ಹರಪನಹಳ್ಳಿ: ದೂರದರ್ಶನ ಮರುಪ್ರಸಾರ ಕೇಂದ್ರಕ್ಕೆ ನೀರು

ಹರಪನಹಳ್ಳಿ: ದೂರದರ್ಶನ ಮರುಪ್ರಸಾರ ಕೇಂದ್ರಕ್ಕೆ ನೀರು

ಹರಪನಹಳ್ಳಿ, ಮೇ 18-  ಪಟ್ಟಣದಲ್ಲಿ ಸುರಿದ ಮಹಾ  ಮಳೆಯಿಂದಾಗಿ ದೂರದರ್ಶನ ಮರುಪ್ರಸಾರ ಕೇಂದ್ರದ ಮುಂದೆ ಅಪಾರ ಪ್ರಮಾಣದ ನೀರು ಜಮೆಯಾಗಿ, ಕಚೇರಿಯಲ್ಲಿದ್ದ  ಇಂಜಿನಿಯರ್ ಒಬ್ಬರನ್ನು ಅಗ್ನಿ ಶಾಮಕ ದಳದವರು ರಕ್ಷಣೆ ಮಾಡಿದ ಘಟನೆ  ಸೋಮವಾರ ಬೆಳಗಿನ ಜಾವ ಜರುಗಿತು.
ಬೆಳಿಗ್ಗೆ 4 ಗಂಟೆಗೆ ಆರಂಭವಾದ ಮಳೆ ಎರಡು ಗಂಟೆಗೂ ಹೆಚ್ಚು ಕಾಲ ಸುರಿಯಿತು.  ಪಟ್ಟಣದ ಲಂಡನ್ ಹಳ್ಳದ ಮೂಲಕ ರೇಣುಕಾಚಾರ್ಯ ಕಲ್ಯಾಣ ಮಂಟಪ, ಕೊಟ್ಟೂರು ರಸ್ತೆಯ ಮುಖಾಂತರ, ತೆಗ್ಗಿನಮಠ ವೃತ್ತ, ಬಿಎಸ್‍ಎನ್‍ಎಲ್ ಕಚೇರಿ, ಕಾರ್‍ಸ್ಟ್ಯಾಂಡ್ ರಸ್ತೆಯ ಮೇಲೆ ರಭಸವಾಗಿ ನೀರು ಹರಿದಿದ್ದು ವಾಹನ ಸವಾರರು ಹರಸಾಹಸ ಪಟ್ಟರು.
ಕಾರ್‍ಸ್ಟ್ಯಾಂಡ್ ಬಳಿ ಕೊಟ್ಟೂರು ಕಡೆಗೆ ತೆರಳುತ್ತಿದ್ದ ಕಾರೊಂದು ಮಳೆಯ ನೀರಿಗೆ ಸಿಲುಕಿ ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿಯೇ ನಿಂತಿತ್ತು. ಅನೇಕ ವಾಹನಗಳು ನೀರಿನಲ್ಲಿ ಮುಳುಗಿ ಹೋದ ಪರಿಣಾಮ ಇಂಜಿನ್ ಸ್ಥಗಿತಗೊಂಡಿದ್ದವು.
ರಸ್ತೆ ಸಂಪರ್ಕ ಸ್ಥಗಿತ: ಕಂಚಿಕೇರಿ ಮಾರ್ಗವಾಗಿ ದಾವಣಗೆರೆಗೆ ತೆರಳುವ ರಸ್ತೆ ರೈಲ್ವೆ ಬ್ರಿಡ್ಜ್ ಕೆಳಗೆ ನೀರು ತುಂಬಿ ಹರಿದ ಪರಿಣಾಮ ನಾಲ್ಕು ಗಂಟೆಗಳ ಕಾಲ ವಾಹನ ಸವಾರರು ಪರದಾಡಿದರು. ಸಾರ್ವಜನಿಕ ಗ್ರಂಥಾಲಯ, ಬಿಎಸ್‍ಎನ್‍ಎಲ್ ಕಚೇರಿ, ಡಿವೈಎಸ್‍ಪಿ ಕಚೇರಿ, ದೂರದರ್ಶನ ಮರುಪ್ರಸಾರ ಕೇಂದ್ರ, ವಾಲ್ಮೀಕಿ ನಗರದ ತಗ್ಗು ಪ್ರದೇಶದ ಮನೆಗಳಿಗೆ, ಕೋಟೆ ಆಂಜನೇಯ ರಸ್ತೆ ಬಡಾವಣೆಯ ಮನೆಗಳು ನೀರಿನಿಂದ ಆವೃತವಾಗಿದ್ದವು. ಪುರಸಭೆಯಿಂದ ಜೆಸಿಬಿ ಯಂತ್ರ ತಂದು ನೀರು ನಿಂತ ಅನೇಕ ಕಡೆಗಳಲ್ಲಿ ಸರಾಗವಾಗಿ ಹರಿಯುವಂತೆ ಕಾರ್ಯಾಚರಣೆ ನಡೆಸಿದರು.
ಮಳೆ ನೀರಿನಿಂದ ಅವೃತವಾದ ಪ್ರದೇಶಗಳಿಗೆ ಶಾಸಕ ಜಿ.ಕರುಣಾಕರ ರೆಡ್ಡಿ, ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ, ತಹಶೀಲ್ದಾರ್ ಡಾ.ನಾಗವೇಣಿ, ಪುರಸಭೆ ಮುಖ್ಯಾಧಿಕಾರಿ ನಾಗರಾಜನಾಯ್ಕ ಭೇಟಿ ನೀಡಿ, ಪರಿಶೀಲಿಸಿದರು.

Leave a Reply

Your email address will not be published.