ಅಜಾತ ಶತ್ರು ಕವಿ ಗುರುವಿಗೆ ನಮಸ್ಕಾರ

ಅಜಾತ ಶತ್ರು ಕವಿ ಗುರುವಿಗೆ ನಮಸ್ಕಾರ

ಪ್ರೊ|| ಕೆ.ಎಸ್. ನಿಸಾರ್ ಅಹಮದ್ ಅವರು ತಮ್ಮ ಪ್ರಸಿದ್ಧ ಕವನ ‘ಮಾಸ್ತಿ’ಯಲ್ಲಿ ಮಾಸ್ತಿಯವರ ಅದ್ಭುತ ಜೀವನ ಚಿತ್ರವನ್ನು ಕಟ್ಟಿಕೊಡುತ್ತಾ ಕೊನೆಗೆ, ‘ಬೀದಿ ತಿರುವನು ಹೊಕ್ಕು’ ಅವರು ಹೇಗೆ ಮರೆಯಾದರೆಂಬುದನ್ನು ‘ಸಂದ ಜೀವನದೊಂದು ರೀತಿಯಂತೆ | ಸರಳ ಸದಭಿರುಚಿಯ ಖ್ಯಾತಿಯಂತೆ’ ಎಂಬ ಪ್ರಖ್ಯಾತ ಸಾಲುಗಳಿಂದ ಮುಕ್ತಾಯಗೊಳಿಸುತ್ತಾರೆ. ಈಗ  ತಾವೂ ಅದೇ ರೀತಿ ಕನ್ನಡ ಕಾವ್ಯಲೋಕದಲ್ಲೊಂದು ದೊಡ್ಡ ಶೂನ್ಯ ಸೃಷ್ಟಿಸಿ ಶಾಶ್ವತವಾಗಿ ಮರೆಯಾಗಿ ಹೋಗಿದ್ದಾರೆ. ನೋವು ನುಂಗಿಕೊಂಡು ಅವರ ಸಾಹಿತ್ಯದಲ್ಲಿ ಅವರನ್ನು ಕಾಣಬೇಕಾದ ಅನಿವಾರ್ಯತೆ ಈಗ ಧುತ್ತೆಂದು ನಮಗೆ ಎದುರಾಗಿದೆ.
ಪ್ರೊ|| ನಿಸಾರರು ಕನ್ನಡ ಕಾವ್ಯ, ವಿಮರ್ಶೆ, ವಿಚಾರ ಸಾಹಿತ್ಯ, ಅನುವಾದ, ಮಕ್ಕಳ ಸಾಹಿತ್ಯ, ಸಂಪಾದನೆ ಕ್ಷೇತ್ರಗಳಿಗೆ ನೀಡಿರುವ ಕೊಡುಗೆ ಅಪಾರ. ನವೋದಯ ಮತ್ತು ನವ್ಯ ಕಾವ್ಯ ಪರಂಪರೆಗೆ ಗಣನೀಯ ಸತ್ವವನ್ನು ಸೇರಿಸಿದ ಹೆಗ್ಗಳಿಕೆ ಅವರದು. ಪ್ರಾಧ್ಯಾಪಕ ವೃತ್ತಿಯಿಂದ ಅವರು ನಿವೃತ್ತಿಗೊಂಡು ಸುಮಾರು ಮೂರು ದಶಕಗಳವರೆಗೂ ವೈವಿಧ್ಯಮಯ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದವರು.
ಪ್ರೊ|| ನಿಸಾರರೊಡನೆ ನನ್ನ ಒಡನಾಟ ಆರು ದಶಕಗಳಷ್ಟು ಹಳೆಯದು. 1959-62 ರಲ್ಲಿ ನಾನು ಚಿತ್ರದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿ. ದಾವಣಗೆರೆಯ ಡಿ.ಆರ್.ಎಂ. ಕಾಲೇಜಿನಲ್ಲಿ ಪಿ.ಯು.ಸಿ. ಮುಗಿಸಿದ್ದ ನಾನು ದುಬಾರಿ ಹಾಗೂ ವ್ಯಾಪಾರೀ ನಗರವಾಗಿದ್ದ ದಾವಣಗೆರೆಯನ್ನು ಬಿಟ್ಟು ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಚಿತ್ರದುರ್ಗಕ್ಕೆ ಹೋಗಿದ್ದೆ. ಕುಗ್ರಾಮವೊಂದರ ಶುದ್ಧ ಹಳ್ಳಿ ಹುಡುಗನಾಗಿದ್ದ ನನಗೆ ದಾವಣಗೆರೆ-ಚಿತ್ರದುರ್ಗಗಳೇ ಬೆಂಗಳೂರು-ಮೈಸೂರುಗಳಾಗಿದ್ದ ಕಾಲವದು.
