ಸರಳ ರಂಜಾನ್‌ಗೆ ತೀರ್ಮಾನ

ಸರಳ ರಂಜಾನ್‌ಗೆ ತೀರ್ಮಾನ

ಪ್ರತಿ ವರ್ಷ ದಾವಣಗೆರೆಯ ಮೀನಾ ಬಜಾರ್‌ನಲ್ಲಿ ಕಿಕ್ಕಿರಿದ ಜನಜಂಗುಳಿ


ಅಲ್ಪಸಂಖ್ಯಾತರ ಹೆಡ್‌ ಕ್ವಾರ್ಟರ್‌ ಎಂದೇ ಪರಿಗಣಿಸಲಾಗಿರುವ ಈ ಪ್ರದೇಶದಲ್ಲಿ ಸಂತೋಷ, ಸಂಭ್ರಮ ಎಂಬ ಪದ ಮರೆಮಾಚಿ ಹೋಗಿದೆ. ಅಷ್ಟೇ ಅಲ್ಲದೆ ಹಬ್ಬದ `ಖುಷಿ’ ಕೂಡ ಎಲ್ಲೂ ಕಂಡುಬಂದಿಲ್ಲ. ಸಾಮಾನ್ಯವಾಗಿ ಚಂದ್ರದರ್ಶನದಿಂದ ಪವಿತ್ರ ವ್ರತ (ರೋಜಾ) ಆಚರಣೆಯಲ್ಲಿರುವ ಮುಸ್ಲಿಂ ಬಾಂಧ ವರಲ್ಲಿ ಈ ಬಾರಿ ಅಂತಹ ಚಾರ್ಮ್‌ನಲ್ಲಿ ಇಲ್ಲ.

ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್‌ ಸಮಸ್ಯೆ ಎದುರಿಸುತ್ತಿರುವ ನಾವುಗಳು ಎರಡೊತ್ತಿನ ಗಂಜಿಗೂ ಸಹ ಪರದಾಡುವಂತಹ ಸ್ಥಿತಿಯಲ್ಲಿದ್ದೇವೆ. ಆದರೂ ಭಗವಂತನ ಕೃಪೆ ಅವನ ಧ್ಯಾನದಲ್ಲಿ ದಿನ ಕಳೆಯುತ್ತಿದ್ದೇವೆ ಎನ್ನುತ್ತಾರೆ ಷಬ್ಬೀರ್ ಅವರು. ಆದರೂ ಸಮಾಜದ ತೀರ್ಮಾನ ಧರ್ಮ ಗುರುಗಳ ಆದೇಶಗಳನ್ನು ನಾವುಗಳು ಪಾಲಿಸಲೇ ಬೇಕಲ್ಲ. ಹಾಗಾಗಿ ಈ ಬಾರಿ ವಿಜೃಂಭಣೆ ಇಲ್ಲ. ಸಾಧಾರಣ ವಾಗಿ ಹಬ್ಬ ಆಚರಿಸುತ್ತೇವೆ ಎನ್ನುತ್ತಾರೆ.

ಕಳೆದ ಎರಡೂವರೆ ತಿಂಗಳಿನಿಂದ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ. ರಂಜಾನ್‌ನಲ್ಲಿ ಖುರಾನ್ ಪ್ರವಚನ ಇಲ್ಲ, ಶುಕ್ರವಾರದ ಪ್ರಾರ್ಥನೆ ಗಳಿಲ್ಲ. ಇಡೀ ದೇಶದಲ್ಲಿ ಕೊರೊನಾ ಸೋಂಕಿನ ಭೀತಿ. ಇಂತಹ ಸಂದರ್ಭದಲ್ಲಿ ಹೊಸ ಹೊಸ ಬಟ್ಟೆಗಳನ್ನು ಧರಿಸಿಕೊಂಡು ಸಂತೋಷ-ಸಂಭ್ರಮ ಆಚರಿಸಿದರೆ ಸಾಲದು. ಬದಲಾಗಿ ಬಡವರ ನೋವುಗಳಿಗೆ ಸ್ಪಂದಿಸಿ ಅಲ್ಹಾನು ಮೆಚ್ಚುವಂತಹ ಕಾರ್ಯ ಮಾಡಲು ನಾವುಗಳು ಮುಂದಾಗಬೇಕೆಂದು ಮಸ್‌ಜಿದ್‌-ಎ-ಆಜಾಂನ ಪೇಶ್‌ ಇಮಾಂ ಗುಲಾಮ್ ರಬ್ಬಾನಿ ರಜವಿ ಅವರು ಮುಸ್ಲಿಂ ಬಾಂಧವರಿಗೆ ತಮ್ಮ ಸಂದೇಶವನ್ನು ರವಾನಿಸಿದ್ದಾರೆ.

