಾಡಿಗಳಂತೂ ಇಲ್ಲಿ ಬರಲೇ ಇಲ್ಲ. ಹೀಗಾಗಿ ಪ್ರಸ್ತುತ ದಿನಗಳಲ್ಲಿ ನಮ್ಮ ಜೀವನ `ಚೋರಿ ಚೋರಿ ಚುಪ್ಕೆ ಚುಪ್ಕೆ’ ಯಾಗಿ ಸಾಗುತ್ತಿದೆ ಎಂದು ಹೇಳಿ ಇಡೀ ಊರಿನಲ್ಲಿ ಜನ ಓಡಾಡ್ತಾ ಇದ್ದಾರೆ. ಈ ಭಾಗದಿಂದ ಜನರು ಹೊರ ಹೋಗು ವುದನ್ನು ನಿಷೇಧಿಸಿದ್ದಾರೆ. ಕೂಡಲೇ ನಮಗೂ ಸಹ ಅವಕಾಶ ಕಲ್ಪಿಸಲಿ ಎಂದು ಕೋರಿದರು.

ಕೊರೊನಾ ಇದೆ ಅಂದ್ರೆ `ಕ್ಯಾ ಕರಾ’ ಅಂತಾರೆ

ನೋಡಮ್ಮಾ ಈ ಪ್ರದೇಶದಲ್ಲಿ ಕೊರೊನಾ ಸೋಂಕು ಪಾಸಿಟಿವ್‌ ಕೇಸ್‌ ಇದೆ. ಹಾಗಾಗಿ ನಾವುಗಳು ಬಹಳ ಎಚ್ಚರದಿಂದ ಇರಬೇಕು ಎಂದು ಮಹಿಳೆಯರಿಗೆ ಆ ಭಾಗದ ನಿವಾಸಿಯೊಬ್ಬರು ತಿಳುವಳಿಕೆ ನೀಡಿದರೆ ಅವರಿಗೆ ಸಿಕ್ಕ ಉತ್ತರ ಏನು ಗೊತ್ತಾ `ಕೊರೊನಾ ರಹೇತೂ ಕ್ಯಾ ಕರಾ’ ಅಂತಾರೆ ಅಂದ್ರೆ ಇಲ್ಲಿಯ ಜನರು ಯಾವಾಗ ಹುಷಾರಾಗ್ತಾರೆ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ.

ಶಿವನಗರ ಕಂಟೈನ್‌ಮೆಂಟ್‌ ಜೋನ್‌ನಿಂದ ಸ್ವಲ್ಪ ಮುಂದೆ ಸಾಗಿ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕ್ವಾಟರ್ಸ್‌ ಪ್ರವೇಶ ದ್ವಾರದಲ್ಲಿ ಈ ಘಟನೆ ಜರುಗಿದ್ದು, ಈ ಭಾಗದ ಜನರಿಗೆ ಕಾಯಿಲೆಯ ಬಗ್ಗೆ ಸರಿಯಾಗಿ ತಿಳುವಳಿಕೆ ಇಲ್ಲ. ಹೀಗಾಗಿ ಇಲ್ಲಿಯ ಜನರು ಯರಾಬಿರಿಯಾಗಿ ಓಡಾಡ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಆ ವ್ಯಕ್ತಿ ಬಂದದ್ದು ಬಡವರಿಗೆ ಸಹಾಯ ಮಾಡಲು. ಆದರೆ ಅಲ್ಲಿನ ಪರಿಸ್ಥಿತಿಯನ್ನು ಕಂಡು ಕೊಂಚ ಸಹಾಯ  ಮಾಡಿ ಜಾಗ ಖಾಲಿ ಮಾಡಿದರು.

ಸೌಕರ್ಯ ಕಲ್ಪಿಸಲು ಒತ್ತಾಯ ; ಅಲಿ : ಮೂಲಭೂತ ಸೌಕರ್ಯದ ಕೊರತೆಯನ್ನು ಎದುರಿಸುತ್ತಿರುವ ಈ ಭಾಗದ ಜನರಿಗೆ `ಸೀಲ್‌ ಡೌನ್‌’ ಆದ ನಂತರ ಬಹಳ ತೊಂದರೆಯಾಗಿದೆ. ಊಟಕ್ಕಾಗಿ ಪರದಾಡುವಂತಹ ಸ್ಥಿತಿ ತಲುಪಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಅಲಿ ತಿಳಿಸಿದರು.

ಭಾವೈಕ್ಯತೆಯ ಪ್ರತಿಬಿಂಬವಾಗಿ ರುವ ಈ ಪ್ರದೇಶದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಒಂದಾಗಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಿ ಜೀವನ ಸಾಗಿಸುವ ಬಡವರ ಸಂಖ್ಯೆ ಹೆಚ್ಚಾಗಿದ್ದು, ಸರ್ವರಿಗೂ ಆಹಾರ ಸಾಮಗ್ರಿಗಳ ಕಿಟ್‌ ಬೇಕಾಗಿದೆ. ಅದರಲ್ಲೂ ಮುಸ್ಲಿಂ ಬಾಂಧವರಿಗೆ ರಂಜಾನ್‌ ಹಬ್ಬ ಆಚರಣೆಗೆ ಅವಶ್ಯಕ ಸಾಮಗ್ರಿಗಳ ಕೊರತೆ ಇದೆ ಎಂದು ವಿವರಿಸಿದರು.


ಬಿ. ಸಿಕಂದರ್‌,
9844404920

Leave a Reply

Your email address will not be published.