ಅದು ಜಿಲ್ಲೆಯ ಒಂದೇ ಸರ್ಕಾರಿ ಕಾಲೇಜಾಗಿದ್ದುದರಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿತ್ತು. ಕಾಲೇಜಿನ ಹೊಸ ಕಟ್ಟಡ ಪೂರ್ತಿಯಾಗಿರಲಿಲ್ಲ. ಹೀಗಾಗಿ ನಮ್ಮ ಕೆಲವು ತರಗತಿಗಳು ಈಗಿನ ನಗರಸಭಾ ಕಟ್ಟಡ (ಆಗಿನ ಕೆಮಿಸ್ಟ್ರಿ ಬ್ಲಾಕ್)ದಲ್ಲಿ ನಡೆಯುತ್ತಿದ್ದವು. ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್‍ನಿಂದ ಪದವಿ ಪಡೆದು ಬಂದಿದ್ದ ಪ್ರೊ|| ಎಸ್.ಎಲ್. ರಾಮರಾವ್ ನಮ್ಮ ಪ್ರಿನ್ಸಿಪಾಲರು. ಅತ್ಯಂತ ಪ್ರತಿಭಾನ್ವಿತರನೇಕರು ಉಪನ್ಯಾಸಕವರ್ಗದಲ್ಲಿದ್ದರು. ಈ ಗುಂಪಿಗೆ 1960 ರಲ್ಲಿ ವರ್ಗವಾಗಿ ಬಂದು, ಭೂ ವಿಜ್ಞಾನಶಾಸ್ತ್ರದ ಉಪನ್ಯಾಸಕರಾಗಿ ಸೇರ್ಪಡೆಗೊಂಡವರೇ ಪ್ರೊ|| ಕೆ.ಎಸ್. ನಿಸಾರ್ ಅಹಮದ್ ಅವರು. ಆಗ ಬಿ.ಎ. ವಿದ್ಯಾರ್ಥಿಗಳು ಸಾಮಾನ್ಯ ವಿಜ್ಞಾನ, ಬಿ.ಎಸ್ಸಿ. ವಿದ್ಯಾರ್ಥಿಗಳು ಸಮಾಜ ವಿಜ್ಞಾನವೆಂಬ ವಿಷಯಗಳನ್ನು ಓದಬೇಕಾಗಿತ್ತು.
ಸಾಮಾನ್ಯ ವಿಜ್ಞಾನದಲ್ಲಿ ನಮಗೆ ಅತ್ಯಂತ ಆಸಕ್ತಿದಾಯಕ ವಿಷಯವಾಗಿದ್ದುದು ಭೂಗರ್ಭ ಶಾಸ್ತ್ರ, ನಿಸಾರರು ಚಿತ್ರದುರ್ಗದ ಸುತ್ತಮುತ್ತಲಲ್ಲಿ ಕ್ಷೇತ್ರ ಕಾರ್ಯ ನಡೆಸಿ ಸಂಗ್ರಹಿಸಿದ್ದ ವಿವಿಧ ಪ್ರಕಾ ರದ ಶಿಲೆಗಳ ಮಾದರಿಗಳು ನಮ್ಮನ್ನು ನಿಬ್ಬೆರಗಾಗಿ ಸಿದ್ದವು. ಅವರ ಬೋಧನೆ ಎಷ್ಟು ಆಸಕ್ತಿದಾಯಕ ವಾಗಿತ್ತೆಂದರೆ ಒಳ್ಳೆಯ ಉಪನ್ಯಾಸಕರ ತರಗತಿಗಳಿಗೆ ತಪ್ಪಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳೂ ಅವರ ತರಗತಿಗಳಿಗೆ ತಪ್ಪದೇ ಹಾಜರ್! ನಾನು ಎಂದೂ ಅವರ ತರಗತಿಗೆ ಚಕ್ಕರ್ ಹೊಡೆದ ನೆನಪಿಲ್ಲ.