 

 

ಬಿಕೋ ಎನ್ನುತ್ತಿರುವ ಮೀನಾ ಬಜಾರ್ ರಸ್ತೆ

ಪ್ರಸ್ತುತ ಸಂದಿಗ್ಧ ಪರಿಸ್ಥಿತಿಯಲ್ಲಿ ದಿನ ಕಳೆಯುತ್ತಿರುವ ನಾವುಗಳು ರಂಜಾನ್‌ ಹಬ್ಬದ ಖುಷಿಯನ್ನು ಕಾಣಬೇ ಕಾದರೆ ಬಡವರಿಗೆ, ನಿರ್ಗತಿಕರಿಗೆ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಅವರ ಸಮಸ್ಯೆಗೆ ಸ್ಪಂದಿಸಿ ಧೈರ್ಯ ನೀಡುವುದರ ಜೊತೆಗೆ ಆರ್ಥಿಕ ಸದೃಢತೆ ಹೊಂದಿರು ವವರು ತಮ್ಮ ಜಕಾತ್ ಹಾಗೂ ಫಿತ್ರಾದ ಹಣವನ್ನು ಅವರು ಗಳಿಗೆ ನೀಡಿ ಅವರನ್ನು ಸಂತೋಷಪಡಿಸಿ ಆಗ ಅಲ್ಹಾನು ಖುಷಿ ಪಡುತ್ತಾನೆ, ನಮ್ಮ ಜೀವನವು ಉಜ್ವಲವಾಗುತ್ತದೆ ಎಂದು ಸಲಹೆ ನೀಡಿದ ರಬ್ಬಾನಿ ಅವರು ಹೊಸ ಬಟ್ಟೆ ಖರೀದಿಸಬೇಡಿ, ಸಂಭ್ರಮದ ಆಚರಣೆ ಬೇಡ ಎಂದು ಹೇಳಿದ್ದು, ದೇಶದ ಸಮಸ್ತ ಮುಸ್ಲಿಂ ಬಾಂಧವರು ಈ ಬಾರಿ ಸರಳ ರೀತಿಯಲ್ಲಿ ಹಬ್ಬ ಆಚರಿಸಬೇಕೆಂದು ಕರೆ ನೀಡಿದರು.

ಮಂಕಾದ `ಮೀನಾ ಬಜಾರ್’! : ರಂಜಾನ್‌ ಹಬ್ಬದ ಖುಷಿಯನ್ನೇ ಆವರಿಸಿಕೊಳ್ಳುತ್ತಿದ್ದ `ಮೀನಾ ಬಜಾರ್‌’ನಲ್ಲಿ ಈ ಬಾರಿ ಮಂಕು ಕವಿದ ವಾತಾವರಣ ನಿರ್ಮಾಣಗೊಂಡಿದೆ. ಚಂದ್ರ ದರ್ಶನದ ದಿನದಿಂದ ಹಂತ ಹಂತವಾಗಿ ರಂಗು ನೀಡುತ್ತಿದ್ದ `ಮೀನಾ ಬಜಾರ್‌’ಗೆ ಈ ಬಾರಿ ಕೊರೊನಾ ಎಂಬ ಸಿಡಿಲಿನಿಂದ ಇಡೀ ಪ್ರದೇಶದಲ್ಲಿ ಕತ್ತಲೆಯ ಕಾರ್ಮೋಡ ಆವರಿಸಿದೆ.

ಒಂದೆಡೆ ಲಾಕ್‌ಡೌನ್‌, ಮತ್ತೊಂದೆಡೆ ಸೀಲ್‌ಡೌನ್‌ ಇವೆರಡರ ಮಧ್ಯೆ ಜನರ ಜೀವನದ ಜಂಜಾಟ ಝಂಗ್, (ಯುದ್ಧ) ಸಾಮಾನ್ಯವಾಗಿದೆ. ಬಡ ವರ್ಗದ ಜನರಿಗೆ ವರದಾನವಾಗಿ ಪರಿಣಮಿಸಿದ್ದ ಈ `ಮೀನಾ ಬಜಾರ್‌’ನಲ್ಲಿ ಈ ಬಾರಿ ಕನಿಷ್ಠ ಹಬ್ಬಕ್ಕೆ ಬೇಕಾದ ಸಾಮಗ್ರಿಗಳು ಸಿಗುವುದು ಕಷ್ಟವಾಗಿದೆ.

ರಂಜಾನ್‌ ಹಬ್ಬದ ವಿಶೇಷವೆಂದರೆ `ಕ್ಷೀರ ಖುರ್ಮಾ’ ಶ್ಯಾವಿಗೆ ಸಿಹಿಯೂಟ. ಎಲ್ಲಿಲ್ಲದ ಬೇಡಿಕೆ ಕಂಡಿದ್ದ ಹೈದ್ರಾಬಾದ್‌ ಶ್ಯಾವಿಗೆ ಈ ಬಾರಿ ಲಭ್ಯವಿಲ್ಲ. ಏಕೆಂದರೆ ವಾಹನ ಸಾಗಾಟ ಇಲ್ಲದ ಕಾರಣ ಇಲ್ಲಿಯವರೆಗೂ ಶ್ಯಾವಿಗೆ ಸಿಗುತ್ತಿಲ್ಲ. ಇದರ ಜೊತೆಗೆ ಮೆಹಂದಿ, ಚಿಕ್ಫಾ, ಅತ್ತಾರ್‌ (ಸೆಂಟ್‌) ಸುರ್ಮಾ, ಖರ್ಚೀಫ್‌, ಭೋಟಿ ಎಲ್ಲಿಯೂ ಸಹ ಕಾಣುತ್ತಿಲ್ಲ. `ರಸ್ತೆ ಕಾ ಮಾಲ್‌ ಸಸ್ತೆ ವೋ’ ಎಂಬ ಘೋಷಣೆಯ ಧ್ವನಿಯೂ ಕೂಡ ಇಲ್ಲಿ ಕೇಳುತ್ತಿಲ್ಲ.

