ಕೊರೊನಾ: ಸಹಜ ಸ್ಥಿತಿಯತ್ತ ನಗರ ವ್ಯಾಪಾರ

ಕೊರೊನಾ: ಸಹಜ ಸ್ಥಿತಿಯತ್ತ ನಗರ ವ್ಯಾಪಾರ

ದಾವಣಗೆರೆ, ಮೇ 15- ಕಳೆದ ಹಲವು ದಿನಗಳಿಂದ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯ ಹೊರತಾಗಿಯೂ ದಾವಣಗೆರೆಯ ಆರ್ಥಿಕ ಚಟುವಟಿಕೆಗಳು ಬಹುತೇಕ  ಸಹಜ ಸ್ಥಿತಿಗೆ ಮರಳಿವೆ. 

ವ್ಯವಹಾರಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದ ಎರಡು ದಿನಗಳ ಕಾಲ ವ್ಯಾಪಾರಸ್ಥರಲ್ಲಿ ತುಸು ಗೊಂದಲವಿತ್ತು. ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಸ್ವಯಂ ಘೋಷಣೆ ಪತ್ರವನ್ನು ಆನ್ ಲೈನ್ ಮೂಲಕ ಪಡೆಯಬಹುದು ಎಂದು ಹೇಳಿಕೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದರು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಕೆಲ ವ್ಯಾಪಾರಸ್ಥರು ಅಂಡಿಗಳನ್ನು ತೆರೆದು ವಹಿವಾಟು ಆರಂಭಿಸಿದ್ದಾರೆ. ಆದರೆ ಗ್ರಾಮೀಣ ಪ್ರದೇಶದ ಜನರು  ಹೆಚ್ಚಾಗಿ ನಗರದೆಡೆ ಬಾರದ ಕಾರಣ ಜನಸಂದಣಿ ಕಡಿಮೆ ಇತ್ತು.

ಇನ್ನು ಕೆಲ ಬಟ್ಟೆ ಅಂಗಡಿ ಮಾಲೀಕರು, ಚಿನ್ನ ಬೆಳ್ಳಿ ವರ್ತಕರು ಮೇ 17ರ ನಂತರ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾದು ನೋಡಿ, ನಂತರವಷ್ಟೇ ಅಂಗಡಿ ತೆರೆಯುವ ತೀರ್ಮಾನ ಮಾಡಿದ್ದಾರೆ.

ಅಂಗಡಿ ತೆರೆಯಲು ಚಿನ್ನ-ಬೆಳ್ಳಿ ವರ್ತಕರ ಹಿಂದೇಟು:  ಕೆಲ ಬೃಹತ್ ಷೋ ರೂಂಗಳನ್ನು ಹೊರತು ಪಡಿಸಿ ಸ್ಥಳೀಯ ಚಿನ್ನ, ಬೆಳ್ಳಿ ವರ್ತಕರು ಅಂಗಡಿಗಳನ್ನು ತೆರೆಯಲು ಹಿಂದೇಟು ಹಾಕಿದ್ದಾರೆ.

ಕಾರ್ಮಿಕರ ಕೊರತೆ, ಸ್ವಯಂ ಘೋಷಣೆ ಯಲ್ಲಿರುವ ನಿಯಮಗಳು ಅಂಗಡಿ ತೆರೆಯದಿರಲು ಕಾರಣಗಳಾದರೆ, ಚಿನ್ನ, ಬೆಳ್ಳಿ ಖರೀದಿಗೆ ಬರುವ ಗ್ರಾಹಕರಿಂದ ಕೊರೊನಾ ನಿಯಂತ್ರಣ ಕಷ್ಟವಾಗ ಬಹುದು ಎಂಬುದೂ ಪ್ರಮುಖ ಕಾರಣವಾಗಿದೆ. 

ಸಾಮಾನ್ಯವಾಗಿ ಗ್ರಾಹಕ ಬಂಗಾರ ಅಥವಾ ಬೆಳ್ಳಿ ಆಭರಣಗಳನ್ನು ಕೈ ಸ್ಪರ್ಷದಿಂದಲೇ ಗಮನಿಸಿ ಆಯ್ಕೆ ಮಾಡಿಕೊಳ್ಳಬೇಕು. ಫೋಟೋ ಅಥವಾ ದೂರದಿಂದ ವಸ್ತುಗಳನ್ನು ತೋರಿಸಿ ಗ್ರಾಹಕರನ್ನು ತೃಪ್ತಿಪಡಿಸಲಾಗದು. ಈ ವೇಳೆ ವಸ್ತುಗಳನ್ನು ಮುಟ್ಟಿದ ಗ್ರಾಹಕನಿಗೆ ಸೋಂಕಿದ್ದರೆ ಹೇಗೆ ಎಂಬ ಭಯ ಮಾಲೀಕರನ್ನು ಕಾಡುತ್ತಿದೆ.

ಚಿನ್ನದ ಮೇಲೆ ಸೋಂಕು ಕನಿಷ್ಟ ಮೂರು ತಾಸು ಇರುತ್ತದೆ ಎಂಬ ಸುದ್ದಿ ಈಗಾಗಲೇ ಸಾಮಾ ಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ. ಆದ್ದರಿಂದ ಸೋಂಕು ನಿವಾರಿಸಲು ಸಾಮಾನ್ಯ ವಸ್ತುಗಳಾದರೆ ಔಷಧಿ ಸಿಂಪರಣೆ ಮಾಡಬಹುದು. ಆದರೆ ಚಿನ್ನ ಬೆಳ್ಳಿ ವಸ್ತುಗಳಿಗೆ ಔಷಧಿ ಸಿಂಪಡಿಸಲಾಗದು. ಅವು ಹೊಳಪು ಕಳೆದುಕೊಂಡು ಗುಣಮಟ್ಟ ಹಾಳಾಗುತ್ತದೆ ಎಂಬ ಅನಿಸಿಕೆಯನ್ನೂ ಕೆಲ ವ್ಯಾಪಾರಸ್ಥರು ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಮೇ 17ರ ನಂತರ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳು ತ್ತದೇಯೋ ಅದರ ಮೇಲೆ ಇದೀಗ ಆಭರಣದ ವರ್ತಕರ ವ್ಯಾಪಾರ ಅವಲಂಬಿತವಾಗಿದೆ.