ಭೂಕಂಪ, ಜ್ವಾಲಾಮುಖಿ, ಶಿಲಾಪ್ರಭೇದಗಳು ಮುಂತಾದ ಕ್ಲಿಷ್ಟಕರ ವಿಷಯಗಳನ್ನು ಅವರು ಆರ್ಟ್ಸ್ ವಿದ್ಯಾರ್ಥಿಗಳಾಗಿದ್ದ ನಮ್ಮ ಹೆಡ್ಡ ತಲೆಗಳಲ್ಲಿ ಅತ್ಯಂತ ಕೌಶಲ್ಯದಿಂದ ತುಂಬುತ್ತಿದ್ದರು – ನೋವಾಗದಂತೆ ಕಿವಿ ಚುಚ್ಚುವ ಅಕ್ಕಸಾಲಿಗನಂತೆ!
ಚಿತ್ರದುರ್ಗ ಕಾಲೇಜಿಗೆ ನಿಸಾರರು ಬಂದಾಗ ಅವರಿಗೆ ಕೇವಲ ಇಪ್ಪತ್ನಾಲ್ಕು ವರ್ಷ. `ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದ ಗುಂಗು ಹಚ್ಚಿಕೊಂಡವರು; ಹದಿವಯಸ್ಸಿನಲ್ಲೇ ಕವಿ ಸಮ್ಮೇಳನದಲ್ಲಿ ಪದ್ಯ ಓದಿ ವರಕವಿ ಬೇಂದ್ರೆಯವರಿಂದ ಬೆನ್ನು ತಟ್ಟಿಸಿಕೊಂಡವರು’ ಮುಂತಾಗಿ ವಿದ್ಯಾರ್ಥಿಗಳು ಅವರನ್ನು ಕುರಿತು ಮಾತಾಡಿಕೊಳ್ಳುತ್ತಿದ್ದರು. ಸಾಹಿತ್ಯದಲ್ಲಿ ಸ್ವಲ್ಪ ಆಸಕ್ತಿಯಿದ್ದ ನಾನು ಸಹಜವಾಗಿಯೇ ಅವರತ್ತ ಆಕರ್ಷಿತನಾಗಿದ್ದೆ. ಆಗ ಬಿ.ಎ. ಪದವಿಯಲ್ಲಿ ಕುವೆಂಪು ಅವರ ವೈಚಾರಿಕ ಪ್ರಬಂಧಗಳ ಸಂಕಲನ `ತಪೋನಂದನ’ ನಮಗೆ ಪಠ್ಯವಾಗಿತ್ತು.
ನಮಗೆಲ್ಲಾ ಕಬ್ಬಿಣದ ಕಡಲೆಯಂತಿದ್ದ ಅದನ್ನು ಸುಲಭವಾಗಿ ಅರ್ಥೈಸಿ ಹೇಳಿಕೊಟ್ಟವರು ಕನ್ನಡದ ಮೇಷ್ಟ್ರುಗಳಲ್ಲ, ಭೂಗರ್ಭಶಾಸ್ತ್ರದ ಮೇಷ್ಟ್ರಾದ ನಿಸಾರರು! ಈ ರೀತಿ ಅನಿರೀಕ್ಷಿತವಾಗಿ ನನಗೆ ನಿಸಾರರಿಂದ ಸಾಹಿತ್ಯದ ದೀಕ್ಷೆ ದೊರೆಯಿತು. ನಿಸಾರರು ಹೀಗೆ ನನಗೆ ಗುರುಗಳಾದರೆ, ಅವರಿಗೆ ನನ್ನ ಬೀಗರಾಗಿದ್ದ ದಿ. ಪ್ರೊ|| ಕೆ.ಎಂ. ಗುರಪ್ಪನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರ ಬೋಧಿಸಿದ್ದ ವಿದ್ಯಾ ಗುರುಗಳು! ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾಗಿದ್ದ ಅವರು, ಬೆಂಗಳೂರಿನಲ್ಲಿ ನಿಧನರಾದಾಗ ಅಂತಿಮ ದರ್ಶನಕ್ಕೆ ನಿಸಾರರು ಬಂದಾಗಲೇ ನನಗೆ ಈ ವಿಷಯ ತಿಳಿದದ್ದು.
