ಪರ್ಯಾಯ ಸಮಾಜ ನಿರ್ಮಾಣ ಅಗತ್ಯ

ದಾವಣಗೆರೆ ವಿವಿಯಲ್ಲಿ  ಸಾಮಾಜಿಕ ಸ್ಥಿತ್ಯಂತರ ಕುರಿತ ವಿಶೇಷ ಆನ್‍ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಚಿಂತಕ ಸಿದ್ಧನಗೌಡ ಪಾಟೀಲ ಅಭಿಮತ

ದಾವಣಗೆರೆ, ಮೇ 20 – ವಿಜ್ಞಾನ, ತಂತ್ರಜ್ಞಾನ ಮತ್ತು ಯಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜವನ್ನು ಪರ್ಯಾಯವಾಗಿ ರೂಪಿಸಿ, ಸದೃಢ ದೇಶ ನಿರ್ಮಾಣಕ್ಕೆ ಪ್ರಜಾಪ್ರಭುತ್ವ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಕಾರ್ಯ ಯೋಜನೆ ಸಿದ್ಧಗೊಳ್ಳಬೇಕು ಎಂದು ಸಾಹಿತಿ, ಪತ್ರಕರ್ತ, ರಾಜಕೀಯ ಚಿಂತಕ ಡಾ.ಸಿದ್ಧನಗೌಡ ಪಾಟೀಲ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸಾಮಾಜಿಕ ಸ್ಥಿತ್ಯಂತರ ಕುರಿತ ವಿಶೇಷ ಆನ್‍ಲೈನ್ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

  ಕೊರೊನಾ ವೈರಾಣು ಜಗತ್ತಿನ ಎಲ್ಲ ವರ್ಗದ ಜನರ ಸಾಮಾಜಿಕ ವ್ಯವಸ್ಥೆಯನ್ನೇ ಬದಲಿಸಿದೆ. ಪರಿವರ್ತನೆಗೆ ವೇದಿಕೆಯಾಗಿ ಸಂಘರ್ಷದಿಂದ ಸಮನ್ವಯದತ್ತ ಜನರನ್ನು ಒಯ್ಯುವಂತೆ ಮಾಡಿದೆ. ಆರ್ಥಿಕ ಹಸಿವು, ಸಾಮಾಜಿಕ ಅಸ್ಪೃಶ್ಯತೆಯಿಂದ ಕಂಗೆಟ್ಟು ವಲಸೆ ಹೋಗಿದ್ದ ಕಾರ್ಮಿಕರು ವಾಪಸ್ ಬರುವಂತಾಗಿದೆ. ಅಸಂಖ್ಯಾತ ಜನರು ಉದ್ಯೋಗವಿಲ್ಲದೆ, ನಿರಾಶ್ರಿತರಾಗಿ ಸಂಕಷ್ಟಕ್ಕೀಡಾ ಗಿದ್ದಾರೆ. ಅವರೆಲ್ಲರ ರಕ್ಷಣೆಯ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗಬೇಕಾಗಿದೆ ಎಂದರು.

ಕೊರೊನಾ ವೈರಾಣು ಜನರಲ್ಲಿದ್ದ ಮೌಢ್ಯವನ್ನು ದೂರ ಮಾಡಿ ಸಾಮಾಜಿಕ ಬಾಂಧವ್ಯವನ್ನು ಹೆಚ್ಚಿಸಿದೆ. ದೇವರು, ಧರ್ಮ ಎಂಬ ಆಚರಣೆಗಳನ್ನು ಬದಿಗಿಟ್ಟು ಬದುಕಿನ ಸತ್ಯವನ್ನು ತಿಳಿಸಿಕೊಟ್ಟಿದೆ. ಮಂತ್ರದಿಂದ ರೋಗ ವಾಸಿಯಾಗುತ್ತೆ ಎಂಬ ನಂಬಿಕೆಯನ್ನು ಅಳಿಸಿ ವೈಜ್ಞಾನಿಕ ಸಮಾಜವನ್ನು ನಿರ್ಮಿಸಿದೆ. ದೈಹಿಕ ಅಂತರ, ಮಾರುಕಟ್ಟೆ ಮಹತ್ವ, ಸಾಮಾಜಿಕ ಪ್ರಜ್ಞೆಯನ್ನು ಅರ್ಥೈಸಿ, ಜನರ ಹಿತಕ್ಕಾಗಿ ಪ್ರಜಾಪ್ರಭುತ್ವಕ್ಕೆ ಯಾವ ರೀತಿಯ ಮುಂದಾಲೋಚನೆ ಬೇಕು ಎಂಬ ಹೊಸ ರಾಜಕೀಯ ಶಾಸ್ತ್ರವನ್ನು ತಿಳಿಸಿಕೊಟ್ಟಿದೆ ಎಂದು ಹೇಳಿದರು.

ಅನಿರೀಕ್ಷಿತವಾಗಿ ಎದುರಾಗುವ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ಜನರ ಹಿತ ಕಾಪಾಡುವ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮುದಾಯಿಕ ಕಾರ್ಯಚಟುವಟಿಕೆ ಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಕೃಷಿ, ಕೃಷಿ ಆಧಾರಿತ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ವ್ಯವಸ್ಥೆ ಆಗಬೇಕಾಗಿದೆ. ಬಡವರು, ದುರ್ಬಲರು, ಅಸಂಘಟಿತ ವಲಯದ ಕಾರ್ಮಿಕರಿಗೆ ಉದ್ಯೋಗದ ಭದ್ರತೆ ನೀಡದಿದ್ದರೆ ಮುಂದೆ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ. ಅದು ಇನ್ನೂ ಆತಂಕಕಾರಿ. ದೇಶದ ಆರ್ಥಿಕ, ಸಾಮಾಜಿಕ ನೆಲೆಯೇ ಅಭದ್ರಗೊಳ್ಳುವ ಆತಂಕವಿದೆ. ಅದನ್ನು ಸವಾಲಾಗಿ ಸ್ವೀಕರಿಸಿ ಸಮಸ್ಯೆ ಎದುರಿಸಲು ಪ್ರಜಾಪ್ರಭುತ್ವ ಸಿದ್ಧವಾಗಬೇಕು ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಬಸವರಾಜ ಬಣಕಾರ, ಪರೀಕ್ಷಾಂಗ ಕುಲಸಚಿವೆ ಪ್ರೊ.ಎಚ್.ಎಸ್. ಅನಿತಾ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷ ಶಿವಕುಮಾರ ಕಣಸೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸಹಾಯಕ ಪ್ರಾಧ್ಯಾಪಕ ಎಂ.ವಿನಯ್ ವಂದಿಸಿದರು.