ದಿನಂಪ್ರತಿ ಒಂದಲ್ಲಾ ಒಂದು ಸಮಸ್ಯೆಯನ್ನು ಎದುರಿಸುತ್ತಿರುವ ಈ ಭಾಗದ ಜನರಿಗೆ ಸಂತೋಷ ವೆಂಬುದು ಮರೀಚಿಕೆಯಾಗಿದೆ. ಇದರ ನಡುವೆಯೂ ಜೀವನದ ಸಂಘರ್ಷದೊಂದಿಗೆ ಹೋರಾಟ ಮಾಡುತ್ತಿರುವ ಈ ಭಾಗದ ಜನರಿಗೆ ಆದಷ್ಟು ಬೇಗ ಮೂಲಭೂತ ಸೌಕರ್ಯ ಬೇಕಾಗಿದೆ ಎನ್ನುತ್ತಾರೆ ಮುಖಂಡರೊಬ್ಬರು. ಹಬ್ಬಗಳಲ್ಲಿಯೇ ಬಹಳ ಪ್ರಾಮುಖ್ಯತೆ ಹೊಂದಿರುವ ರಂಜಾನ್‌ ಹಬ್ಬದ ಖುಷಿಗಳನ್ನು ಖುರ್ಬಾನಿ ಮಾಡಿರುವ ನಮ್ಮ ಸಮುದಾಯದಲ್ಲಿ ಈ ರಂಜಾನ್‌ ತಿಂಗಳಲ್ಲಿ ತಾಳ್ಮೆ ಬಹಳ ಪ್ರಾಮುಖ್ಯತೆ ಪಡೆದಿರುತ್ತದೆ. ನಮಾಜ್‌, ರೋಜಾ, ಜಕಾತ್, ಫಿತ್ರಾ, ನಮ್ಮ ಮೇಲೆ ಭಗವಂತನ ಸಾಲ ಹೀಗಾಗಿ ಈ ತಿಂಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ ಗುರುತಿಸಿ ದಾನ, ಧರ್ಮ ಮಾಡಲು ಎಲ್ಲರೂ ಸನ್ನದ್ಧರಾಗಿರುತ್ತಾರೆ ಎಂದು ಹೇಳಿ ಸಮಸ್ತ ಬಾಂಧವರಿಗೆ ಸುಖ, ಶಾಂತಿ, ಸಮೃದ್ಧಿ ನೀಡಲಿ ಎಂದು ಆಶಿಸಿದರು.

ಈ ಬಾರಿ `ಫಿತ್ರಾ’ 80 ರೂ. : ರಂಜಾನ್‌ ಹಬ್ಬದ ಪ್ರಮುಖ ಎರಡು ಅಂಶಗಳಲ್ಲಿ ಒಂದಾದ `ಫಿತ್ರಾ’ ಜೀವದ ತೆರಿಗೆ ಈ ಬಾರಿ 80 ರೂಪಾಯಿಗಳನ್ನು ನಿಗದಿಗೊಳಿಸಲಾಗಿದೆ ಎಂದು ನೂರಾನಿ ಮಸೀದಿಯ ಮೌಲಾನಾ ಮುಜಹರ್ ಉಲ್‌ಹಕ್‌ ತಿಳಿಸಿದರು.

ಆಸ್ತಿ, ಒಡವೆ, ಆದಾಯದ ಮೇಲೆ ತೆಗೆಯುವ ಜಕಾತ್ ಹಣ ಹಾಗೂ ಜೀವದ ಮೇಲೆ ತೆಗೆಯುವ ಫಿತ್ರಾ ಹಣವನ್ನು ಮದ್ರಸಾ ಹಾಗೂ ದಾರುಲ್ ಉಲೇಂಗಳಿಗೆ ಸೀಮಿತ. ಆದರೆ ಪ್ರಸ್ತುತ ಪರಿಸ್ಥಿತಿ ನೋಡಿದರೆ ಬಡವರಿಗೆ, ನಿರ್ಗತಿಕರಿಗೆ ಆಹಾರ ಸಾಮಗ್ರಿ ಕಿಟ್‌ಗಳನ್ನು ನೀಡುವ ಮೂಲಕ ಸಹಕರಿಸಿದರೆ ಸೂಕ್ತ. ಇದರ ನಡುವೆ ವ್ಯಾಸಂಗ ಪಡೆಯುತ್ತಿರುವ ದಾರುಲ್ ಉಲೇಂಗಳಿಗೂ ಸಹ ನೀಡಬಹುದು ಎಂದು ಹೇಳಿದರು.


ಬಿ.ಸಿಕಂದರ್
ಮೊ : 9844404920