ನಾನು ಗೆಳೆಯರೊಡನೆ ನಿಸಾರರ ಕೊಠಡಿಗೆ ಹೋಗುತ್ತಿದ್ದಾಗ ಅವರ ಸಾಹಿತ್ಯಾಧ್ಯಯನದ ಆಳ-ಅಗಲವನ್ನು ಕಂಡು ದಂಗಾಗಿ ಹೋಗಿದ್ದೆ! ಉರ್ದು ಮನೆ ಮಾತಾದ ಮುಸ್ಲಿಂ ಯುವಕ-ಓದಿರುವುದು ಭೂವಿಜ್ಞಾನ – ಅದಮ್ಯ ಆಸಕ್ತಿ ಸಾಹಿತ್ಯದಲ್ಲಿ! ಇದು ಆಗ ಕನ್ನಡದಲ್ಲಿ ಮುಸ್ಲಿಂ ಸಮುದಾಯದ ಕೇವಲ ಒಂದಿಬ್ಬರಷ್ಟೇ ಲೇಖಕರಿದ್ದ ಕಾಲದಲ್ಲಿ ನನ್ನಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಜೀವನದಲ್ಲಿ ನನ್ನ ಚಿತ್ರದುರ್ಗದ ಬಿ.ಎ. ಪದವಿ ವ್ಯಾಸಂಗದ ದಿನಗಳನ್ನು ನಾನು ಮರೆಯುವಂತಿಲ್ಲ. ಅತ್ಯಂತ ಸುಸಂಸ್ಕೃತರೂ ಮೃದುಭಾಷಿಗಳೂ ಸೌಜನ್ಯ-ಸೌಮ್ಯತೆಯ ಸರಳ ಸಜ್ಜನರೂ ಆಗಿದ್ದ ನಿಸಾರ್ ಹಳ್ಳಿಗಳಿಂದ ಬಂದಿದ್ದ ನಮ್ಮಂತಹ ಹುಡುಗರಿಗೆ ಆದರ್ಶ ವ್ಯಕ್ತಿಯಾಗಿ ಕಂಡಿದ್ದರು. ಕಾಲೇಜಿನ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರದು ಸಕ್ರಿಯ ಪಾತ್ರ. ಸ್ಕೌಟ್ ಅವರಿಗೆ ಪ್ರಿಯವಾಗಿತ್ತು. ಆಗ ಪ್ರಚಲಿತವಿದ್ದ ಎಂ.ಜಿ.ಎಸ್. ಸ್ಮಾರಕ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವರು ವಿದ್ಯಾರ್ಥಿಗಳನ್ನು ಸದಾ ಹುರಿದುಂಬಿಸುತ್ತಿದ್ದರು. ಇತರೆ ಕೆಲವು ಉಪನ್ಯಾಸಕರಂತೆ ಅವರು ವಿದ್ಯಾರ್ಥಿಗಳೊಡನೆ ಎಂದೂ ಲಘುವಾಗಿ ವರ್ತಿಸಿದವರಲ್ಲ.
ನಾನು ಅಧ್ಯಾಪಕನಾಗಿ ವೃತ್ತಿ ಜೀವನ ಆರಂಭಿಸಿದ ಮೇಲೆ ಬೇರೆ ಬೇರೆ ಕಡೆ ಹೋದಂತೆಯೇ ನಿಸಾರರು ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆ ಕೆಲಸದ ಬೆನ್ನು ಹತ್ತಿ ಓಡಾಡಿದರು. ಅವರ ಕವನ ಬೇರೆ ಕಡೆ ಹೋದಂತೆಯೇ ನಿಸಾರರು ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆ ಕೆಲಸದ ಬೆನ್ನು ಹತ್ತಿ ಓಡಾಡಿದರು. ಅವರ ಕವನ ಸಂಕಲನಗಳು ಪ್ರಕಟವಾಗುತ್ತಿದ್ದಂತೆ ಹೆಚ್ಚುತ್ತಿದ್ದ ಅವರ ಜನಪ್ರಿಯತೆಯನ್ನು ಕಂಡು ನಾವು ಒಳಗೊಳಗೇ ಹಿಗ್ಗುತ್ತಿದ್ದೆವು. ನಾವು ಕೆಲಸ ಮಾಡಿದ ಶಾಲಾ-ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಂತೂ ಅವರ ಸುಪ್ರಸಿದ್ಧ ಕವನ ‘ನಿತ್ಯೋತ್ಸವ’ (‘ಜೋಗದ ಸಿರಿ ಬೆಳಕಿನಲಿ…’) ಇದ್ದೇ ಇರುತ್ತಿತ್ತು. ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿಗೋಷ್ಠಿಗಳಲ್ಲಿ, ವಿಚಾರ ಸಂಕಿರಣಗಳಲ್ಲಿ ಅವರನ್ನು ನೋಡಲು, ಅವರ ಕವನ ವಾಚನ ಕೇಳಲು ಸಿಕ್ಕ ಅವಕಾಶಗಳನ್ನು ನಾನು ಎಂದೂ ಕಳೆದುಕೊಳ್ಳುತ್ತಿರಲಿಲ್ಲ. ಮಡಿಕೇರಿ ಸಾಹಿತ್ಯ ಸಮ್ಮೇಳನ (1981)ದ ಸಂದರ್ಭದಲ್ಲಿ ನಾನು ಅವರೊಡನೆ ತೆಗೆಸಿಕೊಂಡ ಫೋಟೋದಲ್ಲಿ ಅವರು ನವ ಯುವಕರನ್ನೂ ಮೀರಿಸುವಂತಿದ್ದಾರೆ! ನಮ್ಮ ಮನೆಗೆ ಹಾಗೂ ನನ್ನ ಮಕ್ಕಳ ಮದುವೆಗೆ ಅವರು ಬಂದಾಗ ತೆಗೆಸಿರುವ ಫೋಟೋಗಳನ್ನು ನನ್ನ ಮಕ್ಕಳು, ಮೊಮ್ಮಕ್ಕಳು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡಿದ್ದಾರೆ.
ನನ್ನಂತಹ ಅನೇಕರಲ್ಲಿ ಸಾಹಿತ್ಯಾಭಿರುಚಿ ಬೆಳೆ ಯಲು ಪ್ರೊ|| ನಿಸಾರರು ಕಾರಣರಾಗಿದ್ದಾರೆ. ಅವರ ಸ್ಫೂರ್ತಿ-ಮಾರ್ಗದರ್ಶನ ಇಲ್ಲದಿದ್ದಲ್ಲಿ ಖಂಡಿತ ವಾಗಿಯೂ ಪದವಿ ತರಗತಿಯಲ್ಲಿ ಕನ್ನಡ ವಿಷಯ ವನ್ನು ಪ್ರಧಾನವಾಗಿ ಓದದ ನಾನು, ಅದನ್ನು ಬಾಹ್ಯ ವಿದ್ಯಾರ್ಥಿಯಾಗಿ ಅಭ್ಯಸಿಸಿ, ಸ್ನಾತಕೋತ್ತರ ಪದವಿ ಪಡೆದು ಕನ್ನಡದ ಮೇಸ್ಟ್ರಾಗಿ ಪರಿವರ್ತನೆ ಹೊಂದುತ್ತಿರಲಿಲ್ಲ. ನನ್ನ ಮೇಲಿನ ಪ್ರೊ|| ನಿಸಾರರ ಶಿಷ್ಯ ವಾತ್ಸಲ್ಯದ ಹರವು ಅಗಾಧ. ಸಿಕ್ಕಾಗಲೆಲ್ಲ, ‘ವಿದ್ಯಾರ್ಥಿ ಮಿತ್ರಾ, ಹೇಗಿದ್ದೀಯಪ್ಪಾ?’ ಎಂದು ಹೆಗಲ ಮೇಲೆ ಕೈ ಹಾಕಿ ಮಾತಿಗಾರಂಭಿಸಿ ನನ್ನ ಸ್ನೇಹಿತರ ಹಾಗೂ ನನ್ನ ಕುಟುಂಬದ ಸದಸ್ಯರೆಲ್ಲರ ಹೆಸರು ಹೇಳಿ ಅವರ ಕುಶಲ ವಿಚಾರಿಸಿದಾಗಲೇ ಅವರಿಗೆ ತೃಪ್ತಿ. ಪ್ರೊ|| ಗುರಪ್ಪನವರೊಡನೆ ನಮ್ಮ ನೆಂಟಸ್ತನವಾದ ಮೇಲೆ ನಿಸಾರರಿಗೆ ನನ್ನ ಕುಟುಂಬದ ಎಲ್ಲಾ ಸದಸ್ಯರ ನಿಕಟ ಪರಿಚಯ ಅವರಿಗೆ ಉಂಟಾಗಿತ್ತು. ಅವರು ಭಾಗವಹಿಸುವ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳು ತಪ್ಪದೇ ನನಗೆ ಬರುತ್ತಿದ್ದವು.
ಸಭೆ – ಸಮಾರಂಭಗಳಿಗೆ ನಾನು ನೀಡುತ್ತಿದ್ದ ಆಹ್ವಾನವನ್ನು ಮೊದಮೊದಲು ನಯವಾಗಿ ನಿರಾಕ ರಿಸುತ್ತಿದ್ದ ಅವರು, ನನ್ನ ಒತ್ತಾಯಕ್ಕೆ ಮಣಿದು ಕೊನೆಗೆ ಒಪ್ಪಿಕೊಳ್ಳುತ್ತಿದ್ದರು. ಅಥವಾ ನಾನು ಅವ ರನ್ನು ಒಪ್ಪಿಸದೇ ಬಿಡುತ್ತಿರಲಿಲ್ಲ ಎನ್ನುವುದೇ ಹೆಚ್ಚು ಸೂಕ್ತ! ಅವರು 1979 ರಲ್ಲಿ ಸಿರಿಗೆರೆಯಲ್ಲಿ ನಡೆದ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಪಟ್ಟಾಭಿ ಷೇಕದ ಸಂದರ್ಭದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರಲ್ಲದೆ, ಚನ್ನಗಿರಿಯಲ್ಲಿ 1992 ರಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋ ತ್ಸವ, ಬೆಂಗಳೂರು ತರಳಬಾಳು ಕೇಂದ್ರದಲ್ಲಿ ನಡೆದ ಬೆಳದಿಂಗಳ ಕವಿಗೋಷ್ಠಿ ಮುಂತಾದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿದ್ದಾರೆ.
ಪ್ರೊ|| ನಿಸಾರರು ನನ್ನ ಸಾಹಿತ್ಯ ಕೃತಿಗಳ ಪ್ರಕ ಟಣೆಗೆ ಬೆನ್ನುಲುಬಾದವರು. ಅವರ ಪ್ರೋತ್ಸಾಹ-ಮಾರ್ಗದರ್ಶನವಿಲ್ಲದಿದ್ದರೆ ನನ್ನ ಅನುವಾದಿತ ಕಾದಂಬರಿ ‘ಟಿಪ್ಪು ಸುಲ್ತಾನನ ಖಡ್ಗ’ (Sword of Tippu Sultan-1990) ಖಂಡಿತವಾಗಿಯೂ ಬೆಳಕು ಕಾಣುತ್ತಿರಲಿಲ್ಲ. ಅದಕ್ಕೆ ನಿಸಾರರು ಬರೆದಿರುವ ಮುನ್ನುಡಿ ಅತ್ಯಂತ ಮೌಲಿಕವಾದುದು. (ಇದನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ – ಲೇಖಕ ಡಾ|| ರಹಮತ್ ತರೀಕೆರೆ, ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ಬಳಸಿಕೊಂಡಿ ರುವ ನೆನಪು.) ವಿರೋಧದ ನಡುವೆಯೂ ಈ ಪುಸ್ತಕವನ್ನು ಪ್ರಕಟಿಸಿದ ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಗಳವರ ಸಮ್ಮುಖದಲ್ಲಿ ದಿನಾಂಕ: 29.11.1990 ರಂದು ಬೆಂಗಳೂರಿನ ‘ಯವನಿಕಾ’ ಸಭಾಂಗಣದಲ್ಲಿ ನಿಸಾರರು ಇದನ್ನು ಬಿಡುಗಡೆ ಮಾಡಿದ್ದು ಸ್ಮರ ಣೀಯ. ಅದೇ ವೇದಿಕೆಯಲ್ಲೇ ಅವರು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ದೈನಿಕ ಧಾರಾವಾಹಿಯಾಗಿ ಪ್ರಕಟಗೊಂಡಿದ್ದ, ರಾಷ್ಟ್ರ ಪ್ರಶಸ್ತಿ ವಿಜೇತ ಬಂಗಾಳಿ ಚಲನಚಿತ್ರದ ಮೂಲ ಕಥೆ ‘ಪ್ರತಿದ್ವಂದಿ’ಯ ನನ್ನ ಕನ್ನಡಾನುವಾದವನ್ನು ದಿ.13.5.1986 ರಂದು ಲೋಕಾರ್ಪಣೆ ಮಾಡಿದ್ದರು.
ನಿಸಾರರ ಕಾವ್ಯಾಭಿಮಾನಿಗಳಾದ ಶ್ರೀ ತರಳಬಾಳು ಜಗದ್ಗುರುಗಳವರು ಪ್ರೊ|| ನಿಸಾರರ ಮಹತ್ವಾಕಾಂಕ್ಷಿ ಕೃತಿ ‘ಸಮಗ್ರ ಕವಿತೆಗಳು’ ಅನ್ನು ಪ್ರಕಟಿಸಿದ್ದಕ್ಕಾಗಿ (1991) ಶ್ರೀಗಳವರನ್ನು ಕೃತಜ್ಞತೆಯಿಂದ ನೆನೆಯುತ್ತಿದ್ದರು. ಈ ಗ್ರಂಥವು ಶ್ರೀ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ಧೂರಿಯಾಗಿ ಬಿಡಗಡೆಗೊಂಡಿತ್ತು.
ಆರು ದಶಕಗಳ ಕಾಲ ಸಾಹಿತ್ಯ ಸಾಗರದ ರಸಯಾನ ಕೈಗೊಂಡ ಈ ಧೀಮಂತ ಕವಿ ಚೇತನಕ್ಕೆ ಅವರ ಅಸಂಖ್ಯಾತ ಅಭಿಮಾನಿಗಳು ಹಾಗೂ ಶಿಷ್ಯವರ್ಗದಿಂದ ಸಂದಿರುವ ಗೌರವ-ಅಭಿನಂದನೆ ಅಪಾರ; ಪ್ರೊ|| ನಿಸಾರರಿಗೆ ಅರ್ಪಣೆಯಾದ ಸಂಭಾವನಾ ಗ್ರಂಥಗಳಲ್ಲಿ ಬಹು ಮುಖ್ಯವಾದವು ಗಳೆಂದರೆ 2006 ರಲ್ಲಿ ಹೊರಬಂದ ‘ನಿಸಾರ್, ನಿಮಗಿದೋ ನಮನ’ ಹಾಗೂ 2017 ರ ‘81 ರ ಹಾದಿಯಲ್ಲಿ ನಿಸಾರ್-ಸಾರಸ್ವತ ಸಿರಿ’. ಗುಣ-ಗಾತ್ರಗಳೆರಡರಲ್ಲಿಯೂ ಬೃಹತ್ತಾಗಿರುವ ಈ ಚಾರಿ ತ್ರಿಕ ಸಂಭಾವನಾ ಗ್ರಂಥಗಳು ಈ ಕ್ಷೇತ್ರದ ಅತ್ಯಂತ ವಿಶಿಷ್ಟ ಕೃತಿಗಳೆನಿಸಿವೆ. ಇಬ್ಬರು ವಿದ್ವಾಂಸರು ಇವರ ಸಾಹಿತ್ಯಾಧ್ಯಯನ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕೆಂಪೇ ಗೌಡ ಪ್ರಶಸ್ತಿ, ಮುಂತಾದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತರಾಗಿರುವ ನಾಡೋಜ ಪ್ರೊ|| ನಿಸಾರರು ಕನ್ನಡಿಗರಿಗೆ ನಿತ್ಯ ನೆನಪಾಗುವ ನಲ್ಮೆಯ ಕವಿಗಳು.
ಅವರ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ಭ್ರಾತೃತ್ವ, ಭಾವೈಕ್ಯತೆ, ಪ್ರೇಮ, ಅನುಕಂಪ ಮುಂ ತಾದ ಜೀವಪರ ಕಾಳಜಿಗಳ ಅನುಷ್ಠಾನವೇ ಕನ್ನಡಿ ಗರು ಅವರಿಗೆ ಸಲ್ಲಿಸಬೇಕಾದ ಪ್ರೀತಿಯ ಗೌರವ.


ಪ್ರೊ|| ಎಸ್.ಬಿ. ರಂಗನಾಥ್
ನಿವೃತ್ತ ಪ್ರಾಂಶುಪಾಲರು, ದಾವಣಗೆರೆ.
94800-93858

Leave a Reply

Your email address will not be published.